ಹೊಸದಿಲ್ಲಿ: ಮಧುರ ಕಂಠದ ಪ್ರಖ್ಯಾತ ಗಾಯಕ ಸೋನು ನಿಗಮ್ ಅಝಾನ್‌ನಿಂದ ತನಗಾಗುವ ಕಿರಿಕಿರಿಯನ್ನು ವಿರೋಧಿಸಿ ಸರಣಿ ಟ್ವೀಟ್ ಮಾಡುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾದ ಬೆನ್ನಲ್ಲೇ ಅವರ ಬೆನ್ನಿಗೆ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ನಿಂತಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಟೇಲ್
‘ಅಝಾನ್‌ಗೆ ಧ್ವನಿವರ್ಧಕ ಕಡ್ಡಾಯವಲ್ಲ .ಇಂದು ಹೆಚ್ಚಿನವರ ಮೊಬೈಲ್‌ಗಳಲ್ಲಿ ಅಝಾನ್ ಕೇಳಬಹುದು. ಅಝಾನ್ ಘಂಟೆ ಗಳಿವೆ ಹೀಗಾಗಿ ಇಂದಿನ ದಿನಗಳಲ್ಲಿ ಧ್ವನಿವರ್ಧಕದ ಅಗತ್ಯವಿಲ್ಲ’ ಎಂದಿದ್ದಾರೆ.
‘ಅಝಾನ್‌ನನ್ನು ಧ್ವನಿವರ್ಧಕದ ಮೂಲಕ ಮೊಳಗಿಸಲು ಇಸ್ಲಾಂ ಆಗಲಿ ಖುರಾನ್ ಆಗಲಿ ಎಂದೂ ಹೇಳಿಲ್ಲ. ಅಝಾನ್ ಎನ್ನುವುದು ಇನ್ನೊಬ್ಬರಿಗೆ ತೊಂದರೆಯಾಗದಂತೆ ಇರಬೇಕು’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಗುಜರಾತ್ ಮೂಲದ 67 ರ ಹರೆಯದ ಪಟೇಲ್ ಅವರು 2001 ರಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಧಾರ್ಮಿಕ ಕೇಂದ್ರಗಳಲ್ಲಿ ಬೆಳಗಿನ ಹೊತ್ತು ಪ್ರಾರ್ಥನೆ ಮಾಡುವಾಗ ಧ್ವನಿವರ್ಧಕ ಬಳಸುವುದನ್ನು ಖಂಡಿಸಿ ಸೋನು ಒಂದರ ಹಿಂದೆ ಒಂದು ಮೂರು ಟ್ವೀಟ್ ಮಾಡಿದ್ದರು. “ದೇವರು ಎಲ್ಲರಿಗೂ ಒಳಿತು ಮಾಡಲಿ. ನಾನು ಮುಸ್ಲಿಂ ಅಲ್ಲ. ಆದರೆ ದಿನಾ ಬೆಳಗ್ಗೆ ಅಝಾನ್(ಮುಸ್ಲಿಂ ಪ್ರಾರ್ಥನೆ) ನನ್ನನ್ನು ಎಚ್ಚರಿಸುತ್ತದೆ. ಇಂಥ ಒತ್ತಾಯದ ಧಾರ್ಮಿಕತೆ ನಿಲ್ಲುವುದೆಂದು? ‘ ಎಂದು ಒಂದು ಟ್ವೀಟ್‌ನಲ್ಲಿ ಬರೆದಿದ್ದರೆ, ಮತ್ತೂಂದು ಟ್ವೀಟ್‌ನಲ್ಲಿ “ಅಂದ ಹಾಗೆ ಮೊಹಮ್ಮದ್ ಅವರು ಇಸ್ಲಾಂ ಸ್ಥಾಪಿಸಿದಾಗ ವಿದ್ಯುತ್ ಸೌಲಭ್ಯ ಇರಲಿಲ್ಲ. ಆದರೆ ಎಡಿಸನ್‌ನ ನಂತರ ನನಗೇಕೆ ಈ ಸದ್ದು ಕೇಳುವ ಗತಿ ಬಂದಿದೆ?’ ಎಂದು ಬರೆದಿದ್ದರು.
ಮತ್ತೂ ಮುಂದುವರಿದ ಸೋನು, “ವಿದ್ಯುತ್ ಬಳಸಿಕೊಂಡು, ಧರ್ಮವನ್ನು ಪ್ರತಿಪಾದಿಸುವ ನಿದ್ದೆ ಕೆಡಿಸುವ ಯಾವುದೇ ದೇವಾಲಯ ಅಥವಾ ಗುರುದ್ವಾರದ ಮೇಲೆ ನನಗೆ ನಂಬಿಕೆಯಿಲ್ಲ. ಮತ್ತೇಕೆ..? ಪ್ರಾಮಾಣಿಕ? ಸತ್ಯ?” ಎಂದು ಮೂರನೇ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದರು.
ಬಾಲಿವುಡ್‌ವಲಯದಲ್ಲೂ ಕೆಲವರು ಸೋನು ಪರ ನಿಂತಿದ್ದರೆ, ಇನ್ನು ಕೆಲವರು ಖಂಡಿಸಿದ್ದರು.