Advertisement

ಮುದ್ದೇಬಿಹಾಳ: SSLC ಪ್ರಶ್ನೆಪತ್ರಿಕೆ ಬಹಿರಂಗ: ಹಲವರ ತಲೆದಂಡ, ಕ್ರಿಮಿನಲ್ ಮೊಕದ್ದಮೆ ದಾಖಲು

08:05 PM Apr 07, 2022 | Team Udayavani |

ಮುದ್ದೇಬಿಹಾಳ: ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗಿರುವ ಪ್ರಕರಣ ಹಿನ್ನೆಲೆ ಮುದ್ದೇಬಿಹಾಳ ತಾಲೂಕು ಢವಳಗಿಯ ಎಂಬಿಪಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದ ಹಲವರ ತಲೆದಂಡವಾಗಿದ್ದು ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಲಾಗಿದೆ.

Advertisement

ಪ್ರಶ್ನೆಪತ್ರಿಕೆ ಸೋರಿಕೆಯಾಗಲು ಸಹಕರಿಸಿರುವ ರೂಢಗಿ ಗ್ರಾಮದ ಸರ್ಕಾರಿ ಆರ್ ಎಂಎಸ್ಎ ಪ್ರೌಢಶಾಲೆಯ ವಿದ್ಯಾರ್ಥಿ ಬಸವರಾಜ ಕುಂದರಗಿಯನ್ನು ಪರೀಕ್ಷೆಯಿಂದ ಡಿಬಾರ್ ಮಾಡಲಾಗಿದ್ದು,ಅವನ  ಪ್ರಶ್ನೆಪತ್ರಿಕೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡ ವ್ಯಕ್ತಿಯ ವಿರುದ್ಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಶಿಕ್ಷಣ ಕಾಯ್ದೆ 1983 ಮತ್ತು 2017ರ ತಿದ್ದುಪಡಿ ಕಾಯ್ದೆ ಅನ್ವಯ ಬಿಇಓ ಎಚ್.ಜಿ.ಮಿರ್ಜಿ ಅವರು ಎಫ್ಐಆರ್ ದಾಖಲಿಸಿದ್ದಾರೆ.

ಪ್ರಶ್ನೆಪತ್ರಿಕೆ ಬಹಿರಂಗಗೊಂಡ ಕೊಠಡಿಯ ಮೇಲ್ವಿಚಾರಕರಾಗಿದ್ದ ಮಡಿಕೇಶ್ವರ ಗ್ರಾಮದ ಸತ್ ಸಂಸ್ಕಾರ ಖಾಸಗಿ ಅನುದಾನಿತ ಶಾಲೆಯ ಶಿಕ್ಷಕ ಬಿ.ಎಸ್.ಪೋಲೇಸಿ ಅವರನ್ನು ವಿಜಯಪುರ ಡಿಡಿಪಿಐ ಎನ್.ವಿ.ಹೊಸೂರ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆ ಕುರಿತ ಪತ್ರವನ್ನು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಿಗೆ ನೀಡಿ ಅವರನ್ನು ಬಿಡುಗಡೆಗೊಳಿಸಲು ಸೂಚಿಸಿದ್ದಾರೆ.

ಇದನ್ನೂ ಓದಿ: ಬಲಮುರಿ ದೇವಾಲಯದ ಹುಂಡಿ ಮತ್ತೆ ಕಳ್ಳತನ : ಮೂರು ತಿಂಗಳ ಹಿಂದಷ್ಟೇ ಕಳ್ಳತನವಾಗಿತ್ತು…

ಸ್ಥಾನಿಕ ಜಾಗೃತ ದಳದ ಅಧಿಕಾರಿಯಾಗಿದ್ದ ಬಿದರಕುಂದಿ ಆರ್ ಎಂಎಸ್ಎ ಆದರ್ಶ ಶಾಲೆಯ ಶಿಕ್ಷಕಿ ಎಸ್.ಎಲ್.ಸೋಂಪೂರ ಅವರನ್ನು ಪರೀಕ್ಷಾ ಕರ್ತವ್ಯದಿಂದ ಬಿಡುಗಡೆಗೊಳಿಸಿ ನೋಟಿಸ್ ಜಾರಿ ಮಾಡಲಾಗಿದೆ.

Advertisement

ಮುಖ್ಯ ಅಧೀಕ್ಷಕ ಎಂಬಿಪಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಬಿ.ಎಸ್.ಪಾಟೀಲ ಮತ್ತು ಪ್ರಶ್ನೆಪತ್ರಿಕೆ ಅಭಿರಕ್ಷಕ ಜಮ್ಮಲದಿನ್ನಿ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆಯ ಶಿಕ್ಷಕ ವೈ.ವಿ.ಕನ್ನೂರ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಅವರ ಜಾಗದಲ್ಲಿ ಕ್ರಮವಾಗಿ ಜಮ್ಮಲದಿನ್ನಿ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆಯ ಪ್ರಾಂಶುಪಾಲ ಬಿ.ಎಂ.ಬಸವಂತಪುರ ಮತ್ತು ಕೋಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್.ಎನ್.ರಾಠೋಡ ಅವರನ್ನು ನೇಮಿಸಲಾಗಿದೆ. ಕರ್ತವ್ಯದಿಂದ ಬಿಡುಗಡೆಗೊಳಿಸಿದ ಇಬ್ಬರಿಗೂ ಕಾರಣ ಕೇಳುವ ನೋಟಿಸ್ ಜಾರಿಗೊಳಿಸಲಾಗಿದೆ.

ಸದರಿ ಪರೀಕ್ಷಾ ಕರ್ತವ್ಯಕ್ಕೆ ನೇಮಕಗೊಂಡಿದ್ದ ಎಲ್ಲ ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬದಲಾಯಿಸಿ ಅವರ ಜಾಗದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಜಿಟಿ, ಟಿಜಿಟಿ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ ಎಂದು ಬಿಇಓ ಎಚ್.ಜಿ.ಮಿರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬುಧವಾರ ನಡೆದಿದ್ದ ಎಸ್ ಎಸ್ ಎಲ್ ಸಿ ಸಮಾಜ ವಿಜ್ಞಾನ ಪರೀಕ್ಷೆಯ ವೇಳೆ ಪರೀಕ್ಷೆ ಪ್ರಾರಂಭಗೊಂಡ ಒಂದು ಗಂಟೆಯಲ್ಲೇ ಪ್ರಶ್ನೆಪತ್ರಿಕೆ ರಾಯಚೂರು ಜಿಲ್ಲೆ ಮುದಗಲ್ಲಿನಲ್ಲಿ ಬಹಿರಂಗಗೊಂಡು ಶಿಕ್ಷಣ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದುದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next