Advertisement

ಮತ್ತೆ 10,611 ಪದವೀಧರ ಶಿಕ್ಷಕರ ಹುದ್ದೆಗೆ ಶೀಘ್ರ ಅಧಿಸೂಚನೆ

12:30 AM Jan 31, 2019 | Team Udayavani |

ಬೆಂಗಳೂರು : ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಭರ್ತಿಯಾಗದೇ ಉಳಿದಿರುವ ಹುದ್ದೆಗಳು ಹಾಗೂ ಸರ್ಕಾರ ಹೊಸ ನೇಮಕಾತಿಗೆ ಅನುಮತಿ ನೀಡಿರುವ ಹುದ್ದೆಗಳ ಸಹಿತವಾಗಿ 10,611 ಶಿಕ್ಷಕರನ್ನು ಪ್ರಾಥಮಿಕ ಶಾಲೆಗೆ ನೇಮಿಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಅತಿ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲಿದೆ.

Advertisement

ಹೊಸ ನೇಮಕಾತಿ ಪ್ರಕ್ರಿಯೆಗೆ ಲಭ್ಯವಿರುವ 10,611 ಪದವೀಧರ ಶಿಕ್ಷಕರಹುದ್ದೆಯಲ್ಲಿ ಹೈದರಾಬಾದ್‌ ಕರ್ನಾಟಕದ 6 ಜಿಲ್ಲೆಗಳ 5 ಸಾವಿರ ಹುದ್ದೆ ಹಾಗೂ ಉಳಿದ 24 ಜಿಲ್ಲೆಗಳ 5611 ಹುದ್ದೆಗಳು ಸೇರಿಕೊಂಡಿವೆ.

2017-18ನೇ ಸಾಲಿನಲ್ಲಿ 6ರಿಂದ 8ನೇ ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಹುದ್ದೆಗಳನ್ನು ಶಾಲೆಗಳಿಗೆ
ಹಂಚಿಕೆ ಮಾಡುವ ಸಂದರ್ಭದಲ್ಲಿ ಅನುಸರಿಸಿರುವ ವಿಧಾನವನ್ನೇ ಈ ನೇಮಕಾತಿ ಪ್ರಕ್ರಿಯೆಯಲ್ಲೂ ಅನುಸರಿಸಲಾಗುತ್ತದೆ. ಶಾಲಾವಾರು, ವಿಷಯವಾರು ಹುದ್ದೆ ಹಂಚಿಕೆ ಬಗ್ಗೆ ಇಲಾಖೆಯಿಂದ ಈಗಾಗಲೇ ವಿವರವಾದ ಮಾರ್ಗಸೂಚಿಯನ್ನು ಜಿಲ್ಲಾ ಉಪನಿರ್ದೇಶಕರಿಗೆ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಸ್‌.ಜಯಕುಮಾರ್‌ ಖಚಿತಪಡಿಸಿದರು.

ಸರ್ಕಾರಿ ಪ್ರಾಥಮಿಕ ಶಾಲೆಯ 6ರಿಂದ 8ನೇ ತರಗತಿಯಲ್ಲಿ ಖಾಲಿಯಿದ್ದ 10 ಸಾವಿರ ಪದವೀಧರ ಶಿಕ್ಷಕರ ಹುದ್ದೆಗೆ 2017ನೇ ಸಾಲಿನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಸ್ಪರ್ಧಾತ್ಮಕ ಪರೀಕ್ಷೆ, ಫ‌ಲಿತಾಂಶ ಪ್ರಕಟ, ಸಂದರ್ಶನ ಹಾಗೂ ಅಂತಿಮ ಆಯ್ಕೆ ಪ್ರಕ್ರಿಯೆ ಇತ್ತೀಚಿಗಷ್ಟೆ ಪೂರ್ಣಗೊಂಡಿದೆ.

ಲಭ್ಯವಿದ್ದ 10 ಸಾವಿರ ಹುದ್ದೆಗಳಲ್ಲಿ ಕೇವಲ 3389 ಹುದ್ದೆಗಳನ್ನಷ್ಟೇ ಭರ್ತಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸಕ್ತವಾಗಿತ್ತು. 6611 ಹುದ್ದೆಗಳು ಭರ್ತಿಯಾಗದೇ ಹಾಗೆ ಉಳಿದಿದೆ.

Advertisement

ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ನಾಲ್ಕು ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಿದೆ. 2017ರ ಅಧಿಸೂಚನೆಯಂತೆ ಭರ್ತಿಯಾಗದೇ ಉಳಿದಿರುವ 6611 ಪದವೀಧರ ಶಿಕ್ಷಕರ ಹುದ್ದೆಯ ಜತೆಗೆ ಹೊಸದಾಗಿ ಅನುಮೋದನೆ ಸಿಕ್ಕಿರುವ 4 ಸಾವಿರ ಹುದ್ದೆಗಳನ್ನು ಸೇರಿಸಿಕೊಂಡು 10611 ಹುದ್ದೆಗಳನ್ನು ಪ್ರಸಕ್ತ ಸಾಲಿನಲ್ಲಿ ಭರ್ತಿ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ.

ಜಿಲ್ಲಾ ಉಪನಿರ್ದೇಶಕರಿಂದ ಮಾಹಿತಿ:
ಭರ್ತಿಯಾಗದೇ ಉಳಿದಿರುವ 6611 ಪದವೀಧರ ಶಿಕ್ಷಕರ ಹುದ್ದೆ ಹಾಗೂ ಹೊಸದಾಗಿ ಅನುಮೋದನೆ ಸಿಕ್ಕಿರುವ 4 ಸಾವಿರ ಹುದ್ದೆ ಸಹಿತವಾಗಿ 10611 ಪದವೀಧರ ಶಿಕ್ಷಕರ ಹುದ್ದೆಯ ಸಂಬಂಧ ಎಲ್ಲ ಜಿಲ್ಲೆಗಳಿಂದಲೂ  ಜಿಲ್ಲಾ ಉಪನಿರ್ದೇಶಕರ ಮೂಲಕ ಇಲಾಖೆ ಮಾಹಿತಿ ಪಡೆಯಲಾಗುತ್ತಿದೆ. ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಒಟ್ಟಾರೆ ಲಭ್ಯಪಡಿಸಬೇಕಾದ ಪದವೀಧರ ಪ್ರಾಥಮಿಕ ಶಾಲಾ ವೃಂದದ ಶಿಕ್ಷಕರ ಸಂಖ್ಯೆಯ ಸೂಚಿಯನ್ನು ಆಧರಿಸಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರನ್ನು (ಟಿಜಿಟಿ ಸೇರಿ)ಪರಿಗಣಿಸಿ, ಕೊರತೆ ಇರುವ ಶಿಕ್ಷಕರ ಸಂಖ್ಯೆಯನ್ನು ನೀಡುವಂತೆ ಡಿಡಿಪಿಐಗಳಿಗೆ ಸೂಚಿಸಲಾಗಿದೆ ಎಂದು ಜಯಕುಮಾರ್‌ ತಿಳಿಸಿದ್ದಾರೆ.

ಫೆ.1ರೊಳಗೆ ಮಾಹಿತಿ ನೀಡಲು ಸೂಚನೆ
1ರಿಂದ 5ನೇ ತರಗತಿಯಲ್ಲಿ ಮಂಜೂರಾಗಿರುವ ಶಿಕ್ಷಕರ ಹುದ್ದೆಗಿಂತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ ಹೆಚ್ಚಿರುವುದೂ ಇಲಾಖೆಯ ಗಮನಕ್ಕೆ ಬಂದಿದೆ. ಗಣಿತ, ವಿಜ್ಞಾನ, ಸಮಾಜ ಪಾಠ ಹಾಗೂ ಆಂಗ್ಲ ಭಾಷಾ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ಫೆ.1ರೊಳಗೆ ಜಿಲ್ಲಾವಾರು ಮಾಹಿತಿಯನ್ನು ಉಪನಿರ್ದೇಶಕರು ನೀಡಬೇಕು. ಹುದ್ದೆಗಳಲ್ಲಿ ವ್ಯತ್ಯಾಸ ಪ್ರಸ್ತಾಪಿಸಿದಲ್ಲಿ ಅದಕ್ಕೆ ಸೂಕ್ತ ವಿವರಣೆ ನೀಡಿ, ಮಾಹಿತಿ ಒದಗಿಸಬೇಕು. ಇದಕ್ಕೆ ಉಪನಿರ್ದೇಶಕರೇ ಸಂಪೂರ್ಣ ಹೊಣೆಯಾಗಿರುತ್ತಾರೆ ಎಂದೂ ಇಲಾಖೆ ಎಚ್ಚರಿಕೆ ನೀಡಿದೆ.

ವಿಳಂಬಕ್ಕೆ ಅವಕಾಶ ಇಲ್ಲ :
2017ರ ಅಧಿಸೂಚನೆಯಂತೆ ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಒಂದುವರೆ ವರ್ಷದ ನಂತರ ಪೂರ್ಣಗೊಂಡಿದೆ. ಇಷ್ಟುವಿಳಂಬವಾಗಿದ್ದರೂ ಶೇ.50ರಷ್ಟು ಹುದ್ದೆ ಭರ್ತಿ ಮಾಡಿಕೊಳ್ಳಲು ಇಲಾಖೆಗೆ ಸಾಧ್ಯವಾಗಿಲ್ಲ. ಫ‌ಲಿತಾಂಶ ಘೋಷಣೆ, ಅಂಕಪಟ್ಟಿ, 1:3ರ ಅನುಪಾತದ ಪಟ್ಟಿ ಸೇರಿದಂತೆ ಅನೇಕ ಗೊಂದಲದಿಂದ ವಿಳಂಬವಾಗಿತ್ತು. ಹೊಸದಾಗಿ ನಡೆಯಲಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವಾಗದಂತೆ ನಿಗಾವಹಿಸಲು ಡಿಡಿಪಿಐಗಳಿಗೆ ಮಾರ್ಗದರ್ಶನ ಇಲಾಖೆಯಿಂದ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next