ಕೊಲ್ಲೂರು: ಲಾಕ್‌ಡೌನ್ ಉಲ್ಲಂಘಿಸಿ ತೆಲಂಗಾಣದಿಂದ ಬಂದ ಕಾರನ್ನು ಕೊಲ್ಲೂರು ಪೊಲೀಸರು ಮಂಗಳವಾರ ವಶಕ್ಕೆ ತೆಗೆದುಕೊಂಡಿದ್ದು, ಅದರಲ್ಲಿದ್ದ 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೆಲಂಗಾಣದಲ್ಲಿ ಉದ್ಯಮಿಯಾಗಿರುವ ಉಳ್ತುರು ಮೂಲದ ವ್ಯಕ್ತಿಯ ತಂದೆ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಶವಸಂಸ್ಕಾರಕ್ಕೆ ಸ್ನೇಹಿತರೊಡನೆ ಇಲ್ಲಿಗೆ ಆಗಮಿಸಿದ್ದರು ಎನ್ನಲಾಗಿದೆ. ಗುಂಪುಗೂಡಿ ಸಂಚರಿಸಿರುವುದರಿಂದ ಸಾರ್ವಜನಿಕ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ ಎಂಬ ಹಿನ್ನೆಲೆ ಯಲ್ಲಿ ಇಲ್ಲಿನ ಪೊಲೀಸರು ಅವರು ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಎಎಸ್‌ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ, ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಕೊಲ್ಲೂರು ಠಾಣಾಧಿಕಾರಿ ಮಹಾದೇವ ಭೋಂಸ್ಲೆ ಹಾಗೂ ಸಿಬಂದಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬಂದಿಯ ಸಹಕಾರದೊಡನೆ ಅವರನ್ನು ಹೋಂ ಕ್ವಾರಂಟೈನ್‌ಗೆ ಒಪ್ಪಿಸಿದರು.
ಎಲ್ಲ ಚೆಕ್‌ಪೋಸ್ಟ್‌ಗಳಲ್ಲೂ ಪಾಸ್!
ಕಾರು ತೆಲಂಗಾಣದ ಮೆಹಬೂಬ್ ಜಿಲ್ಲೆಯಿಂದ ಹೊರಟಿದ್ದು ರಾಯಚೂರು, ಗಂಗಾವತಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ಮೂಲಕ ಉಡುಪಿ ಜಿಲ್ಲೆಯನ್ನು ಪ್ರವೇಶಿಸಿದೆ. ಈ ನಡುವಿನ ಎಲ್ಲ ಚೆಕ್‌ಪೋಸ್ಟ್ ಗಳನ್ನೂ ದಾಟಿ ಬಂದಿರುವ ಕಾರು ಕೊಲ್ಲೂರಿನ ಬಳಿ ಚೆಕ್‌ಪೋಸ್ಟ್ ನಲ್ಲಿ ಪೊಲೀಸರ ವಶವಾಗಿದೆ. ಕೋವಿಡ್ ಹಾಟ್‌ಸ್ಪಾಟ್ ಆಗಿರುವ ತೆಲಂಗಾಣದಿಂದ ಬಂದಿರುವ ಕಾರಣ ಯಾವುದೇ ಕಾರಣಕ್ಕೂ ಮುಂದೆ ಸಾಗಲು ಬಿಡಲಾಗದು ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿದ್ದವರನ್ನು ಚಿತ್ತೂರು ಸಮೀಪದ ಮನೆಯೊಂದರಲ್ಲಿ ಪೊಲೀಸ್ ಭದ್ರತೆ ಸಹಿತ ಮೇ 18ರ ತನಕ ಕ್ವಾರಂಟೈನ್ ಮಾಡಲಾಗಿದೆ.