ಬೆಂಗಳೂರು: ಸರ್ಕಾರವೇ ಜನಸಾಮಾನ್ಯ ಬಳಿಗೆ ತೆರಳಿ ಸಮಸ್ಯೆ ಆಲಿಸಬೇಕು ಎಂಬ ಉದ್ದೇಶದಿಂದ ಆರಂಭಿಸಿರುವ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಸರಣಿಯಲ್ಲಿಇದೇ ಮೊದಲ ಬಾರಿ ಸಚಿವ ಅಶೋಕ್ ಅವರು ದಟ್ಟಕಾಡಿನ ಮಧ್ಯೆ ಇರುವ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ನಾಗರಹೊಳೆ ಅಭಯಾರಣ್ಯದ ನಡುವೆ ಕಾಡಂಚಿನಲ್ಲಿರುವ ಕೆಂಚನಹಳ್ಳಿ ಗ್ರಾಮಸ್ಥರ ಸಮಸ್ಯೆಯನ್ನು ನ.19 ಮತ್ತು 20ರಂದು ಕಂದಾಯ ಸಚಿವರು ಆಲಿಸಲಿದ್ದಾರೆ. ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆ ಕುರಿತು ಸಚಿವರು ಖುದ್ದಾಗಿ ಪರಿಶೀಲನೆ ನಡೆಸಲಿದ್ದಾರೆ. ಆನೆ ತುಳಿತ ಸೇರಿ ಅರಣ್ಯದಿಂದ ಆಗುವ ಸಂಕಷ್ಟಗಳ ಬಗ್ಗೆ ಅಹವಾಲು ಸ್ವೀಕಾರವಾಗಲಿದೆ.
ಜೇನು ಕುರುಬರು ಮತ್ತು ಕಾಡು ಕುರುಬರು, ಎರವರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಪ್ರದೇಶದಲ್ಲಿ ಅಶೋಕ್ ಅವರು ಗ್ರಾಮಸ್ಥರಿಂದ ನೇರ ಅಹವಾಲು ಸ್ವೀಕಾರ ಮತ್ತು ಚರ್ಚೆ ನಡೆಸಲಿದ್ದಾರೆ. ಸರ್ಕಾರವೇ ಕಾಡಿನ ಮಕ್ಕಳ ಬಳಿ ತೆರಳಿ ಕುಂದುಕೊರತೆಗಳನ್ನು ಆಲಿಸಲಿದೆ. ಸ್ವಾಮಿ ವಿವೇಕಾನಂದ ಗಿರಿಜನ ಆಶ್ರಮ ಶಾಲೆಯಲ್ಲಿ ಆರ್. ಅಶೋಕ್ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.
ಇದನ್ನೂ ಓದಿ:ಹೋರಾಟಗಾರರೊಂದಿಗಿದ್ದು ಪ್ರಚಾರ ಪಡೆದ ಖಾದರ್ ಗೆ ಟೋಲ್ ಗೇಟ್ ತೆರವು ಮಾಡಲು ಸಾಧ್ಯವಾಯಿತೆ?
ರಾಜ್ಯಾದ್ಯಂತ ಈ ವರೆಗೆ ನಡೆದ “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ” ಕಾರ್ಯಕ್ರಮದಲ್ಲಿ ಒಟ್ಟು 3 ಲಕ್ಷಕ್ಕೂ ಅಧಿಕ ಜನರಿಗೆ ಸೌಲಭ್ಯಗಳನ್ನು ವಿತರಿಸಲಾಗಿದೆ. ಈ ಸಂದರ್ಭದಲ್ಲಿ ಸಚಿವರು ಜನಸ್ಪಂದನ, ಕುಂದು ಕೊರತೆಗಳ ಪರಿಶೀಲನೆ ಹಾಗೂ ಸ್ಥಳೀಯರ ಜೊತೆ ಕುಂದು ಕೊರತೆಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಪೌತಿ ಖಾತೆ ಅಭಿಯಾನ ಸಹ ನಡೆಯಲಿದೆ.
ಕಂದಾಯ ಇಲಾಖೆ ಹಾಗೂ ಇತರ ಇಲಾಖೆಯ ವತಿಯಿಂದ ಸುಮಾರು 10 ಸಾವಿರಕ್ಕೂ ಅಧಿಕ ಜನರಿಗೆ ಸರ್ಕಾರದ ವಿವಿಧ ಸೌಲಭ್ಯಗಳ ವಿತರಣೆಯನ್ನು ಸಚಿವರು ಮಾಡಲಿದ್ದಾರೆ. ಗಿರಿಜನ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶಾಲೆಯಲ್ಲಿಯೇ ಮಕ್ಕಳೊಂದಿಗೆ ಊಟ ಮಾಡಿ ವಾಸ್ತವ್ಯ ಮಾಡುತ್ತಾರೆ.