Advertisement

ಶೀಘ್ರ 2ನೇ ಚಾರ್ಜ್‌ಶೀಟ್‌ ಸಲ್ಲಿಕೆ; ಪಿಎಸ್‌ಐ ನೇಮಕ ಹಗರಣ

02:30 PM Jul 25, 2022 | Team Udayavani |

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಜು.5ರಂದು 1974 ಪುಟಗಳ ದೋಷಾರೋಪಣ (ಚಾರ್ಜ್‌ಶೀಟ್‌) ಸಲ್ಲಿಸಿದ ಬೆನ್ನಲ್ಲೇ ಮತ್ತೆ ಸಾವಿರ ಪುಟಗಳ ಎರಡನೇ ಚಾರ್ಜ್‌ಶೀಟ್‌ ಸಲ್ಲಿಸಲು ಸಿಐಡಿ ತನಿಖಾ ತಂಡ ಸಿದ್ಧತೆ ನಡೆಸಿದೆ.

Advertisement

ಮೂಲಗಳ ಪ್ರಕಾರ ನೊಬೆಲ್‌ ಶಾಲೆಯಲ್ಲಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.29 ಇಲ್ಲವೇ 30ರಂದು ಆರೋಪಪಟ್ಟಿ ಸಲ್ಲಿಸಲು ಸಿಐಡಿ ತಂಡ ಮುಂದಾಗಿದ್ದು, ತನಿಖಾಧಿಕಾರಿ ಆಗಿರುವ ಸಿಐಡಿ ಡಿವೈಎಸ್ಪಿ ವೀರೇಂದ್ರಕುಮಾರ ಅವರು ಸಾಕ್ಷ್ಯಾಧಾರಗಳೊಂದಿಗೆ ಇಲ್ಲಿನ ಮೂರನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.

ನೊಬೆಲ್‌ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್‌ ಬಳಸಿ ಹೇಗೆ ಅಕ್ರಮ ಎಸಗಲಾಗಿದೆ ಹಾಗೂ ಯಾರ್ಯಾರು, ಹೇಗೆ ಅಕ್ರಮದಲ್ಲಿ ತಮ್ಮ ಪಾತ್ರ ನಿರೂಪಿಸಿದ್ದಾರೆ. ಹಣದ ವ್ಯವಹಾರ ಸೇರಿದಂತೆ ಪ್ರಮುಖವಾಗಿ ಪ್ರಶ್ನೆಪತ್ರಿಕೆ ಬಹಿರಂಗ ಸೇರಿದಂತೆ ಇತರ ಎಲ್ಲ ಆಯಾಮಗಳು ಒಳಗೊಂಡ ಅಂಶಗಳನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ ಎನ್ನಲಾಗಿದೆ.

ಶೌಚಾಲಯದಲ್ಲಿ ಬಚ್ಚಿಡಲಾದ ಬ್ಲೂಟೂತ್‌: ಎಂಎಸ್‌ಐ ಡಿಗ್ರಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪಿಎಸ್‌ಐ ಪರೀಕ್ಷಾರ್ಥಿ ಪರೀಕ್ಷಾ ಮುನ್ನಾ ದಿನವೇ ಹೂವಿನ ಕುಂಡದಲ್ಲಿ ಬ್ಲೂಟೂತ್‌ ಇಟ್ಟು ಬಂದಿರುವುದು ಗೊತ್ತಿರುವ ವಿಷಯ. ಆದರೆ ನೊಬೆಲ್‌ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪಿಎಸ್‌ಐ ಆಗಿ ಆಯ್ಕೆಯಾಗಿರುವ ಆರೋಪಿ ಇಸ್ಮಾಯಿಲ್‌ ಖದೀರ್‌ ಪರೀಕ್ಷಾ ದಿನದಂದು ಮಧ್ಯರಾತ್ರಿ ಮೂರರಿಂದ ನಾಲ್ಕು ಗಂಟೆ ಸುಮಾರಿಗೆ ಬ್ಲೂಟೂತ್‌ ಶಾಲೆಯ ಶೌಚಾಲಯ ಕೋಣೆಯೊಳಗೆ ಇಟ್ಟು ಬಂದು ಅಕ್ರಮ ಎಸಗಿದ್ದಾನೆ. ಇದನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.

ಉತ್ತರ ಹೇಳಿದವರಿಗೆ ಶೋಧ: ಎರಡನೇ ಆರೋಪ ಪಟ್ಟಿ ಸಲ್ಲಿಕೆಯಾದ ನಂತರ ಪರೀಕ್ಷಾರ್ಥಿಗಳಿಗೆ ಬ್ಲೂಟೂತ್‌ ಮೂಲಕ ಉತ್ತರ ಹೇಳಿದವರನ್ನು ಪತ್ತೆ ಮಾಡಿ ತನಿಖೆಗೆ ಸಿಐಡಿ ತಂಡ ಮುಂದಾಗಿದೆ. ಈಗಾಗಲೇ ಉತ್ತರವನ್ನು ಎಲ್ಲಿ ಕುಳಿತು ಹಾಗೂ ಯಾವ ಮೊಬೈಲ್‌ನಿಂದ ಉತ್ತರ ಹೇಳಲಾಗಿದೆ ಎಂಬುದನ್ನು ತನಿಖಾಧಿಕಾರಿಗಳು ವರದಿ ರೂಪಿಸಿದ್ದಾರೆ. ಒಟ್ಟಾರೆ ಈ ಎಲ್ಲ ಅಂಶಗಳನ್ನು ಉಲ್ಲೇಖೀಸಬಹುದಾದರೆ ಮುಂದಿನ ದಿನಗಳಲ್ಲಿ ಉತ್ತರ ಹೇಳಿದವರು ಹಾಗೂ ಉತ್ತರ ಹೇಳಲು ಸಹಕರಿಸಿದವರೆಲ್ಲರೂ ಸಿಐಡಿ ಬಲೆಗೆ ಬೀಳುವ ಸಾಧ್ಯತೆಗಳಿವೆ.

Advertisement

ಮನೆಯಿಂದಲೇ ಊಟ ಪೂರೈಕೆ! ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಇಬ್ಬರು ಡಿಎಸ್ಪಿ, ಓರ್ವ ಇನ್ಸ್‌ಪೆಕ್ಟರ್‌, 11 ಅಭ್ಯರ್ಥಿಗಳು ಹಾಗೂ ಕಿಂಗ್‌ಪಿನ್‌, ಮಧ್ಯವರ್ತಿಗಳು ಸೇರಿದಂತೆ ಒಟ್ಟಾರೆ 42 ಜನರು ಬಂಧನವಾಗಿದ್ದಾರೆ. ಡಿಎಸ್ಪಿ ಗಳಾದ ಮಲ್ಲಿಕಾರ್ಜುನ ಸಾಲಿ, ವೈಜನಾಥ ರೇವೂರ, ಇನ್ಸ್‌ಪೆಕ್ಟರ್‌ ಆನಂದ ಮೇತ್ರೆ, ಅಭ್ಯರ್ಥಿಗಳಾದ ವಿಶಾಲ್‌, ಎನ್‌.ವಿ.ಪಾಟೀಲ್‌, ವಿಕಾಸ, ಶ್ರೀಧರ, ಪ್ರಭುದೇವ, ಹೈಯಾಳಿ ದೇಸಾಯಿ, ಇಸ್ಮಾಯಿಲ್‌ ಜಮಾದಾರ ಹಾಗೂ ಕಿಂಗ್‌ಪಿನ್‌ಗಳಾದ ರುದ್ರಗೌಡ ಪಾಟೀಲ್‌, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಅಫ‌ಜಲಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಾಂತೇಶ ಸೇರಿದಂತೆ ಒಟ್ಟಾರೆ 42 ಜನರ ಬಂಧನವಾಗಿ ಮೂವರು ಮಾತ್ರ ಜಾಮೀನು ಮೇಲೆ ಹೊರ ಬಂದಿದ್ದಾರೆ. ಮಹಾರಾಷ್ಟ್ರದ ಸುರೇಶ ಕಾಟೆಗಾಂವ, ಚಾಲಕ ಸದ್ದಾಂ ಹಾಗೂ ಕಾಳಿದಾಸ್‌ ಮಾತ್ರ ಹೊರ ಬಂದಿದ್ದಾರೆ. ಇನ್ನುಳಿದಂತೆ 39 ಆರೋಪಿಗಳು ಈಗಲೂ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಆಶ್ಚರ್ಯಕರ ಏನೆಂದರೆ ಇವರಲ್ಲಿ ಬಹುತೇಕರಿಗೆ ಆರಂಭದ ದಿನದಿಂದ ಇಂದಿನವರೆಗೂ ಮನೆಯಿಂದಲೇ ಕಾರಾಗೃಹಕ್ಕೆ ಊಟ ಪೂರೈಕೆಯಾಗುತ್ತಿದೆ. ದಿನಾಲು ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಪೂರೈಸಲಾಗುತ್ತಿದೆ. ಆರೋಪಿಗಳಿಗೆ ಮನೆಯಿಂದ ಊಟ ಪೂರೈಕೆಯಾಗುತ್ತಿರುವ ಬಗ್ಗೆ ಕಾರಾಗೃಹ ಸುಪರಿಟೆಂಡೆಂಟ್‌ ಸಮರ್ಪಕ ಉತ್ತರ ನೀಡುತ್ತಿಲ್ಲ.

-ಹಣಮಂತರಾವ ಭೈರಾಮಡಗಿ

 

Advertisement

Udayavani is now on Telegram. Click here to join our channel and stay updated with the latest news.

Next