Advertisement

ಕಲಬುರ್ಗಿ ಪಾಲಿಕೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ : ಮಾಜಿ ಸಿಎಂ HDK ಭೇಟಿಯಾದ ಸಚಿವ ಅಶೋಕ್

07:14 PM Sep 11, 2021 | Team Udayavani |

ರಾಮನಗರ: ಕಲಬುರ್ಗಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಕಾರಣ ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಕ್ಕೇರಲು ಬಿಜೆಪಿ ಕಸರತ್ತು ನಡೆಸಿದ್ದು, ಶನಿವಾರ ಕಂದಾಯ ಸಚಿವ ಆರ್.ಅಶೋಕ್ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚರ್ಚೆ ನಡೆಸಿದರು.
ತಾಲೂಕಿನ ಬಿಡದಿ ಹೋಬಳಿ ಕೇತಗಾನಹಳ್ಳಿಯಲ್ಲಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ತೋಟದ ಮನೆಗೆ ಸಚಿವ ಆರ್.ಅಶೋಕ್ ಭೇಟಿ ಕೊಟ್ಟಿದ್ದರು. ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದಿದೆ.

Advertisement

ಕಲಬುರ್ಗಿ ಪಾಲಿಕೆ ಬಗ್ಗೆ ಚರ್ಚೆ ಆರ್.ಅಶೋಕ್
ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್ .ಅಶೋಕ್, ಕಲಬುರ್ಗಿ ಮಹಾನಗರ ಪಾಲಿಕೆ ಮೇಯರ್ ಮತ್ತು ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ವೇಳೆ ಬಿಜೆಪಿಗೆ ಬೆಂಬಲ ನೀಡುವ ಸಲುವಾಗಿ ತಾವು ಕುಮಾರಸ್ವಾಮಿ ಅವರ ಬಳಿ ಮಾತನಾಡಿದ್ದಾಗಿ ತಿಳಿಸಿದರು.

ಶಾಸಕ ಸಾ.ರಾ.ಮಹೇಶ್ ರವರ ಕರೆಯ ಮೇರೆಗೆ ತಾವು ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ಹೇಳಿದ ಅವರು ದೊಡ್ಡಬಳ್ಳಾಪುರ ನಗರಸಭೆ ವಿಚಾರವಾಗಿ ಕುಮಾರಸ್ವಾಮಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಲಬುರಗಿ ಪಾಲಿಕೆ ಬೆಂಬಲದ ಬಗ್ಗೆ ಸೋಮವಾರ ಸದನ ನಡೆಯುವ ವೇಳೆ ಚರ್ಚಿಸೋಣ ಎಂದಿದ್ದಾರೆ.

ಇದನ್ನೂ ಓದಿ :ಗಲ್ಲಾಪೆಟ್ಟಿಗೆ ಗಳಿಕೆಯಲ್ಲಿ ಡಲ್ ಹೊಡೆದ ಕಂಗನಾಳ ‘ತಲೈವಿ’ ಸಿನಿಮಾ

ಕಲಬುರ್ಗಿ: ಜೆಡಿಎಸ್ ಯಾರಿಗೂ ಬೆಂಬಲ ಘೋಷಿಸಿಲ್ಲ
ಕಲಬುರ್ಗಿ ಮಹಾನಗರ ಪಾಲಿಕೆ ವಿಚಾರದಲ್ಲಿ ಈವರೆಗೂ ಅವರು ಯಾರಿಗೂ ಬೆಂಬಲ ಘೋಷಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ಚರ್ಚಿಸಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.

Advertisement

ಕಲಬುರಗಿ ಪಾಲಿಕೆ ಚುಕ್ಕಾಣಿಗೆ ಜೆಡಿಎಸ್ ಪಕ್ಷ ಕಾಂಗ್ರೆಸ್‌ಗೆ ಬೆಂಬಲ ನೀಡಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್ , ಕಾಂಗ್ರೆಸ್‌ನಲ್ಲೇ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಲ್ಲೇ ಒಮ್ಮತವಿಲ್ಲ. ಮೇಯರ್ ಪಟ್ಟದ ಡಿಮ್ಯಾಂಡ್ ಕೂಡ ಚರ್ಚೆಯಾಗಿಲ್ಲ ವೆಂದು ಗೊತ್ತಾಗಿದೆ ಎಂದು ಹೇಳಿದರು.

ಎಚ್.ಡಿ.ಕೆ. ಟ್ವೀಟ್
ಈ ಚರ್ಚೆಯ ನಂತರ ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಸಚಿವ ಆರ್ .ಅಶೋಕ್ ತಮ್ಮ ತೋಟದ ಮನೆಯಲ್ಲಿ ಭೇಟಿಯಾಗಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ತಮ್ಮೊಂದಿಗೆ ಸುದೀರ್ಘವಾಗಿ ಚರ್ಚಿಸಿರುವುದಾಗಿ ಹೇಳಿಕೊಂಡಿದ್ದಾರೆ. ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಕಲಾಪದ ಬಗ್ಗೆಯೂ ಅವರು ಸಮಾಲೋಚನೆ ನಡೆದಿರುವುದಾಗಿ ಹೇಳಿದ್ದಾರೆ.

ಸೋಮವಾರ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿರುವುದಾಗಿ, ಅಲ್ಲಿ, ತಮ್ಮ ಪಕ್ಷದ ಶಾಸಕರ ಜತೆ ಎಲ್ಲ ಬೆಳವಣೆಗಗಳ ಬಗ್ಗೆ ಚರ್ಚಿಸಿದ ನಂತರ ಪಕ್ಷದ ಅಭಿಪ್ರಾಯವನ್ನು ತಿಳಿಸಲಾಗುವುದು ಎಂದು ಆರ್.ಅಶೋಕ್ ಅವರಿಗೆ ಹೇಳಿರುವುದಾಗಿ ಟ್ವೀಟ್‌ನಲ್ಲಿ ಹೇಳಿದ್ದಾರೆ. ಪ್ರಸ್ತುತ, ರಾಜ್ಯದ ರೈತಾಪಿ ಜನ ಎದುರಿಸುತ್ತಿರವ ಸಮಸ್ಯೆಗಳೂ ಸೇರಿದಂತೆ ರಾಜ್ಯ ಎದುರಿಸುತ್ತಿರುವ ವಿವಿಧ ಸವಾಲುಗಳ ಬಗ್ಗೆ ಸಚಿವರ ಗಮನಕ್ಕೆ ತಂದಿರುವುದಾಗಿ ಕುಮಾರಸ್ವಾಮಿ ತಮ್ಮ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next