ಬಳ್ಳಾರಿ: ಪಾಕಿಸ್ತಾನ ಜಿಂದಾಬಾದ್, ಕರಿಯಾ ಎಂದವರ ವಿರುದ್ಧ ಪ್ರಕರಣ ದಾಖಲಿಸದ ರಾಜ್ಯ ಸರ್ಕಾರ, ಜಮೀನು ಕಬಳಿಕೆ ಕುರಿತು ಹೇಳಿಕೆ ನೀಡಿದ್ದಕ್ಕೆ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸುತ್ತೀರಿ ನಿಮ್ಮ ಸರ್ಕಾರಕ್ಕೆ ಒಳ್ಳೆಯದಾಗುತ್ತಾ? ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದರು.
ನಾಲ್ವರು ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಜಿಲ್ಲಾಸ್ಪತ್ರೆಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಶೇಖರ ಸ್ವಾಮೀಜಿಗಳು ಪಾಕಿಸ್ತಾನ ಜಿಂದಾಬಾದ್ ಎಂದಿಲ್ಲ. ಜಮೀನು ಕಬಳಿಕೆ ಕುರಿತು ಹೇಳಿಕೆ ನೀಡಿದ್ದಾರೆ. ಅದಕ್ಕೆ ಒತ್ತಡ ಹೇರಿ ಪ್ರಕರಣ ದಾಖಲಿಬೇಕಾ ? ಎಂದು ಪ್ರಶ್ನಿಸಿದ ಅಶೋಕ್, ಹಾಗಿದ್ದರೆ ಕರಿಯಾ ಎಂದು ಕರೆದವರ ಮೇಲೆ ಏಕೆ ಕ್ರಮಕೈಗೊಂಡಿಲ್ಲ. ಇದೇ ಅಮೇರಿಕಾದಲ್ಲಿ ಹೇಳಿದ್ದರೆ, ಇಲ್ಲಿನ ಜಾತಿನಿಂದನೆಗಿಂತಲೂ ದೊಡ್ಡ ಶಿಕ್ಷಣ ಆಗುತ್ತಿತ್ತು. ಕುಕ್ಕರ್ ಬ್ಲಾಸ್ಟ್ ಮಾಡಿದವರನ್ನು ನಿಮ್ಮ ಬ್ರದರ್ಸ್ ಎಂದು ಹೇಳಿರುವ ನೀವು, ಸ್ವಾಮೀಜಿಗಳು ನಿಮ್ಮ ವಿರೋಧಿಗಳಾ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಛಾಟಿ ಬೀಸಿದರು.
ಮುಸಲ್ಮಾನರಿಗಾಗಿ ಈಗಾಗಲೇ ಒಂದು ಪಾಕಿಸ್ತಾನ ಕೊಟ್ಟಿದ್ದೇವೆ. ಜಮೀಜು ಕಬಳಿಕೆ ಮೂಲಕ ಇನ್ನೊಂದು ಪಾಕಿಸ್ತಾನ ಆಗೋದು ಬೇಡ ಎಂಬ ಹಿನ್ನೆಲೆಯಲ್ಲಿ ಚಂದ್ರಶೇಖರ ಸ್ವಾಮೀಜಿಗಳು ಆ ರೀತಿ ಹೇಳಿದ್ದಾರೆ. ಸ್ವಾಮೀಜಿಗಳಿಗೆ ಈಗ 82 ವರ್ಷ. ಇಂಥಹ ಸಮಯದಲ್ಲಿ ಅವರಿಗೆ ಕಿರುಕುಳ ನೀಡುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಅವರು, ಎಲೆಕ್ಷನ್ ಬಂದಾಗ ಸಾವಿರಾರು ರೂ. ಮೌಲ್ಯದ ಹೂಮಾಲೆಗಳನ್ನು ಹಾಕಿ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಾರೆ. ಈಗ ಎಲೆಕ್ಷನ್ ಇಲ್ಲ ಎಂದು ಕಿರುಕುಳ ನೀಡಿ ಪ್ರಕರಣ ದಾಖಲಿಸಿದ್ದೀರಾ ಎಂದು ಟೀಕಿಸಿದರು.
ಇದೇ ವೇಳೆ ಬೆಂಕಿ ಹಚ್ಚಿ, ಅದರಲ್ಲಿ ಅಶೋಕ ಬೀಡಿ ಸೇದುತ್ತಾರೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್.ಅಶೋಕ್, ನನಗೆ ಬೀಡಿ ಸೇದುವ ಚಟವಿಲ್ಲ. ಬೆಂಕಿ ಹಚ್ಚುವ ಅಭ್ಯಾಸವೂ ಇಲ್ಲ. ನಾನು ಆದಿ ಚುಂಚನಗಿರಿ ಮಠದ ಭಕ್ತ. ಮಠದ ಸ್ವಾಮೀಜಿಗಳಿಬ್ಬರೂ ನನ್ನನ್ನು ಮನೆಮಗ ಅಂತಲೇ ಕರೆಯುತ್ತಾರೆ. ನಾನು ಕಂದಾಯ ಸಚಿವನಾಗಿದ್ದಾಗ ಮಠದ ಶಿಕ್ಷಣ ಸಂಸ್ಥೆಗಳಿಗೆ, ಗೋಶಾಲೆಗಳಿಗೆ ನೂರಾರು ಎಕರೆ ಜಮೀನು ನೀಡಿದ್ದೇನೆ. ಹತ್ತಾರು ಬಾರಿ ಮಠಕ್ಕೆ ಭೇಟಿ ನೀಡಿ, ಸ್ವಾಮೀಜಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಕರ್ನಾಟಕ ಸರ್ಕಾರದ ಜೊತೆ 11,000 ಕೋಟಿ ಬಂಡವಾಳ ಹೂಡಿಕೆಗೆ ಹೀರೊ ಫ್ಯೂಚರ್ ಎನರ್ಜಿಸ್ ಒಪ್ಪಂದ