ಧಾರವಾಡ: ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸ್ಕೇಟಿಂಗ್ ಮೈದಾನ ನಿರ್ಮಾಣಕ್ಕೆ ಶೀಘ್ರವೇ ಚಾಲನೆ ಸಿಕ್ಕಲಿದೆ ಎಂದು ಜಿಲ್ಲಾಧಿಕಾರಿ ಡಾ|ಎಸ್. ಬಿ. ಬೊಮ್ಮನಹಳ್ಳಿ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ನಿವಾಸದ ಬಳಿ ಸೋಮವಾರ ಬೆಳಗ್ಗೆ ಹಮ್ಮಿಕೊಂಡಿದ್ದ 30 ದಿನಗಳ ಸ್ಕೇಟಿಂಗ್ ತರಬೇತಿ ಶಿಬಿರದ ಮುಕ್ತಾಯ ಸಮಾರಂಭ ಹಾಗೂ ನೀರು ಉಳಿಸಿ, ಸಸಿ ಬೆಳೆಸಿ ನಾಲ್ಕು ಕಿಲೋ ಮೀಟರ್ ಸ್ಕೇಟಿಂಗ್ ಮೂಲಕ ಜನಜಾಗೃತಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ಮಕ್ಕಳು ನಿಸರ್ಗದ ಮಡಿಲಿನಲ್ಲಿ ಸ್ವತ್ಛಂದವಾಗಿ ಬಾಲ್ಯ ಕಳೆಯುವುದರಿಂದ ಅವರಿಗೆ ಪರಿಸರದ ಮಹತ್ವ ತಿಳಿದು ಬರಲಿದೆ. ಹೀಗಾಗಿ ಪೋಷಕರು ಅವರ ಮೇಲೆ ಯಾವುದೇ ಒತ್ತಡ ಹೇರದೇ ಅವರ ಇಚ್ಚೆ ಹಾಗೂ ಆಸಕ್ತಿಗೆ ತಕ್ಕಂತೆ ಬೆಳೆಸಬೇಕು ಎಂದರು.
ಟಿವಿ, ಟ್ಯಾಬ್ ಹಾಗೂ ಮೊಬೈಲ್ ಗಳಲ್ಲಿ ಮಕ್ಕಳನ್ನು ಕಳೆದು ಹೋಗದಂತೆ ಎಚ್ಚರಿಕೆ ವಹಿಸುವ ಜೊತೆಗೆ ದೇಹಕ್ಕೆ ಹೆಚ್ಚು ಉಲ್ಲಾಸ ನೀಡುವಂತಹ ಇಂತಹ ಸ್ಕೇಟಿಂಗ್ ತರಬೇತಿ ನೀಡುತ್ತಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೈಶುದೀಪ ಫೌಂಡೇಶನ್ ಕಾರ್ಯದರ್ಶಿ ಶಿವಲೀಲಾ ವಿನಯ ಕುಲಕರ್ಣಿ ಮಾತನಾಡಿ, ಮಕ್ಕಳಿಗಾಗಿ ಸ್ಕೇಟಿಂಗ್ ಮೈದಾನ ಅಗತ್ಯವಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರ ಗಮನಕ್ಕೆ ತಂದು ಮುಂಬರುವ ದಿನಗಳಲ್ಲಿ ಮಕ್ಕಳಿಗೆ ಸುಸಜ್ಜಿತ ಸ್ಕೇಟಿಂಗ್ ಮೈದಾನವನ್ನು ಸಮರ್ಪಣೆ ಮಾಡಿಸಲಾಗುವುದು ಎಂದರು.
ಮನೋರೋಗ ತಜ್ಞ ಡಾ|ಆನಂದ ಪಾಂಡುರಂಗಿ, ಪತ್ರಕರ್ತ ನಾಗರಾಜ ಕಿರಣಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಶಿಧರ ಪಾಟೀಲ ಸ್ವಾಗತಿಸಿದರು. ವಕೀಲ ನಾಗನಗೌಡ ಪಾಟೀಲ ನಿರೂಪಿಸಿದರು.ವಿ.ಬಿ. ಹೊಸಕೇರಿ ವಂದಿಸಿದರು.