Advertisement

ಕಲಾಗ್ರಾಮದಲ್ಲಿ ಶೀಘ್ರವೇ ಗ್ರಾಫಿಕ್‌ ಸ್ಟುಡಿಯೊ ಶುರು

11:58 AM May 13, 2017 | |

ಬೆಂಗಳೂರು: ಕಲಾಗ್ರಾಮದಲ್ಲಿ ಗ್ರಾಫಿಕ್‌ ಸ್ಟುಡಿಯೊ ಮತ್ತು ತೆರೆದ ಗ್ಯಾಲರಿ ನಿರ್ಮಿಸುವ ದಶಕಗಳ ಕನಸು ನನಸಾಗುತ್ತಿದೆ.  ಗ್ರಾಫಿಕ್‌ ಸ್ಟುಡಿಯೊ ನಿರ್ಮಾಣಕ್ಕಾಗಿ ಸರ್ಕಾರ ಲಲಿತಕಲಾ ಅಕಾಡೆಮಿಗೆ 3.30 ಕೋಟಿ ರೂ.ಅನುದಾನ ನೀಡಿದೆ. ಇದಕ್ಕಾಗಿ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಜಮೀನು ಕೂಡ ಮೀಸಲಿಡಲಾಗಿದೆ. ಕೆಲವೇ ದಿನಗಳಲ್ಲಿ ಮೊದಲ ಹಂತವಾಗಿ ಲಲಿತಕಲಾ ಅಕಾಡೆಮಿ ಗ್ರಾಫಿಕ್‌ ಸ್ಟುಡಿಯೊ ನಿರ್ಮಾಣ ಕೈಗೆತ್ತಿಕೊಳ್ಳಲಿದೆ. 

Advertisement

ಕಲಾಗ್ರಾಮದಲ್ಲಿ ಲಲಿತಕಲಾ ಅಕಾಡೆಮಿ, ಶಿಲ್ಪಕಲಾ ಮತ್ತು ಚಿತ್ರಕಲಾ ಅಕಾಡೆಮಿಗೆ ಒಟ್ಟು 4 ಎಕರೆ ಜಮೀನು ಮೀಸಲಿಡಲಾಗಿದೆ. ಆದರೆ, ಅದನ್ನು ಸದ್ಬಳಕೆ ಮಾಡಿಕೊಂಡು ವಿಭಾಗವಾರು ಕಟ್ಟಡಗಳ ನಿರ್ಮಾಣಕ್ಕೆ ದಶಕದಿಂದಲೂ ಪ್ರಯತ್ನಗಳು ನಡೆಯುತ್ತಿವೆಯಾದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆದರೆ, ಈ ಅನುದಾನ ಕೇವಲ ಗ್ರಾಫಿಕ್‌ ಸ್ಟುಡಿಯೊ ನಿರ್ಮಾಣಕ್ಕೆ ಮಾತ್ರ ಬಳಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. 

ಇದಕ್ಕಾಗಿ ಒಂದೆರಡು ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಂದ ಸ್ಟುಡಿಯೋ ಕಾಮಗಾರಿಗೆ ಅಡಿಗಲ್ಲು ಹಾಕಿಸುವ ಪ್ರಯತ್ನ ಲಲಿತಕಲಾ ಅಕಾಡೆಮಿಯಿಂದ ನಡೆಯುತ್ತಿದೆ. ಅಕಾಡೆಮಿಯ ವಿವಿಧ ಕಾರ್ಯಚಟುವಟಿಕೆಗೆ ಅನುಕೂಲಧಿವಾಗುವಂತೆ ಸ್ಟುಡಿಯೊ, ತೆರೆದ ಗ್ಯಾಲರಿಗಳನ್ನು ಅಚ್ಚುಕಟ್ಟಾಗಿ ನಿರ್ಮಿಸುವ ಗುರಿ ಲಲಿತಕಲಾ ಅಕಾಡೆಮಿಯದ್ದು. ಕಲಾಗ್ರಾಮದಲ್ಲಿ ಇರುವ ಜಾಗದಲ್ಲಿಯೇ ವ್ಯವಸ್ಥಿತವಾದ ಕಟ್ಟಡ ನಿರ್ಮಾಣ ಮಾಡಿ, ದೃಶ್ಯಕಲಾ ಅಭಿವೃದ್ಧಿಗೆ ಬಳಕೆ ಮಾಡುವ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಿದೆ.
 
ಗ್ರಾಫಿಕ್‌ ಸ್ಟುಡಿಯೊದಲ್ಲಿ ಏನೇನಿರಲಿದೆ?: ಗ್ರಾಫಿಕ್‌ ಸ್ಟುಡಿಯೊ ವಿಭಾಗದಲ್ಲಿ ಮರದಲ್ಲಿ ಅಚ್ಚು ತಯಾರಿಕೆ (ವುಡ್‌ಕಟ್‌). ಲಿತೋಗ್ರಾಫ್ (ಶಿಲಾ ಮುದ್ರಣ ಕಲೆ), ಡೈಪಾಯಿಂಟ್‌, ಸಿರಿಯೋಗ್ರಫಿ (ಸ್ಕ್ಯಾನ್‌ಪ್ರಿಂಟಿಂಗ್‌), ಇಂಟಿಗ್ಲೊ ವಿಭಾಗಗಳು ಇರಲಿವೆ. ಗ್ರಾಫಿಕ್‌ ಸ್ಟುಡಿಯೊಕ್ಕಾಗಿ ಬರೋಡಾದಿಂದ ಈಗಾಗಲೇ ಯಂತ್ರೋಪಕರಣಗಳನ್ನು ತರಿಸಲಾಗಿದೆ. ಆಯಾ ವಿಭಾಗಗಳಿಗೆ ಅಗತ್ಯವಾದ ಇತರ ವಸ್ತುಗಳನ್ನು ನಂತರ ಪೂರೈಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಚಿತ್ರಕಲಾ ಗ್ಯಾಲರಿ: ಈ ವಿಭಾಗವು ಲಲಿತಕಲಾ ಅಕಾಡೆಮಿ ವ್ಯಾಪಿಗೆ ಒಳಪಡಲಿದ್ದು, ಚಿತ್ರಕಲೆಗೆ ವಿಶಾಲವಾದ ಜಾಗದ ಅವಶ್ಯಕತೆ ಇದೆ. ಆದ್ದರಿಂದಲೇ ಕೋಲ್ಕತ್ತಾದ ಶಾಂತಿ ನಿಕೇತನ ಮಾದರಿಯಲ್ಲಿ ಚಿತ್ರಕಲೆಗೆ ಸಮರ್ಪಕವಾದ ತೆರೆದ ಗ್ಯಾಲರಿ ನಿರ್ಮಾಣದೊಂದಿಗೆ ಕಲಾವಿದರು ತಂಗಲು ಕೊಠಡಿಗಳ ನಿರ್ಮಾಣ ನಡೆಸುವ ಗುರಿ ಇದೆ.  ಸಾಂಪ್ರದಾಯಿಕ ಚಿತ್ರಕಲೆ, ಸಮಕಾಲೀನ ಚಿತ್ರಕಲೆ, ರೇಖಾಚಿತ್ರಕಲೆ, ಆಯಿಲ್‌ ಪೇಂಟಿಂಗ್‌, ವಾಟರ್‌ ಕಲರ್‌ ಪೇಂಟಿಂಗ್‌ನಲ್ಲಿ ಚಿತ್ರ ಬಿಡಿಸುವ ವಿವಿಧ ಚಿತ್ರಕಲಾ ಪ್ರಕಾರಗಳಿಗೆ ಸಂಬಂಧಿಸಿದಂತೆ ವಿಭಾಗಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದೆ. 

ಶಿಲ್ಪಕಲಾ ವಿಭಾಗ: ಮರದ ಕೆತ್ತನೆ ಶಿಲ್ಪಗಳು- ಸಂಪ್ರದಾಯಿಕ ಹಾಗೂ ಸಮಕಾಲೀನ ಶಿಲ್ಪಗಳು. ಮೆಟಲ್‌ ಕಾಪ್ಟಿಂಗ್‌- ಸಮಕಾಲೀನ ಶಿಲ್ಪಗಳು ಹಾಗೂ ಭಾವಶಿಲ್ಪ, ಪೂರ್ಣಪ್ರಮಾಣದ ಶಿಲ್ಪ. ಕಲ್ಲಿನ ಕೆತ್ತನೆ- ಸಮಕಾಲೀನ ಶಿಲ್ಪ ಕೆತ್ತನೆ ಮತ್ತು ಸಾಂಪ್ರದಾಯಿಕ ಶಿಲ್ಪಕೆತ್ತನೆ. ಮಣ್ಣಿನ ಕಲೆ- ಸೆರಾಮಿಕ್‌ ಕಲೆ (ಪಿಂಗಾಣಿ), ಸುಟ್ಟ ಮಣ್ಣಿನ ಕಲೆ. ಫೈಬರ್‌ ಗ್ಲಾಸ್‌ ಶಿಲ್ಪಗಳು ಇತ್ಯಾದಿ ವಿಭಾಗಗಳು ಶಿಲ್ಪಕಲಾ ವಿಭಾಗದಲ್ಲಿ ಬರಲಿವೆ. 

Advertisement

ಸರ್ಕಾರ ಕಳೆದ 10 ದಿನಗಳ ಹಿಂದಷ್ಟೇ ಅನುದಾನ ಬಿಡುಗಡೆ ಮಾಡಿದೆ. ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಸ್ಟುಡಿಯೊ ನಿರ್ಮಾಣ ಕಾಮಗಾರಿ ಆರಂಭಿಸಲು ಪ್ರಯತ್ನಿಸಲಾಗುವುದು. ರಾಜ್ಯದ ಕಲಾವಿದರಿಗೆ ಗ್ರಾಫಿಕ್‌ ಸ್ಟುಡಿಯೊ ನಿರ್ಮಾಣದಿಂದ ಹೆಚ್ಚು ಸಹಕಾರಿಯಾಗಲಿದೆ.
-ಎಂ.ಎಸ್‌.ಮೂರ್ತಿ, ಅಧ್ಯಕ್ಷರು, ಲಲಿತಕಲಾ ಅಕಾಡೆಮಿ.

* ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next