ಹೊಸಕೋಟೆ: ಪೌತಿಖಾತೆ ಆಂದೋಲನದ ಮೂಲಕ ಆಸ್ತಿ ಖಾತೆ ಹಕ್ಕುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದರಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ. ಪೌತಿ ಖಾತೆ ಹೊಂದಿದ ಖಾತೆದಾರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ದೊರೆಯುವ ಆರ್ಥಿಕ ಸೌಕರ್ಯಗಳನ್ನು ಕೂಡ ತ್ವರಿತವಾಗಿ ತಲುಪಿಸಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯಲ್ಲಿ ರವಿವಾರ ಬೆಳಗ್ಗೆ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಪೌತಿಖಾತೆ ಆಂದೋಲನದಲ್ಲಿ ಖಾತೆ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ರೈತ ಕುಟುಂಬಗಳು ತಮ್ಮ ಆಸ್ತಿಗಳನ್ನು ಭಾಗ ಮಾಡಿಕೊಳ್ಳುವುದು ಈ ಹಿಂದೆ ಸವಾಲಿನ ಕಾರ್ಯವೆನಿಸಿತ್ತು. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ, ಪೌತಿ ಖಾತೆ ಆಂದೋಲನದ ಪರಿಣಾಮ ಜನರ ಮನೆ ಬಾಗಿಲಿಗೆ ದಾಖಲೆಗಳು ಬರುವಂತಾಗಿದೆ ಎಂದರು.
ಪೌತಿಖಾತೆಗೆ ಅರ್ಜಿ ಸಲ್ಲಿಸಿದ್ದ 17 ಕುಟುಂಬ ಗಳಿಗೆ ಸಚಿವರು ಇದೇ ಸಂದರ್ಭದಲ್ಲಿ ದಾಖಲೆ ಗಳನ್ನು ವಿತರಿಸಿದರು. ಪೌತಿಖಾತೆಗೆ ಅರ್ಜಿ ಸಲ್ಲಿಸಿ ನೋಟಿಸ್ ಅವಧಿಯಲ್ಲಿರುವ 98 ಮಂದಿಗೂ ಖಾತೆ ಪತ್ರಗಳನ್ನು ವಿತರಿಸಿದರು.
Related Articles
ನಿವೇಶನ ಒದಗಿಸಲು ಸೂಚನೆ
ಜಡಿಗೇನಹಳ್ಳಿಯಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಮಾಡಿದ್ದ ಸಚಿವರು ರವಿವಾರ ಬೆಳಗ್ಗೆ ಗ್ರಾಮದ ಪರಿಶಿಷ್ಟ ಜಾತಿಯ ಗಿರಿಜಮ್ಮ ಹಾಗೂ ಮುನಿಯಪ್ಪ ದಂಪತಿಯ ಮನೆಯಲ್ಲಿ ಉಪಾ ಹಾರ ಸೇವಿಸಿದರು. ಕುಟುಂಬದ ಸದಸ್ಯರ ಮಾಹಿತಿ ಪಡೆದ ಸಚಿವರು ಗ್ರಾಮದಲ್ಲಿ ಗುರುತಿಸ ಲಾಗಿರುವ ಸರಕಾರಿ ನಿವೇಶನಗಳಲ್ಲಿ ಎರಡು ನಿವೇಶನಗಳನ್ನು ಒದಗಿಸುವಂತೆ ಸೂಚಿಸಿದರು. ಉಪಾಹಾರದ ಬಳಿಕ ಮನೆಯ ಆವರಣದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.