Advertisement

ಇಸ್ಲಾಂ ವಿಧಿ-ವಿಧಾನದಂತೆ ಖಮರುಲ್‌ ಅಂತ್ಯಕ್ರಿಯೆ

10:02 AM Sep 20, 2017 | |

ಕಲಬುರಗಿ: ಸೋಮವಾರ ನಿಧನರಾದ ಕಲಬುರಗಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್‌ ಶಾಸಕ ಖಮರುಲ್‌ ಇಸ್ಲಾಂ ಅವರ ಅಂತ್ಯಕ್ರಿಯೆ ಮಂಗಳವಾರ ರಾತ್ರಿ ಜಿಲ್ಲಾ ನ್ಯಾಯಾಲಯ ರಸ್ತೆಯ ಖಬರಸ್ತಾನ್‌ ರೋಜಾ ಇ-ಖಲಾಂದರ್‌ ಖಾನ್‌ದಲ್ಲಿ ಇಸ್ಲಾಂ ಧರ್ಮದ ವಿಧಿ ವಿಧಾನಗಳ ಪ್ರಕಾರ ನಡೆಯಿತು.

Advertisement

ಇಲ್ಲಿನ ಕೆಸಿಟಿ ಎಂಜಿನಿಯರಿಂಗ್‌ ಕಾಲೇಜು ಮೈದಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಪ್ರಾರ್ಥನೆ ಹಾಗೂ ಅಂತಿಮ ನಮನ ಸಲ್ಲಿಸಿದ ನಂತರ, ಪಾರ್ಥಿವ ಶರೀರವನ್ನು ಪಾದಯಾತ್ರೆ ಹಾಗೂ ತೆರೆದ ವಾಹನದಲ್ಲಿ ವಿವಿಧ ರಸ್ತೆಗಳ ಮೂಲಕ ಖಬರಸ್ತಾನ್‌ ರೋಜಾ ಇ-ಖಲಾಂದರ್‌ ಖಾನ್‌ಗೆ ತೆರಳಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯದ ಉಸ್ತುವಾರಿ ವೇಣುಗೋಪಾಲ, ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌, ಸಚಿವರಾದ ಡಾ.ರೋಷನ್‌ ಬೇಗ್‌, ತನ್ವೀರ್‌ ಸೇs…, ಯು.ಟಿ. ಖಾದರ್‌,
ಎಂ.ಬಿ.ಪಾಟೀಲ, ಡಾ. ಶರಣಪ್ರಕಾಶ ಪಾಟೀಲ, ಈಶ್ವರ ಖಂಡ್ರೆ, ಪ್ರಿಯಾಂಕ ಖರ್ಗೆ, ಖಾಜಾ ಬಂದೇನವಾಜ್‌ ದರ್ಗಾದ ಸಜ್ಜಾದೆ ನಸೀನ್‌ ಡಾ.ಸೈಯದ್‌ ಷಾ ಖುಸ್ರೋ ಹುಸೇನಿ ಸೇರಿ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ಅಖೀಲ ಭಾರತ ಮಿಲ್ಲಿ ಕೌನ್ಸಿಲ್‌ನ ಪದಾಧಿಕಾರಿಗಳು, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯರು, ವಿವಿಧ ಧಾರ್ಮಿಕ ಗುರುಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು, ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಅಗಲಿದ ನಾಯಕನಿಗೆ ಕಂಬನಿ ಮಿಡಿದರು.

ಖಮರುಲ್‌ ಇಸ್ಲಾಂ ಅವರು ಸದಾ ಅಭಿವೃದ್ಧಿಗಾಗಿ ಸದನದ ಒಳಗೆ- ಹೊರಗೆ ಬಡಿದಾಡುತ್ತಿದ್ದರು. ಇದು ಅವರು ಬಡವರ ಪರ ಹೊಂದಿರುವ ಕಾಳಜಿ ನಿರೂಪಿಸುತ್ತದೆ. ಪೌರಾಡಳಿತ ಸಚಿವರಾಗಿ ನನ್ನ ಸಂಪುಟದಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಎಐಸಿಸಿ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಅವರ ನಿಧನದಿಂದ ರಾಜ್ಯಕ್ಕೆ ಹಾಗೂ ಕಾಂಗ್ರೆಸ್‌ಗೆ ಅಪಾರ ನಷ್ಟವಾಗಿದೆ.
●ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

ಖಮರುಲ್‌ ಇಸ್ಲಾಂ ಅವರು ಸದಾ ಬಡವರ ಪರ, ಅಭಿವೃದ್ಧಿಗಾಗಿ ಹೋರಾಡುತ್ತಿದ್ದರು. ಅಲ್ಪಸಂಖ್ಯಾತರ ಸಮಸ್ಯೆಯನ್ನು ತಮ್ಮದೆಂದೇ ಅಭಿವ್ಯಕ್ತಪಡಿಸುತ್ತಿದ್ದರು. ಜನರನ್ನು ತಮ್ಮತ್ತ ಸೆಳೆದುಕೊಳ್ಳುವ ಶಕ್ತಿ ಅವರಲ್ಲಿತ್ತು. ಅವರ ನಿಧನವು ಹೈದ್ರಾಬಾದ್‌-ಕರ್ನಾಟಕಕ್ಕೆ, ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ.
●ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next