ಕಾಬೂಲ್: ಇತ್ತೀಚೆಗೆ ಅಷ್ಟೇ ಕನ್ನಡಿಗ ದೊಡ್ಡ ಗಣೇಶ್ ಅವರು ಕೀನ್ಯಾ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿ ಸುದ್ದಿಯಾಗಿದ್ದರು. ಇದೀಗ ಮತ್ತೊಬ್ಬ ಭಾರತೀಯನ ಸರದಿ. ಅಫ್ಘಾನಿಸ್ತಾನ (Afghanistan) ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ಟೀಂ ಇಂಡಿಯಾದ ಮಾಜಿ ಕೋಚ್ ಆರ್.ಶ್ರೀಧರ್ (R.Shirdhar) ನೇಮಕವಾಗಿದ್ದಾರೆ.
ರವಿ ಶಾಸ್ತ್ರಿ ಅವರು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ವೇಳೆ ಆರ್.ಶ್ರೀಧರ್ ಅವರು ಫೀಲ್ಡಿಂಗ್ ಕೋಚ್ ಆಗಿ ಕೆಲಸ ಮಾಡಿದ್ದರು. ಇದೀಗ 54 ವರ್ಷದ ಶ್ರೀಧರ್ ಅವರು ಅಫ್ಘಾನಿಸ್ಥಾನ ತಂಡದ ಕೋಚಿಂಗ್ ಮಂಡಳಿಗೆ ಸೇರಿದ್ದಾರೆ.
ಆರ್. ಶ್ರೀಧರ್ ಅವರು ನ್ಯೂಜಿಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕೈಕ ಸರಣಿಗಾಗಿ ತಂಡವನ್ನು ಸೇರಿಕೊಳ್ಳುತ್ತಾರೆ.
ಮಾಜಿ ಲೆಗ್ ಸ್ಪಿನ್ನರ್ ಶ್ರೀಧರ್ ಅವರು 2008ರಿಂದ 2014ರವರೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸಹಾಯಕ ಫೀಲ್ಡಿಂಗ್ ಕೋಚ್ ಮತ್ತು ಸ್ಪಿನ್ ಕೋಚ್ ಆಗಿದ್ದರು. 2014ರ ಭಾರತದ ಅಂಡರ್ 19 ವಿಶ್ವಕಪ್ ತಂಡದ ಕೋಚ್ ಆಗಿದ್ದರು. ಬಳಿಕ ರವಿ ಶಾಸ್ತ್ರಿ ಅಡಿಯಲ್ಲಿ 2021ರ ಟಿ20 ವಿಶ್ವಕಪ್ ತನಕ ಭಾರತ ತಂಡದ ಸಹಾಯಕ ಕೋಚ್ ಆಗಿದ್ದರು. ಅವರು ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿಯು ಕೆಲಸ ಮಾಡಿದ್ದಾರೆ.
ಅಫ್ಘಾನಿಸ್ತಾನದ ತಂಡದಲ್ಲಿ, ಶ್ರೀಧರ್ ಅವರು ಸೆಪ್ಟೆಂಬರ್ 9 ರಿಂದ ನೋಯ್ಡಾದಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಆಡುವಾಗ ಮುಖ್ಯ ಕೋಚ್ ಜೊನಾಥನ್ ಟ್ರಾಟ್ ಅವರ ಅಡಿಯಲ್ಲಿ ಕೆಲಸ ಮಾಡುತ್ತಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಏಕದಿನ ಪಂದ್ಯಗಳು ಸೆಪ್ಟೆಂಬರ್ 18 ರಿಂದ ಶಾರ್ಜಾದಲ್ಲಿ ನಡೆಯಲಿವೆ.