ಕುಷ್ಟಗಿ: ಬೇಸಿಗೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕೊಳವೆಬಾವಿಗಳಿಂದ ನೀರು ಸರಬರಾಜು ಮಾಡಲು ನಿರಂತರ ಜ್ಯೋತಿ ವಿದ್ಯುತ್ ಬಳಸಿಕೊಳ್ಳಲಾಗುವುದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಹೇಳಿದರು.
ಇಲ್ಲಿನ ಲೋಕೋಪಯೋಗಿ ಇಲಾಖೆಯಲ್ಲಿ ವಿವಿಧ ಕಾಮಗಾರಿಗಳಿಗೆ 10 ಕೋಟಿ ರೂ. ಕ್ರಿಯಾಯೋಜನೆ ಪ್ರಸ್ತಾವನೆ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬರ ಭೀಕರವಾಗಿದ್ದು, ತಾಲೂಕಿನಾದ್ಯಂತ ವ್ಯಾಪಕವಾಗಿ ನೀರಿನ ಸಮಸ್ಯೆ ಇದೆ. ನೀರಿನ ಸಮಸ್ಯೆ ನಿವಾರಣೆಗೆ ಹಣಕಾಸಿನ ತೊಂದರೆ ಇಲ್ಲ. ಸಮಸ್ಯೆ ಇದ್ದಲ್ಲಿ ಕೂಡಲೇ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಶುಕ್ರವಾರ, ಹನುಮನಾಳದಲ್ಲಿ ಮೂರು ಕೊಳವೆಬಾವಿ ಮಿಟ್ಲಕೋಡ್‌ನಲ್ಲಿ 1 ಕೊಳವೆಬಾವಿ ಕೊರೆಸಲಾಗಿದೆ. ತಾಲೂಕಿನ 61 ಗ್ರಾಮಗಳಲ್ಲಿ 81 ಖಾಸಗಿ ಕೊಳವೆಬಾವಿಯಿಂದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಅನಿಯಮಿತವಾಗಿ ವಿದ್ಯುತ್ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಸಾಧ್ಯವಾಗಿಲ್ಲ. ಇಂತಹ ಖಾಸಗಿ ಕೊಳವೆಬಾವಿಗಳಿಗೆ ನಿರಂತರ ಜ್ಯೋತಿಯ ಸಂಪರ್ಕ ಕಲ್ಪಿಸಲು ಬೇಡಿಕೆ ಬಂದಿದೆ. ಈ ಬೇಡಿಕೆ ಪರಿಗಣಿಸಿ, ನಿರಂತರ ಜ್ಯೋತಿಯಿಂದ ನಿರಂತರ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ನಿರಂತರ ವಿದ್ಯುತ್ ಸಂಪರ್ಕಕ್ಕಾಗಿ ವಿದ್ಯುತ್ ದೀಪದ ಕಂಬ ಅಗತ್ಯವಾದರೆ ಹೊಂದಾಣಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಕಂಬಗಳ ಅಂತರ ಕಡಿಮೆ ಇದ್ದರೆ ವೈಯರ್ ಎಳೆದು ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳುವಂತೆ ಸೂಚಿಸಲಾಗಿದ್ದು, ನಿರಂತರ ಜ್ಯೋತಿ ಸಂಪರ್ಕ ತಾತ್ಕಾಲಿಕ ಮಾತ್ರವಾಗಿದೆ. ಖಾಸಗಿ ಕೊಳವೆಬಾವಿ ಬಾಡಿಗೆ ಒಪ್ಪಂದ ಮುಗಿದ ಬಳಿಕ ನಿರಂತರ ಜ್ಯೋತಿ ಸಂಪರ್ಕ ಕಡಿತಗೊಳಿಸಲಾಗುವುದು ಎಂದರು.
ದಿನಕ್ಕೆ 2 ತಾಸು ನೀರು: ಕಳೆದ ವರ್ಷ ಆಲಮಟ್ಟಿ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ನೀರು ಪಡೆಯಲಾಗಿತ್ತು. ಆದರೀಗ ಅಂತಹ ಕನಿಷ್ಟ ಪರಿಸ್ಥಿತಿ ಇಲ್ಲ. ಈಗಾಗಲೇ 3 ಕೋಟಿ ರೂ. ವೆಚ್ಚದಲ್ಲಿ ಹುನಗುಂದ ಪಂಪ್‌ಹೌಸ್‌ನಲ್ಲಿ 90 ಎಚ್.ಪಿ. ಬದಲಿಗೆ 260 ಎಚ್.ಪಿ., ಇಲಕಲ್ ದರ್ಗಾ ಪಂಪ್‌ಹೌಸ್‌ನಲ್ಲಿ 120 ಎಚ್.ಪಿ. ಬದಲಿಗೆ 120 ಎಚ್.ಪಿ. ಹಾಗೂ ಕುಷ್ಟಗಿ ಪಂಪ್‌ಹೌಸ್‌ನಲ್ಲಿ 60 ಎಚ್.ಪಿ. ಬದಲಿಗೆ 150 ಎಚ್.ಪಿ. ಸಾಮಾರ್ಥ್ಯದ ನೀರೆತ್ತುವ ಮೋಟಾರು ಆಳವಡಿಸಲಾಗುತ್ತಿದೆ. ಸದರಿ ಮೋಟಾರು ಮಹಾರಾಷ್ಟ್ರ ನಾಗಪುರದಿಂದ ಬಂದಿದ್ದು, ಟಿಸಿ, ಬಿಡಿ ಭಾಗಗಳ ಜೋಡಣೆ ಕಾರ್ಯ ನಡೆದಿದೆ. ಇನ್ನೆರಡು ದಿನಗಳಲ್ಲಿ ಕುಷ್ಟಗಿ ಪಟ್ಟಣಕ್ಕೆ ಪರೀಕ್ಷಾರ್ಥ ಪ್ರಯೋಗ ನಡೆಸಿ ನಂತರ ನೀರು ಪೂರೈಸಲಾಗುತ್ತಿದ್ದು, ಇದು ಯಶಸ್ವಿಯಾದರೆ ಪಟ್ಟಣಕ್ಕೆ ನಿರಂತರ ಎರಡು ತಾಸು ನೀರು ಪೂರೈಸಬಹುದಾಗಿದೆ.
ಶೀಘ್ರ ಇನ್ನೆರಡು ಗೋಶಾಲೆ: ತಾಲೂಕಿನಲ್ಲಿ ಸದ್ಯ ಕಲಕೇರಿಯಲ್ಲಿ ಗೋಶಾಲೆ ನಿರಂತರವಾಗಿ ನಡೆದಿದ್ದು, ಹನುಮಸಾಗರ, ತಾವರಗೇರಾದಲ್ಲಿ ಗೋಶಾಲೆ ಆರಂಭಿಸುವಂತೆ 15 ದಿನಗಳ ಹಿಂದೆ ತಹಶೀಲ್ದಾರ್‌ಗೆ ಪತ್ರ ಬರೆಯಲಾಗಿದೆ. ಸದರಿ ತಹಶೀಲ್ದಾರ್, ನಿರ್ಮಿತಿ ಕೇಂದ್ರದವರು, ಶೆಡ್ ನಿರ್ಮಾಣ ಇನ್ನಿತರ ಮೂಲ ಸೌಕರ್ಯ ಕಲ್ಪಿಸಲು ಹಿಂದೇಟು ಹಾಕಿದ್ದರಿಂದ ನೇರವಾಗಿ ಜಿಲ್ಲಾಧಿಕಾರಿಗೆ ವಾಸ್ತವ ವಿವರಿಸಲಾಗಿದೆ. ಜಿಲ್ಲಾಧಿಕಾರಿಗಳು ಸ್ಪಂದಿಸಿರುವುದಾಗಿ ತಿಳಿಸಿದರು.
ಸಮರ್ಪಕವಾಗಿಲ್ಲ ಉದ್ಯೋಗ ಖಾತ್ರಿ: ಉದ್ಯೋಗ ಖಾತ್ರಿ ಯೋಜನೆ 36 ಗ್ರಾಮಗಳಲ್ಲಿ ಸಮರ್ಪಕವಾಗಿ ಕೆಲಸ ನಡೆದಿಲ್ಲ. ಕೇವಲ 8ರಿಂದ 10 ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಬೇಡಿಕೆ, ಒತ್ತಡವಿರುವ ಗ್ರಾಮಗಳಲ್ಲಿ ಕೆಲಸ ನೀಡಲಾಗಿದೆ. ಉಳಿದ ಗ್ರಾಮಗಳ ಕೂಲಿಕಾರರರು, ಕೆಲಸ ಮಾಡಲು ಮುಂದೆ ಬಂದಿಲ್ಲ. ಈ ಸಂಬಂಧ ತಾಪಂ ಇಒ ಸಮಕ್ಷಮದಲ್ಲಿ ಪ್ರತ್ಯೇಕ ಸಭೆಯಲ್ಲಿ ಚರ್ಚಿಸಲಾಗುವುದು
ಲೋಕೋಪಯೋಗಿ ಎಇಇ ಎಚ್.ಬಿ. ಕಂಠಿ, ತಾಜುದ್ದೀನ್, ಸುಧಾಕರ, ಭೂಮಸೇನರಾವ್ ವಜ್ರಬಂಡಿ ಇತರರಿದ್ದರು.