Advertisement

ಪಠ್ಯಕ್ರಮದಲ್ಲಿ ಬೌದ್ಧ ಧರ್ಮ ತೆಗೆದಿರುವುದು ಅಕ್ಷಮ್ಯ: ಧ್ರುವನಾರಾಯಣ

01:41 PM Feb 21, 2021 | Team Udayavani |

ಯಳಂದೂರು: 6ನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿ ಹೊಸ ಧರ್ಮಗಳ ಉದಯ ಅಧ್ಯಾಯದ ಪಠ್ಯದಲ್ಲಿದ್ದ ಬೌದ್ಧಧರ್ಮ ಪರಿಚಯದ ಕೆಲವು ಅಂಶಗಳನ್ನು ಬೋಧನೆ, ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸ ಬಾರದು ಎಂಬ ಸರ್ಕಾರದ ಸುತ್ತೋಲೆ, ಅಕ್ಷಮ್ಯ ಅಪರಾಧವಾಗಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಆರೋಪಿಸಿದರು.

Advertisement

ಅವರು ಈ ಬಗ್ಗೆ ಯರಿಯೂರು ಗ್ರಾಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೌದ್ಧ ಹಾಗೂ ಜೈನ ಧರ್ಮಗಳು ಭಾರತದ ಕಳಶ ಗಳಿದ್ದಂತೆ. ಪ್ರಧಾನಿ ನರೇಂದ್ರ ಮೋದಿವಿಶ್ವಸಂಸ್ಥೆಯ 74ನೇ ಸಮಾವೇಶದಲ್ಲಿ ಭಾಗವಹಿಸಿ ನಮ್ಮ ದೇಶ ಬುದ್ಧನನ್ನು ಕೊಟ್ಟಿದೆ, ಯುದ್ಧವನ್ನಲ್ಲ ಎಂಬ ಸಂದೇಶ ನೀಡಿದ್ದರು. ವಿದೇಶಗಳಿಗೆ ಹೋದಾಗ ಬುದ್ಧ ಇವರು ಬುದ್ಧನೊಂದಿಗೆಗುರುತಿಸಿಕೊಳ್ಳುತ್ತಾರೆ. ಆದರೆ, ತಮ್ಮದೇ ದೇಶದ ಪಠ್ಯದಿಂದ ಇದನ್ನು ಕೈಬಿಟ್ಟಿರುವುದು ಯಾವ ಪುರುಷಾರ್ಥಕ್ಕೆ. ಶಾಂತಿ, ಸಹಬಾಳ್ವೆ, ಸಹಿಷ್ಣುತೆಗೆ ಬೌದ್ಧ ಧರ್ಮದಿಂದ ಇಡೀ ಜಗತ್ತೆ ಪಾಠ ಕಲಿತಿದೆ. ಪಠ್ಯದಲ್ಲೂ ಆರ್‌ಎಸ್‌ಎಸ್‌ ಮನಸ್ಥಿತಿ ನುಸುಳಿದಂತೆ ಕಾಣುತ್ತಿದೆ ಎಂದರು.

ನಮ್ಮದು ಪ್ರಜಾಪ್ರಭುತ್ವ, ಜಾತ್ಯತೀಯ ರಾಷ್ಟ್ರವಾಗಿದ್ದು ಎಲ್ಲವನ್ನೂ ಸಮನಾಗಿ ಕಾಣುವ ಆಲೋಚನೆ ಸರ್ಕಾರಕ್ಕೆ ಇದ್ದಂತಿಲ್ಲ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಮೆಕಾಲೆ ಶಿಕ್ಷಣ ನೀತಿಯನ್ನು ವಿರೋಧಿಸುತ್ತಿರುವ ಇವರ ಮನಸ್ಥಿತಿ ಗುರುಕುಲ ಮಾದರಿಯನ್ನು ಮತ್ತೆ ಪರಿಚಯಿಸುವ ಹುನ್ನಾರಗಳು ನಡೆಯುತ್ತಿವೆ. ಪಠ್ಯದಿಂದ ಶಿಕ್ಷಣ ಇಲಾಖೆಯ ಈ ವಿಷಯವನ್ನು ಕೈಬಿಟ್ಟಿರುವುದು ಖಂಡನೀಯವಾಗಿದೆ. ಇದನ್ನು ಪಠ್ಯಕ್ಕೆ ಸೇರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನ ಗಳಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೃಷಿ ಕಾಲೇಜಿಗೆ 25 ಕೋಟಿ ರೂ. ಸ್ವಾಗತ: ಚಾಮರಾಜನಗರದಲ್ಲಿ ಕಳೆದ 3 ವರ್ಷಗಳ ಹಿಂದೆ ಕೃಷಿ ಕಾಲೇಜಿಗೆ 75 ಎಕರೆ ಜಮೀನು ಮಂಜೂರಾಗಿತ್ತು. ಈಗ ರಾಜ್ಯ ಸರ್ಕಾರ ಇದಕ್ಕೆ 25 ಕೋಟಿ ರೂ. ಬಿಡುಗಡೆ ಮಾಡಿದ್ದು ಇದಕ್ಕೆ ನಾನು ವೈಯುಕ್ತಿಕವಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದರೊಂದಿಗೆ ಜಿಲ್ಲೆಯಲ್ಲಿ ಕಾನೂನು ಕಾಲೇಜಿನ ಕಟ್ಟಡ ನಿರ್ಮಾಣಕ್ಕೂ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಎಸ್‌. ಬಾಲರಾಜು, ಜಿಪಂ ಸದಸ್ಯ ಜೆ. ಯೋಗೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌ .ವಿ. ಚಂದ್ರು, ಆಲ್ದೂರು ರಾಜಶೇಖರ್‌, ಕೃಷ್ಣಾಪುರ ದೇವರಾಜು ಇತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next