Advertisement

ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್‌ ಕಡ್ಡಾಯ

04:14 AM May 13, 2020 | Suhan S |

ಧಾರವಾಡ: ಜಿಲ್ಲೆಗೆ ದೇಶದ ಯಾವುದೇ ರಾಜ್ಯದಿಂದ ಬರುವ ಜನರನ್ನು ನೋಂದಾಯಿಸಿ ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗಡಿಜಿಲ್ಲೆಗಳ ಚೆಕ್‌ಪೋರ್ಸ್ ಗಳಲ್ಲಿ ರಾಜ್ಯಕ್ಕೆ ಆಗಮಿಸುವ ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಕೆಮ್ಮು, ನೆಗಡಿ, ಜ್ವರದ ಲಕ್ಷಣ ಇರುವವರನ್ನು ಕೆಟಗೆರಿ-1, ರೋಗ ಲಕ್ಷಣ ಇಲ್ಲದೇ ಇರುವವರನ್ನು ಕೆಟಗೆರಿ-2 ಎಂದು ವರ್ಗಿàಕರಿಸುತ್ತಿದ್ದಾರೆ. ಕೆಟಗೆರಿ-1ರ ಜನರನ್ನು ಜಿಲ್ಲೆಗಳಲ್ಲಿ ಸರ್ಕಾರಿ ಕ್ವಾರಂಟೈನ್‌ ಮಾಡಲಾಗುತ್ತಿದೆ. 99.5 ಡಿಗ್ರಿ ಫ್ಯಾರನ್‌ ಹೀಟ್‌ ಅಥವಾ 37.5 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ದೇಹ ಉಷ್ಣಾಂಶ ಹೊಂದಿರುವವರು ಅಥವಾ ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಇರುವವರನ್ನು ಕೆಟಗೆರಿ-1ರಲ್ಲಿ ವರ್ಗಿàಕರಿಸಿ, ಜಿಲ್ಲೆಯ ನಿಗದಿತ ಕೋವಿಡ್‌ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ದೇಶದ ಯಾವುದೇ ರಾಜ್ಯಗಳಿಂದ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದರು.

ಪ್ರಯಾಣಿಕರನ್ನು ತಪಾಸಣೆ ಮಾಡಿ, ಆರೋಗ್ಯ ಆಧರಿಸಿ ವರ್ಗೀಕರಣ ಮಾಡುತ್ತಿದ್ದಾರೆ. ರಕ್ತದೊತ್ತಡ, ಮಧುಮೇಹ, ಅಸ್ತಮಾ ಅಥವಾ ಶ್ವಾಸಕೋಶ ಸಂಬಂಧಖಾಯಿಲೆಗಳು, ಅಂಗಾಂಗ ಕಸಿ, ಕ್ಯಾನ್ಸರ್‌, ಜಠರ, ಕಿಡ್ನಿ, ಹೃದಯ, ಕ್ಷಯ ಸೇರಿದಂತೆ ರೋಗನಿರೋಧಕ ಶಕ್ತಿ ಕಡಿಮೆ ಇರುವ ಜನರ ಆರೋಗ್ಯ ಹಿನ್ನೆಲೆ ಸಂಗ್ರಹಿಸುತ್ತಿದ್ದಾರೆ. ಯಾವುದೇ ರೋಗದ ಗುಣಲಕ್ಷಣ ಇಲ್ಲದವರನ್ನು ಕೆಟಗೆರಿ-2 ಎಂದು ವರ್ಗಿàಕರಿಸಿ ಅವರನ್ನು ಶಾಲೆ, ಹಾಸ್ಟೇಲ್‌ ಅಥವಾ ಗುರುತಿಸಿದ ನಿರ್ದಿಷ್ಟ ಸ್ಥಳಗಳಲ್ಲಿ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗುತ್ತಿದೆ ಎಂದರು.

ಕಾಲ್ನಡಿಗೆ, ದ್ವಿಚಕ್ರವಾಹನ ಅಥವಾ ಬೇರೆ ಯಾವುದೇ ವ್ಯವಸ್ಥೆಯಲ್ಲಿ ಜಿಲ್ಲೆಗೆ ಪ್ರವೇಶಿಸಿರುವ ಸಾಧ್ಯತೆಗಳಿರುತ್ತವೆ. ಅಂತಹವರನ್ನು ಗುರುತಿಸಿ ಆರೋಗ್ಯ ತಪಾಸಣೆ ಮಾಡಿ, ಕ್ವಾರಂಟೈನ್‌ಗೆ ಒಳಪಡಿಸುವ ಕಾರ್ಯವನ್ನು ನಗರ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮಮಟ್ಟದಲ್ಲಿ ಗ್ರಾ.ಪಂ ಅಧಿಕಾರಿಗಳು ನಿರ್ವಹಿಸಬೇಕು. ಕ್ವಾರಂಟೈನ್‌ ನಿಯಮ ಉಲ್ಲಂಘಿಸುವವರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಜನರು ತಮ್ಮ ಊರು, ಬಡಾವಣೆ, ಅಕ್ಕಪಕ್ಕದ ಮನೆಗಳಿಗೆ ಬೇರೆ ರಾಜ್ಯಗಳಿಂದ ಆಗಮಿಸಿದ್ದರೆ ಆ ಕುರಿತು ಸಹಾಯವಾಣಿ ಸಂಖ್ಯೆ 1077 ಅಥವಾ ವಾಟ್ಸ್‌ ಆ್ಯಪ್‌ ಸಂಖ್ಯೆಗಳಾದ 9449847641/46ಕ್ಕೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ತಿಳಿಸಿದರು. ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದ ಮುಖ್ಯ ವಾಣಿಜ್ಯ ಪ್ರಧಾನ ವ್ಯವಸ್ಥಾಪಕ ಡಾ|ಮಂಜುನಾಥ ಕನಮಡಿ, ಜಿ.ಪಂ ಸಿಇಒ ಡಾ| ಬಿ.ಸಿ. ಸತೀಶ್‌, ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಅಪರ ಜಿಲ್ಲಾ ಧಿಕಾರಿ ಶಿವಾನಂದ ಕರಾಳೆ, ಡಿಎಚ್‌ಒ ಡಾ| ಯಶವಂತ ಮದೀನಕರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next