ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳದ ವಿದ್ಯಾರ್ಥಿಯೊಬ್ಬ “ಕಂಪ್ಯೂಟರ್ ಸೈನ್ಸ್’ “ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಪರೀಕ್ಷಾ ಮಂಡಳಿಯ ಸಹಾಯ ವಾಣಿಗೆ ಸುಳ್ಳು ಮಾಹಿತಿ ನೀಡಿದ್ದ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ವದಂತಿಯನ್ನು ಗಂಭೀರ ವಾಗಿ ಪರಿಗಣಿಸಿದ ಪಿಯು ಶಿಕ್ಷಣ ಇಲಾಖೆಯ ನಿರ್ದೇಶಕಿ ಎಂ. ಕನಗವಲ್ಲಿ ಅವರು ಯಶವಂತ ಪುರ ಠಾಣೆಯಲ್ಲಿ ದೂರು ನೀಡಿ ದ್ದಾರೆ.
ಈ ಸಂಬಂಧ ಜಯ ನಗರದ ಖಾಸಗಿ ಕಾಲೇಜೊಂ ದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿ ರುವ 18 ವರ್ಷದ ವಿದ್ಯಾರ್ಥಿ ಯನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ಹೇಳಿದರು. ಮಾ.13 ಸಂಜೆ 7.30 ಗಂಟೆಗೆ ಪಿಯು ಪರೀಕ್ಷಾ ಮಂಡ ಳಿಯ ಸಹಾಯವಾಣಿಗೆ ಕರೆ ಮಾಡಿದ್ದ ವಿದ್ಯಾರ್ಥಿ, ಮಾ.14 ರಂದು ನಡೆಯಲಿರುವ ಕಂಪ್ಯೂಟರ್ ಸೈನ್ಸ್ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.
ಅದರ ಪ್ರತಿ ವಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್ ಅಲ್ಲಿ ಹರಿದಾಡುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಹೇಳಿದ್ದ. ಅಲ್ಲದೆ, ಪಿಯು ಮಂಡಳಿಯ ಅಧಿಕಾರಿಯೊಬ್ಬರ ವಾಟ್ಸ್‌ಆ್ಯಪ್‌ಗೂ “ಕಂಪ್ಯೂಟರ್ ಸೈನ್ಸ್ ಪ್ರಶ್ನೆ ಪ್ರತಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಬದಲಿಸಿ. ಇಲ್ಲವೇ ಪರೀಕ್ಷೆಯನ್ನು ಮುಂದೂಡುವಂತೆ ಮನವಿ ಸಂದೇಶ ಕಳುಹಿಸಿದ್ದ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪರೀಕ್ಷಾ ಮಂಡ ಳಿಯ ಅಧಿಕಾರಿ, ಪಿಯು ಶಿಕ್ಷಣ ಇಲಾಖೆಯ ನಿರ್ದೇ ಶಕಿ ಎಂ.ಕನಗವಲ್ಲಿ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಉತ್ತರ ವಿಭಾಗದ ಡಿಸಿಪಿ ಎನ್.ಶಶಿಕುಮಾರ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಬಳಿಕ ಯಶವಂತ ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದು ವರಿಸಲಾಗಿತ್ತು.
ವಿದ್ಯಾರ್ಥಿ ಕರೆ ಮಾಡಿದ್ದ ಫೋನ್ ನಂಬರನ್ನು ಸಿಡಿಆರ್ ಮೂಲಕ ಪರಿಶೀಲಿಸಿದಾಗ ಜಯನಗರದ 4ನೇ ಬ್ಲಾಕ್‌ನಿಂದ ಕರೆ ಬಂದಿರುವುದು ಖಾತ್ರಿ ಆಯಿತು. ಬಳಿಕ ವಿದ್ಯಾರ್ಥಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಿಸಿದಾಗ ಆತನೇ ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ ಹಬ್ಬಿಸಿರುವುದು ಗೊತ್ತಾಗಿದೆ. ಕೂಡಲೇ ಆತನನ್ನು ಬಂಧಿಸಿ ಬಾಲಾಪರಾಧ ಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುತ್ತೀರ್ಣನಾಗುವ ಭೀತಿ: ವಿದ್ಯಾರ್ಥಿ ಕಂಪ್ಯೂಟರ್ ಸೈನ್ಸ್ ವಿಷಯವನ್ನು ವ್ಯಾಸಂಗ ಮಾಡಿರಲಿಲ್ಲ. ಹೀಗಾಗಿ ಪರೀಕ್ಷೆಯಲ್ಲಿ ಅನುತ್ತೀರ್ಣವಾಗುತ್ತೇನೆ ಎಂದು ಹೆದರಿದ್ದಾನೆ. ಈ ವಿಚಾರವನ್ನು ಸ್ನೇಹಿತರ ಬಳಿಯೂ ಹೇಳಿಕೊಂಡಿದ್ದಾನೆ. ಕೊನೆಗೆ ಪರೀಕ್ಷೆಯೇ ತಪ್ಪಿಸಬೇಕೆಂದು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಎಂದು ನೇರವಾಗಿ ಪರೀಕ್ಷಾ ಮಂಡಳಿಯ ಸಹಾಯವಾಣಿಗೆ ಕರೆ ಮಾಡಿದ್ದಾನೆ.
ಕೊನೆಗೆ ಶಿಕ್ಷಣ ಇಲಾಖೆ ಅಧಿಕಾರಿಯ ನಂಬರ್ ಸಂಗ್ರಹಿಸಿ ಅವರಿಗೂ ಸಂದೇಶ ಕಳುಹಿಸಿದ್ದಾನೆ. ಆದರೆ, ಆತನಿಗೆ ಈ ರೀತಿ ಮಾಡುವುದು ಕಾನೂನು ಬಾಹಿರ ಎಂಬುದು ಗೊತ್ತಿಲ್ಲ. ಪರೀಕ್ಷೆ ಮುಂದೂಡುವ ಉದ್ದೇಶದಿಂದಲೇ ವದಂತಿ ಹಬ್ಬಿಸಿದ್ದೆ ಎಂದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆತನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.