Advertisement

ರೈತರಿಗೆ ಗುಣಮಟ್ಟದ ವಿದ್ಯುತ್‌ ಪೂರೈಕೆ: ವಿ. ಸುನೀಲ್‌ ಕುಮಾರ್‌

07:19 PM Nov 24, 2022 | Team Udayavani |

ಸಾಗರ: ಯಾವುದೇ ಹಂತದಲ್ಲೂ ರೈತರಿಗೆ ತೊಂದರೆ ಆಗದಂತೆ ವಿದ್ಯುತ್‌ ಉತ್ಪಾದನೆ ಹಾಗೂ ಬೇಡಿಕೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇಂಧನ ಇಲಾಖೆ ಮೂಲಕ ರಾಜ್ಯದ ರೈತರಿಗೆ ಉಚಿತ ವಿದ್ಯುತ್‌ ನೀಡುವ ನಿಟ್ಟಿನಲ್ಲಿ 16 ಸಾವಿರ ಕೋಟಿ ರೂ. ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್‌ ಹೇಳಿದರು.

Advertisement

ತ್ಯಾಗರ್ತಿಯಲ್ಲಿ ಗುರುವಾರ ಹನ್ನೆರಡು ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಿರುವ 110/11 ಕೆವಿ ವಿದ್ಯುತ್‌ ಉಪಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 46 ಉಪಕೇಂದ್ರಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ರೈತರಿಗೆ ಗುಣಮಟ್ಟದ ವಿದ್ಯುತ್‌ ಪೂರೈಕೆ ಮಾಡುವ ಸಲುವಾಗಿ ಇಂಧನ ಇಲಾಖೆ ತೆಗೆದುಕೊಂಡಿರುವ ಗಟ್ಟಿ ನಿಲುವಿನ ಪರಿಣಾಮ ಇಂತಹ ಯೋಜನೆ ರೂಪಿಸಲಾಗಿದೆ ಎಂದರು.

ಶಿವಮೊಗ್ಗ ಜಿಲ್ಲೆಯ ಏಳು ಕಡೆ ಉಪಕೇಂದ್ರ ಪ್ರಾರಂಭವಾಗುತ್ತಿದೆ.  ಬೆಳಕು’ ಯೋಜನೆಯಡಿ ಗ್ರಾಮೀಣ ಪ್ರದೇಶದ ಬಡಜನರ ಮನೆಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ.  ಅಮೃತ ಜ್ಯೋತಿ’ ಯೋಜನೆಯಡಿ ಪರಿಶಿಷ್ಟ ಸಮುದಾಯದವರಿಗೆ 75 ಯೂನಿಟ್‌ ಉಚಿತ ವಿದ್ಯುತ್‌ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಹಿಂದಿನ ಸರ್ಕಾರದಲ್ಲಿ ವರ್ಷಾನುಗಟ್ಟಲೆ ಹಿಡಿಯುತ್ತಿದ್ದ ಅಭಿವೃದ್ಧಿ ಕಾರ್ಯಗಳು ನಮ್ಮ ಸರ್ಕಾರ ಬಂದ ನಂತರ ತ್ವರಿತಗತಿಯಲ್ಲಿ ಆಗುತ್ತಿವೆ. ರೈತರಿಗೆ ಶಕ್ತಿ ನೀಡುವಂತಹ ಪುಣ್ಯದ ಕೆಲಸ ನಮ್ಮ ಸರ್ಕಾರದ ವತಿಯಿಂದ ಆಗುತ್ತಿದೆ. ಕಿಸಾನ್‌ ಸಮ್ಮಾನ್‌ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ರೂಪಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ ಎಂದರು.

Advertisement

ಶಾಸಕ ಎಚ್‌.ಹಾಲಪ್ಪ ಹರತಾಳು ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಯಾವುದೇ ಭಾಗದ ಅಭಿವೃದ್ಧಿಯಲ್ಲಿ ಕಿಂಚಿತ್‌ ವ್ಯತ್ಯಯವಾಗುವುದನ್ನು ಸಹಿಸಿಲ್ಲ. ಅದರ ಪರಿಣಾಮವಾಗಿ ನಿರೀಕ್ಷಿಸಲಾಗದ ಪ್ರಭಾವ ನಮ್ಮಲ್ಲಾಗಿದೆ ಎಂದರು.

ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಹಿರಿಯ ಕಲಾವಿದರಾದ ಬಿ. ಟಾಕಪ್ಪ, ವಸುಧಾ ಶರ್ಮ ಸೇರಿದಂತೆ ವಿವಿಧ ಹಿರಿಯ ಕಲಾವಿದರಿಗೆ ಗುರುತಿನಪತ್ರ ನೀಡಲಾಯಿತು. ಕೆಪಿಟಿಸಿಎಲ್‌ ಮುಖ್ಯ ಇಂಜಿನಿಯರ್‌ ಎಂ.ಆರ್‌. ಶ್ಯಾನಭಾಗ್‌, ಅ ಧೀಕ್ಷಕ ಎಂಜಿನಿಯರ್‌ ಕೆ.ಸುರೇಶ್‌, ಬರೂರು ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಪುಟ್ಟಪ್ಪ, ತ್ಯಾಗರ್ತಿ ಗ್ರಾಪಂ ಅಧ್ಯಕ್ಷೆ ಚೈತ್ರಾ ಟಾಕಪ್ಪ, ಉಪಾಧ್ಯಕ್ಷ ಇಸಾಕ್‌, ಹಿರೇಬಿಲಗುಂಜಿ ಗ್ರಾಪಂ ಪ್ರಭಾರಿ ಅಧ್ಯಕ್ಷ ಸೋಮಶೇಖರ್‌ ಕುಣಿಕೆರಿ, ತಹಶೀಲ್ದಾರ್‌ ಮಲ್ಲೇಶ್‌ ಬಿ. ಪೂಜಾರ್‌, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್‌ ಮತ್ತಿತರರು ಇದ್ದರು.

ಡಬಲ್‌ ಎಂಜಿನ್‌ನಿಂದ ಕಾರ್ಯಸಿದ್ಧಿ:

ಕುಡಿಯುವ ನೀರಿನ ಯೋಜನೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಹೆಸರು ಹಾಕಬೇಕಿತ್ತು ಎಂಬ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಕಾಗೋಡು ಅವರ ಬಗ್ಗೆ ಯಾವತ್ತೂ ಗೌರವಕ್ಕೆ ಕೊರತೆಯಿಲ್ಲ. ಅಂಬ್ಲಿಗೊಳದಿಂದ ಕುಡಿಯುವ ನೀರು ಯೋಜನೆಗೆ ಕಾಗೋಡು ಅವರ ಪ್ರಯತ್ನ ನಡೆದಿರಬಹುದು, ಕೆಲಸ ಆಗಿರಲಿಲ್ಲ. ಈಗ ನಾನು, ಸಂಸದ ಬಿ.ವೈ.ರಾಘವೇಂದ್ರ ಅವರ ಡಬಲ್‌ ಇಂಜಿನ್‌ ಪ್ರಯತ್ನದಿಂದ ಸಾಕಾರವಾಗಿದೆ ಎಂದು ಶಾಸಕ ಹಾಲಪ್ಪ ಹರತಾಳು ಹೇಳಿದರು.

ರಾಜಕೀಯ ಕಾರಣಕ್ಕಾಗಿ ನಮ್ಮ ಮೇಲೆ ಮುಳುಗಡೆ ರೈತರ ವಿಷಯ ಇಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ. 1962ರಲ್ಲಿ 24,567 ಎಕರೆ ಕೃಷಿಭೂಮಿ ವಿದ್ಯುತ್‌ ಉತ್ಪಾದನೆಗಾಗಿ ಮುಳುಗಡೆಯಾಗಿದೆ. ಆ ಕಾಲದಲ್ಲಿ ಮುಳುಗಡೆ ಪ್ರದೇಶದ ರೈತರನ್ನು ರಾತ್ರೋರಾತ್ರಿ ಲಾರಿಯಲ್ಲಿ ತಂದು ಬೇರೆ ಬೇರೆ ಕಡೆ ಬಿಡಲಾಗಿದೆ. ಆ ರೈತರು ಅಲ್ಲಿರುವ ಜಮೀನುಗಳನ್ನು ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಕಾಂಗ್ರೆಸ್‌ ಮುಖಂಡರು ಕಾನೂನು ಪ್ರಕಾರ ಮಾಡಬೇಕಾಗಿದ್ದ ಪ್ರಕ್ರಿಯೆ ಮಾಡದೆ ಈಗ ರೈತರನ್ನು ಒಕ್ಕಲೆಬ್ಬಿಸುತ್ತಾರೆ ಎಂಬ ವದಂತಿ ಹರಿಬಿಟ್ಟು ಮುಳುಗಡೆ ರೈತರ ಸಮಸ್ಯೆಗೆ ಬಿಜೆಪಿ ಸರ್ಕಾರ ಕಾರಣ ಎಂದು ಆರೋಪಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಗೋಡು ತಿಮ್ಮಪ್ಪನವರು ವಿವಿಧ ಖಾತೆಗಳ ಸಚಿವರಾಗಿದ್ದವರು. ಕಂದಾಯ ಸಚಿವರಾಗಿದ್ದಾಗ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯದೆ ಜಮೀನು ಡಿ- ನೋಟಿಫಿಕೇಶನ್‌ ಮಾಡಿದ್ದು ತಪ್ಪಾಗಿದೆ ಎಂದು ಕೋರ್ಟ್‌ ಹೇಳಿದೆ. ಅದನ್ನು ಸರಿಪಡಿಸುವ ಕೆಲಸಗಳನ್ನು ನಾವು  ಮಾಡುತ್ತೇವೆ. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಒಂದು ಗುಂಟೆ ಜಮೀನು ಕೈಬಿಡದಂತೆ ನೋಡಿಕೊಳ್ಳುತ್ತೇವೆ. ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next