ದಾವಣಗೆರೆ: ಹರಿಹರ ತಾಲೂಕಿನ ಬನ್ನಿ ಕೋಡು ಗ್ರಾಮದಲ್ಲಿ ಗಂಡ ಹೆಂಡತಿಯ ನಡುವೆ ಚಿಕನ್ ಊಟದ ವಿಚಾರವಾಗಿ ಜಗಳವಾಗಿ ತಾರಕಕ್ಕೇರಿ ಹೆಂಡತಿಯನ್ನೇ ಚಾಕುವಿನಿಂದ ಇರಿದುಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ಮಹಿಳೆ ಶೀಲಾ ಎನ್ನುವವಳಾಗಿದ್ದು,ಬನ್ನಿಕೋಡು ಗ್ರಾಮದ ರೋಡ್ ರೋಲರ್ ಅಪರೇಟರ್ ಆಗಿದ್ದ ಕೆಂಚಪ್ಪ ಎನ್ನುವವನ ಜತೆ 9 ವರ್ಷಗಳ ಹಿಂದೆ ಮದುವೆಯಾಗಿತ್ತು. ಹರಿಹರ ತಾಲೂಕಿನ ವಾಸನ ಗ್ರಾಮದ ಶೀಲಾಳನ್ನು ಕೆಂಚಪ್ಪ ಪ್ರೀತಿಸಿದ್ದು, ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು.
ಕೆಂಚಪ್ಪನಿಗೆ ಮೊದಲೇ ಮದುವೆಯಾಗಿ, ಮಕ್ಕಳಿಲ್ಲ ಎನ್ನುವ ಕಾರಣಕ್ಕೆ ತನ್ನನ್ನು ಮದುವೆಯಾಗಿದ್ದಾನೆ ಎಂಬುದು ಶೀಲಾಳಿಗೆ ಇತ್ತೀಚೆಗೆ ಗೊತ್ತಾಗಿತ್ತು. ಇದೇ ವಿಚಾರದಲ್ಲಿ ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಕೆಂಚಪ್ಪ ಕೂಡ ಮದ್ಯ ಸೇವನೆ ಮಾಡಿ ರಾದ್ದಾಂತ ಮಾಡುತ್ತಿದ್ದ, ಇದು ಎರಡು ಮನೆಯವರಿಗೆ ಗೊತ್ತಾಗಿ ರಾಜಿ ಪಂಚಾಯತಿ ಮಾಡಿ ಹೋಗಿದ್ದರು.
ಬುಧವಾರ ರಾತ್ರಿ ಮದ್ಯ ಸೇವನೆ ಮಾಡಿ ಬಂದ ಕೆಂಚಪ್ಪ ಹೆಂಡತಿಗೆ ಚಿಕನ್ ಅಡುಗೆ ಮಾಡಿಲ್ಲ ಎಂದು ಜಗಳವಾಡಿ ಕೊನೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮಲೇಬೆನ್ನೂರು ಪೊಲೀಸರು ಕೆಂಚಪ್ಪನನ್ನು ಬಂಧಿಸಿದ್ದಾರೆ.