Advertisement

ಜಪ್ತಿಯಾದ ವಾಹನಗಳಿಗೆ ಶೀಘ್ರ ಮುಕ್ತಿ

12:31 PM Oct 26, 2018 | |

ಬೆಂಗಳೂರು: ನಗರದ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ಸೇರಿ ಒಟ್ಟು 154 ಪೊಲೀಸ್‌ ಠಾಣೆಗಳ ಆವರಣಗಳಲ್ಲಿ ಮತ್ತು ಪಾದಚಾರಿ ಮಾರ್ಗಗಳ ಮೇಲೆ ಹಲವು ವರ್ಷಗಳಿಂದ ಧೂಳು ತಿನ್ನುತ್ತಿರುವ 10 ಸಾವಿರಕ್ಕೂ ಅಧಿಕ ವಾಹನಗಳಿಗೆ ಮುಕ್ತಿ ಸಿಗಲಿದೆ. ಇವೆಲ್ಲಾ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ್ದ ವಾಹನಗಳು!

Advertisement

ಕಳವು, ಸಂಚಾರ ನಿಯಮ ಉಲ್ಲಂಘನೆ ಸೇರಿ ಅಪರಾಧ ಮತ್ತು ನಿಯಮ ಉಲ್ಲಂಘನೆ ಕೃತ್ಯಗಳಲ್ಲಿ ಪೊಲೀಸರು ಜಪ್ತಿ ಮಾಡಿರುವ ಸಾವಿರಾರು ಬೈಕ್‌ಗಳು, ಕಾರು ಸೇರಿ ಇನ್ನಿತರೆ ವಾಹನಗಳ ನಿಲುಗಡೆಗೆ ಸರ್ಕಾರಿ ಜಮೀನು ನೀಡುವಂತೆ ಪೊಲೀಸ್‌ ವಿಭಾಗ ಮಾಡಿದ್ದ ಮನವಿಗೆ ಅಸ್ತು ಎಂದಿರುವ ರಾಜ್ಯ ಸರ್ಕಾರ ನಗರದ ಉತ್ತರ ಭಾಗದ ಪ್ರತ್ಯೇಕ ಜಾಗಗಳಲ್ಲಿ 5 ಎಕರೆ ಜಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯ ಕೆ.ಚೂಡಹಳ್ಳಿ ಗ್ರಾಮದ ಸರ್ವೇ ನಂ.68ರಲ್ಲಿನ 2 ಎಕರೆ ಸರ್ಕಾರಿ ಜಮೀನು ಹಾಗೂ ದಾಸನಪುರ ಹೋಬಳಿ ಮಲ್ಲಸಂದ್ರ ಗ್ರಾಮದ ಸರ್ವೇ ನಂ.35ರಲ್ಲಿ 3 ಎಕರೆ ಜಮೀನನ್ನು ಜಪ್ತಿ ವಾಹನಗಳ ನಿಲುಗಡೆಗೆ ಮಂಜೂರು ಮಾಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಅ.23ರಂದು ಆದೇಶ ಹೊರಡಿಸಿದ್ದಾರೆ.

ಐದು ಎಕರೆ ಜಮೀನು ಮಂಜೂರು ಮಾಡಿದ ಬೆನ್ನಲ್ಲೇ, ತಹಶೀಲ್ದಾರ್‌ ಬಳಿ ಜಮೀನು ಅಳತೆ ನಿಗದಿ ಪಡಿಸಿಕೊಂಡು ಎರಡೂ ಕಡೆ ಪ್ರತ್ಯೇಕ ಪಾರ್ಕಿಂಗ್‌ ಸ್ಥಳವನ್ನಾಗಿ ಪರಿವರ್ತಿಸಿ, ವಿವಿಧ ಠಾಣೆಗಳಲ್ಲಿ ಜಪ್ತಿ ಮಾಡಿ ಇರಿಸಲಾಗಿರುವ ಸುಮಾರು 10 ಸಾವಿರಕ್ಕೂ ಅಧಿಕ ವಾಹನಗಳನ್ನು ಸ್ಥಳಾಂತರಿಸಲು ಪೊಲೀಸ್‌ ಇಲಾಖೆ ಸಿದ್ಧತೆ ನಡೆಸಿದೆ.

ಜಮೀನು ಮಂಜೂರಿಗೆ ಹಲವು ಷರತ್ತು: ಐದು ಎಕರೆ ಜಮೀನು ನೀಡಿರುವ ಸರ್ಕಾರ, ಹಲವು ಷರತ್ತುಗಳನ್ನು ವಿಧಿಸಿದೆ. ಜಪ್ತಿ ಮಾಡುವ  ವಾಹನ ನಿಲುಗಡೆಗೆ ಮಾತ್ರವೇ ಭೂಮಿ ಬಳಸಬೇಕು, ಜಮೀನು ಶಾಶ್ವತವಾಗಿ ವಿರೂಪವಾಗಬಾರದು, ಜಮೀನು ಒತ್ತುವರಿ ಆಗದಂತೆ ಎಚ್ಚರಿಕೆ ವಹಿಸಬೇಕು.

Advertisement

ಜತೆಗೆ, ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿದ್ದರೆ  ಸರ್ಕಾರ ಜಮೀನು ವಾಪಾಸ್‌ ಪಡೆದುಕೊಳ್ಳಬಹುದು. ಒಂದು ವೇಳೆ ಜಮೀನಿಗೆ ಸಂಬಂಧಪಟ್ಟಂತೆ ಕಾನೂನು ವ್ಯಾಜ್ಯಗಳಿದ್ದರೆ ನ್ಯಾಯಾಲಯದ ಅಂತಿಮ ತೀರ್ಪಿಗೆ ಈ ಆದೇಶ ಒಳಪಟ್ಟಿರಲಿದೆ. ನಿಯಮ ಉಲ್ಲಂಘನೆಯಾದರೆ 1969ರ ಕರ್ನಾಟಕ ಭೂ ಮಂಜೂರಾತಿ ಕಾಯಿದೆ ಅನ್ವಯ ರದ್ದಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

13 ಎಕರೆ ಭೂಮಿ ಹುಡುಕಾಟ ಚುರುಕು: ಇದಲ್ಲದೆ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಹಲವು ಯೋಜನೆಗಳು ಸೇರಿ ವಿವಿಧ ಉದ್ದೇಶಗಳಿಗೆ ಇನ್ನೂ 13 ಎಕರೆ ಜಮೀನು ಅಗತ್ಯವಿದೆ. ಇದಕ್ಕೆ ಸರ್ಕಾರವೂ ಸಿದ್ಧವಿದ್ದು, ಈಗಾಗಲೇ ಬೆಂಗಳೂರು ಈಶಾನ್ಯ ಭಾಗದಲ್ಲಿ ಸರ್ಕಾರಿ ಜಾಗದ  ಹುಡುಕಾಟ ನಡೆಯುತ್ತಿದೆ ಎದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ ವಾಹನಗಳ ನಿಲುಗಡೆಗೆ ಸರ್ಕಾರ ಎರಡು 5 ಎಕರೆ ಜಮೀನು ಮಂಜೂರು ಮಾಡಿದೆ. ಕೆಲವು ಕಾನೂನು ಪ್ರಕ್ರಿಯೆಗಳ ಬಳಿಕ ವಾಹನಗಳ ಸ್ಥಳಾಂತರ ನಡೆಯಲಿದೆ.
-ಪಿ.ಹರಿಶೇಖರನ್‌, ನಗರ ಸಂಚಾರ ವಿಭಾಗದ ಎಸಿಪಿ

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next