ಕಲಬುರಗಿ: ಗ್ರಾಹಕರು ವಸ್ತು ಮತ್ತು ಸೇವೆಯಲ್ಲಿ ಪೂರೈಸುವ ಸಂಸ್ಥೆಗಳಿಂದ ಅನ್ಯಾಯಕ್ಕೊಳಗಾದಲ್ಲಿ ಗ್ರಾಹಕರ ಹಕ್ಕುಗಳ ವೇದಿಕೆ ಮೂಲಕ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಜಿಲ್ಲಾ ಗ್ರಾಹಕರ ಹಕ್ಕುಗಳ ವೇದಿಕೆ ಅಧ್ಯಕ್ಷ ಶರಣಪ್ಪ ಎನ್. ಕರೆ ನೀಡಿದರು.
ನಗರದ ಹಳೆ ಎಸ್‌ಪಿ ಕಚೇರಿ ಎದುರಿಗಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಗ್ರಾಹಕರ ಹಿತರಕ್ಷಣಾ ವೇದಿಕೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಮಹಾತ್ಮಾ ಗಾಂಧೀಜಿ ಗ್ರಾಹಕರ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಗ್ರಾಹಕರ ಹಕ್ಕುಗಳು ಮತ್ತು ರಕ್ಷಣೆ’ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರ ಹಕ್ಕುಗಳನ್ನು ಕಾಪಾಡಲೆಂದೇ ಪ್ರತಿ ಜಿಲ್ಲೆಯಲ್ಲಿ ಗ್ರಾಹಕರ ಹಕ್ಕುಗಳ ವೇದಿಕೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ 20 ಲಕ್ಷ ರೂ. ವರೆಗಿನ ಪರಿಹಾರ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. 20 ಲಕ್ಷ ರೂ. ಗಳಿಂದ 1 ಕೋಟಿ ರೂ. ವರೆಗಿನ ಪ್ರಕರಣಗಳನ್ನು ರಾಜ್ಯ ಮಟ್ಟದ ಗ್ರಾಹಕರ ಹಕ್ಕುಗಳ ವೇದಿಕೆಯಲ್ಲಿ ಮತ್ತು ಅದಕ್ಕೂ ಮೇಲ್ಪಟ್ಟ ಪ್ರಕರಣಗಳನ್ನು ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ವೇದಿಕೆಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ ಎಂದು ಹೇಳಿದರು.
ಮಹಾತ್ಮ ಗಾಂಧಿಧೀಜಿ ಗ್ರಾಹಕರ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ವೈಜನಾಥ ಝಳಕಿ ಮಾತನಾಡಿ, ಗ್ರಾಹಕರ ಹಕ್ಕುಗಳು ಮತ್ತು ರಕ್ಷಣೆ ಕುರಿತು ಉಪನ್ಯಾಸ ನೀಡಿದರು.
ಕಲಬುರಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ.ಹಿರೇಮಠ ಮಾತನಾಡಿ, ಸಮಾಜದಲ್ಲಿ ಕಾಲಕಾಲಕ್ಕೆ ಉಂಟಾಗುವ ಸಮಸ್ಯೆಗಳ ಪರಿಹಾರಕ್ಕಾಗಿ ಶಾಸನಗಳನ್ನು ತರುವುದು ಸರ್ವೇ ಸಾಮಾನ್ಯ. ಇಂತಹ ಕಾನೂನುಗಳ ಬಗ್ಗೆ ಅರಿವಿದ್ದಾಗ ಮಾತ್ರ ಅನ್ಯಾಯಕೊಳ್ಳಗಾಗುವುದು ವಿರಳ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್.ಮಾಣಿಕ್ಯ ಮಾತನಾಡಿ ಕಾನೂನು ಪರಿಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಈಶ್ವರಪ್ಪ ನೀರಡಗಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವಾಜಿ ಪಾಟೀಲ ಹಾಜರಿದ್ದರು. ಶಿಕ್ಷಕಿ ರೇಣುಕಾ ಡಾಂಗೆ ಸ್ವಾಗತಿಸಿದರು, ಶಿಕ್ಷಕಿ ಸುಜಾತಾ ಹವಾಲ್ದಾರ ನಿರೂಪಿಸಿದರು. ವಿದ್ಯಾರ್ಥಿನಿ ಪ್ರಿಯಾಂಕಾ ಪ್ರಾರ್ಥನಾ ಗೀತೆ ಹಾಡಿದರು.