Advertisement
ಸೋಮವಾರ ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರೊಂದಿಗೆ ಸೆಲೆಬ್ರೆಟಿಗಳೂ ಹಕ್ಕು ಚಲಾಯಿಸಿದರು. ಆದರೆ, ಸಹಜವಾಗಿ ಚುನಾವಣೆಗಳ ವೇಳೆ ಕಂಡುಬರುವ ಉತ್ಸಾಹ ಕ್ಷೇತ್ರದ ಮತದಾರರಲ್ಲಿ ಕಾಣಲಿಲ್ಲ.
Related Articles
Advertisement
ಸದ್ದು ಮಾಡಿದ ವಂದತಿಗಳು: ಮತದಾನ ಹಿನ್ನೆಲೆಯಲ್ಲಿ ಸೋಮವಾರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ವಿರುದ್ಧ ಎಲ್ಲ ಪಕ್ಷಗಳ ವಿರುದ್ಧ ವಂದತಿಗಳು ಹರಿದಾಡಿದ್ದು, ಎಲ್ಲ ಪಕ್ಷಗಳ ಅಭ್ಯರ್ಥಿಗಳೊಂದಿಗೆ ಮತದಾರರು ಸಹ ಗೊಂದಲಕ್ಕೀಡು ಮಾಡಿದವು. ಗುರುತಿನ ಚೀಟಿ ಪ್ರಕರಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನರನ್ನು ಬಂಧಿಸಲಾಗಿದೆ ಎಂಬ ವದಂತಿ ಹರಿದಾಡಿತ್ತು. ಆ ಹಿನ್ನೆಲೆಯಲ್ಲಿ ಮುನಿರತ್ನ ಅವರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಜ್ಞಾನಭಾರತಿ ವಾರ್ಡ್‌ನಲ್ಲಿ ಕಾಣಿಸಿಕೊಂಡರು.
ಅದರ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬ ಮಾತುಗಳು ಕೇಳಿಬಂದರೆ, ಮತ್ತೂಂದಡೆ ಜೆಡಿಎಸ್‌ನ ರಾಮಚಂದ್ರ ಅವರು ಒಳ ಒಪ್ಪಂದ ಮಾಡಿಕೊಂಡು ಮತದಾನ ಮಾಡಿ ಮನೆಯಲ್ಲಿ ಸುಮ್ಮನೆ ಕುಳಿತಿದ್ದಾರೆ ಎನ್ನುವ ಮಾತುಗಳು ಹರಿದಾಡಿದವು.
ಕೈಕೊಟ್ಟ ಇವಿಎಂ: ಕ್ಷೇತ್ರದ ಚಾಮುಂಡೇಶ್ವರಿ ನಗರದ ಮತಗಟ್ಟೆಯಲ್ಲಿ ಬ್ಯಾಲೆಟ್ ಯುನಿಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವೃದ್ಧರು ಹಾಗೂ ಮಹಿಳೆಯರು ಬಿಸಿಲಿನಲ್ಲಿ ನಿಲ್ಲುವಂತಾಯಿತು. ಮತಯಂತ್ರ ಸರಿಪಡಿಸಿದ ನಂತರವೂ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಜನರಿಂದ ಟೀಕೆಗೆ ಗುರಿಯಾದ ಅಧಿಕಾರಿಗಳು ಯಂತ್ರಗಳನ್ನು ಸರಿಪಡಿಸಲು ಹೆಣಗಾಟ ನಡೆಸಿದರು.
ವೃದ್ಧರೇ ಹೆಚ್ಚು: ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಅವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ ಚಲಾಯಿಸಿದರೆ, ಯುವ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ನಿರಾಸಕ್ತಿ ತೋರಿದರು.
ರಾಕ್‌ಲೈನ್ ವಿರುದ್ಧ ಪ್ರತಿಭಟನೆ: ಲಗ್ಗೆರೆ ವಾರ್ಡ್‌ನ ಮುನೇಶ್ವರ ಬಡಾವಣೆಯ ಮತಗಟ್ಟೆ ಬಳಿ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮತಕೇಂದ್ರದಿಂದ 100 ಮೀಟರ್ ದೂರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಕಿದ್ದ ಟೇಬಲ್ ಬಳಿಗೆ ಬಂದ ರಾಕ್‌ಲೈನ್ ವೆಂಕಟೇಶ್ ಮತಗಟ್ಟೆಗಳಿಗೆ ತೆರಳುತ್ತಿದ್ದವರಿಗೆ “ಶಾಸಕರಾದ ಮುನಿರತ್ನ ಅವರು ಕಳೆದ ಐದು ವರ್ಷಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಹೀಗಾಗಿ ಮುನಿರತ್ನ ಅವರಿಗೆ ಮತ ನೀಡಿ’ ಎಂದು ಮನವಿ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ವಾರ್ಡ್‌ಗೆ ಸಂಬಂಧವಿಲ್ಲದವರು ಮತಗಟ್ಟೆ ಬಳಿ ಬಂದಿರುವುದು ಕಾನೂನು ಬಾಹಿರ ಎಂದು ಆಕ್ಷೇಪಿಸಿದ್ದು, ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವಿನ ಮಾತಿನ ಚಕಮಕಿಗೆ ಕಾರಣವಾಯಿತು.
ಈ ವೇಳೆ ಸ್ಥಳದಲ್ಲಿದ್ದ ಲಗ್ಗೆರೆ ವಾರ್ಡ್ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಹಾಗೂ ಕಾರ್ಯಕರ್ತರು ರಾಕ್‌ಲೈನ್ ವೆಂಕಟೇಶ್ ವಿರುದ್ಧ ಘೋಷಣೆ ಕೂಗಿ ಧರಣಿ ನಡೆಸಿದರು. ಕೆಲ ನಿಮಿಷಗಳ ನಂತರ ಮಧ್ಯ ಪ್ರವೇಶಿಸಿದ ಪೊಲೀಸರು ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪ್ರತಿಭಟನೆ ಕೈಬಿಡುವಂತೆ ಸೂಚಿಸಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ವೆಂಕಟೇಶ್ ಅಲ್ಲಿಂದ ಹೊರಟು ಹೋದರು. ಆನಂತರದಲ್ಲಿ ಪರಿಸ್ಥಿತಿ ತಿಳಿಯಾಯಿತು.