Advertisement

ಮಂಜುನಾಥ್‌ ಮೇಳಕುಂದಿಯೇ ಆರೋಪಿ, ನಾನಲ್ಲ

01:56 AM May 14, 2022 | Team Udayavani |

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ಪರೀಕ್ಷೆ ಅಕ್ರಮದಲ್ಲಿ ಅನ್ನಪೂರ್ಣೇಶ್ವರಿನಗರ ಪೊಲೀಸರ ವಶದಲ್ಲಿರುವ ಆರ್‌.ಡಿ. ಪಾಟೀಲ್‌ ವಿಚಾರಣೆ ವೇಳೆ ಮತ್ತೊಮ್ಮೆ ಮಂಜುನಾಥ್‌ ಮೇಳಕುಂದಿ ಮೇಲೆ ಆರೋಪ ಮಾಡುತ್ತಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಲೋಕೋಪಯೋಗಿ ಇಲಾಖೆ ಪರೀಕ್ಷೆ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದು ಮಂಜುನಾಥ್‌ ಮೇಳಕುಂದಿ, ಲೋಕೋಪಯೋಗಿ ಇಲಾಖೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಎಲ್ಲಿ ಮುದ್ರಣವಾಗುತ್ತದೆ ಎಂಬುದು ಗೊತ್ತಿರುವುದು ಆತನಿಗೆ. ಯಾಕೆಂದರೆ ಲೋಕೋಪಯೋಗಿ ಆತನ ಮಾತೃ ಇಲಾಖೆ. ಉದ್ದೇಶಪೂರ್ವಕವಾಗಿಯೇ ನನ್ನ ಮೇಲೆ ಆರೋಪ ಮಾಡಿದ್ದಾನೆ. ಅಲ್ಲದೆ, ಯಾರಿಂದಲೂ ಹಣ ಪಡೆದಿಲ್ಲ. ಬೇಕಾದರೆ ತನ್ನ ಬ್ಯಾಂಕ್‌ ಮಾಹಿತಿ ನೀಡುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಆರೋಪ ಸುಳ್ಳು ಎಂದು ಹೇಳಲು ದೂರು
ಈ ಮಧ್ಯೆ ಮಂಜುನಾಥ್‌ ಮೇಳಕುಂದಿ ವಿರುದ್ಧ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರಿಸಿರುವ ಆರ್‌.ಡಿ. ಪಾಟೀಲ್‌, ಪೊಲೀಸರ ವಿಚಾರಣೆಯಲ್ಲಿ ಮಂಜುನಾಥ್‌ ತನ್ನ ಹೆಸರು ಹೇಳಿದ್ದ. ಆದರೆ ಈ ಅಕ್ರಮದಲ್ಲಿ ತನ್ನ ಪಾತ್ರವಿಲ್ಲ ಎಂದು ಪರೋಕ್ಷವಾಗಿ ಹೇಳಲು, ಅಕ್ರಮದಲ್ಲಿ ಆತನೇ ಭಾಗಿಯಾಗಿದ್ದಾನೆ ಎಂದು ಸಾಬೀತು ಪಡಿಸಲು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದೆ ಎಂದಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬಾತ್‌ರೂಮ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ
2021ರ ಡಿ. 14ರಂದು ಸೈಂಟ್‌  ಜಾನ್ಸ್‌ ಶಾಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ಪರೀಕ್ಷೆ ನಡೆಯುತ್ತಿತ್ತು. ಅದಕ್ಕೂ ಮೊದಲು ಪ್ರಕರಣದ ಕಿಂಗ್‌ಪಿನ್‌ಗಳು ಪ್ರಶ್ನೆ ಪತ್ರಿಕೆಯ ಪ್ರತಿಯನ್ನು ಶೌಚಾಲಯಕ್ಕೆ ತೆಗೆದುಕೊಂಡು ಹೋಗಿ, ಫೋಟೋ ತೆಗೆದು ಮಧ್ಯವರ್ತಿಗಳಿಗೆ ಕಳುಹಿಸಿದ್ದರು. ಕೆಲವೇ ಕ್ಷಣಗಳಲ್ಲಿ ಕೀ ಉತ್ತರ ಪಡೆದುಕೊಂಡು, ಪರೀಕ್ಷಾ ಕೇಂದ್ರದ ಒಳಭಾಗದಲ್ಲಿ ಪರೀಕ್ಷೆ ಬರೆಯುತ್ತಿದ್ದ ಮೂವರು ಅಭ್ಯರ್ಥಿಗಳಿಗೆ ಬ್ಲೂಟೂತ್‌ ಮೂಲಕ ಉತ್ತರ ನೀಡಲಾಗುತ್ತಿತ್ತು. ಆದರೆ, ವೀರಣ್ಣಗೌಡ ಹೊರತುಪಡಿಸಿ ಇತರ ಇಬ್ಬರು ಅಭ್ಯರ್ಥಿಗಳು ಕೇಂದ್ರದ ಒಳಭಾಗದಲ್ಲಿ ಬ್ಲೂಟೂತ್‌ ಆಫ್ ಮಾಡಿಕೊಂಡಿದ್ದರು.

ಅನಂತರ ಬ್ಲೂಟೂತ್‌ ಶಬ್ಧ ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ವೀರಣ್ಣ ಗೌಡ ಸಿಕ್ಕಿಬಿದ್ದಿದ್ದ. ಅನಂತರ ತನಿಖೆ ನಡೆಸಿದಾಗ ವಿವೇಕಾನಂದ ಅಲಿಯಾಸ್‌ ಸೋಮ ಮತ್ತು ಅವಿನಾಶ್‌ ಅಲಿಯಾಸ್‌ ಸಂಗಮೇಶ ಎನ್ನುವ ಅಭ್ಯರ್ಥಿಗಳನ್ನು ಬಂಧಿಸಲಾಗಿತ್ತು.

Advertisement

ಡೀಲ್‌ ಕುದುರಿಸುವಾಗ ದಿವ್ಯಾ ಅಕ್ಕ ಇದ್ರು!
ಕಲಬುರಗಿ: ಪಿಎಸ್‌ಐ ಪರೀಕ್ಷಾ ಅಕ್ರಮ ಹಗರಣದ ತನಿಖೆ ಮಾಡುತ್ತಿರುವ ಸಿಐಡಿ ಅಧಿಕಾರಿಗಳ ಎದುರು ಕೆಎಸ್‌ಆರ್‌ಪಿ ಸಹಾಯಕ ಕಮಾಂಡೆಂಟ್‌ ವೈಜನಾಥ ರೇವೂರ ಬಾಯಿ ಬಿಟ್ಟಿದ್ದು, ನಾನು ಅಭ್ಯರ್ಥಿಗಳೊಂದಿಗೆ ಡೀಲ್‌ ಕುದುರಿಸುವಾಗ ದಿವ್ಯಾ ಹಾಗರಗಿ (ಅಕ್ಕ) ಇದ್ದರು ಎನ್ನುವ ಸ್ಫೋಟಕ ಸತ್ಯ ಹೊರ ಹಾಕಿದ್ದಾನೆ.  ಈಗ ರೇವೂರ ಹೇಳಿರುವ ಸತ್ಯ ದಿವ್ಯಾಗೆ ಮುಳುವಾಗುವ ಸಾಧ್ಯತೆಗಳಿವೆ. ಪುನಃ ದಿವ್ಯಾ ಹಾಗರಗಿಯನ್ನು ವಿಚಾರಣೆಗೆ ಸಿಐಡಿ ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ಅಷ್ಟೆ ಅಲ್ಲದೇ, ಕಿಂಗ್‌ಪಿನ್‌ ರುದ್ರಗೌಡ ಪಾಟೀಲ ಕೂಡ ಇದ್ದ. ಕಲಬುರಗಿ ನಗರದ ಉದನೂರ್‌ ಕ್ರಾಸ್‌ನಲ್ಲಿ ಡೀಲ್‌ ಕುದುರಿಸಲು ಕೆಲವರೊಂದಿಗೆ ಮಾತುಕತೆ ನಡೆಸಿದ ಸ್ಥಳವನ್ನು ಶುಕ್ರವಾರ ಸಿಐಡಿ ಅಧಕಾರಿಗಳಿಗೆ ರೇವೂರ ತೋರಿಸಿದ್ದಾನೆ.

ಡಿವೈಎಸ್ಪಿ 12 ದಿನ ಪೊಲೀಸ್‌ ಕಸ್ಟಡಿಗೆ
ಬೆಂಗಳೂರು: ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನೇಮಕಾತಿ ವಿಭಾಗದ ಡಿವೈಎಸ್ಪಿಯಾಗಿದ್ದ ಶಾಂತಕುಮಾರ್‌ನನ್ನು ಸಿಐಡಿ ಪೊಲೀಸರು 12 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಮತ್ತೂಂದೆಡೆ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್‌ಪೌಲ್‌ಗೆ ವಿಚಾರಣೆ ಬಿಸಿ ಮುಟ್ಟಲಿದೆ.

ಗುರುವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದ ಪೊಲೀಸರು, ಶುಕ್ರವಾರ ಒಂದನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಿದ್ದರು. ಈ ವೇಳೆ ಆರೋಪಿ ಶಾಂತಕುಮಾರ್‌, ಪಿಎಸ್‌ಐ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎಲ್ಲ ಆರೋಪಿಗಳ ಜತೆ ನೇರವಾಗಿ ಸಂಪರ್ಕದ್ದ. ಜತೆಗೆ ಒಎಂಆರ್‌ ಶೀಟ್‌ ಸಂಗ್ರಹಿಸುವ ಸ್ಟ್ರಾಂಗ್‌ ಕೋಣೆಯ ಉಸ್ತುವಾರಿಯಾಗಿದ್ದ. ಈ ವೇಳೆ ತನ್ನ ಕೆಳಗಿನ ಅಧಿಕಾರಿ-ಸಿಬಂದಿಗೆ ಹಣದ ಆಮಿಷವೊಡ್ಡಿ ಪರೀಕ್ಷಾ ಅಭ್ಯರ್ಥಿಗಳು, ಮಧ್ಯವರ್ತಿಗಳು ಹಾಗೂ ಕೆಲ ಕೋಚಿಂಗ್‌ ಸೆಂಟರ್‌ನ ಶಿಕ್ಷಕರು, ಕೆಲವೊಮ್ಮೆ ಇನ್‌ಸ್ಪೆಕ್ಟರ್‌ಗಳ ಮೂಲಕವೇ ಒಎಂಆರ್‌ ಶೀಟ್‌ಗಳನ್ನು ತಿದ್ದುಪಡಿ ಮಾಡಿಸಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ಆರೋಪಿಯನ್ನು 15 ದಿನಗಳ ಕಾಲ ವಶಕ್ಕೆ ನೀಡಬೇಕು ಎಂದು ಸಿಐಡಿ ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದ್ದರು.

ಆರೋಪಿ ಪೊಲೀಸ್‌ ಪತ್ನಿಯೇ ಜೈಲರ್‌
 ಕಲಬುರಗಿ: ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕೆಎಸ್‌ಆರ್‌ಪಿ ಕಲಬುರಗಿ ತುಕಡಿ ಸಹಾಯಕ ಕಮಾಂಡೆಂಟ್‌ ವೈಜನಾಥ ಪಾಟೀಲ ರೇವೂರ್‌ ಸಿಐಡಿ ಕಸ್ಟಡಿ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿಗೆ ಕಳುಹಿಸಲಾಯಿತು.

ಸಿಐಡಿ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಶುಕ್ರವಾರ ಸಿಐಡಿ ಅಧಿಕಾರಿಗಳ ತಂಡ ಸ್ಥಳ ಮಹಜರು ಮಾಡಿಸಿ ಅಕ್ರಮದ ಕುರಿತ ಇನ್ನೊಂದಷ್ಟು ಮಾಹಿತಿ ಪಡೆಯಿತು. ಬಳಿಕ ಅವರನ್ನು ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾಯಿತು. ಪಿಎಸ್‌ಐ ಅಕ್ರಮದಲ್ಲಿ ತನಿಖೆ ಎದುರಿಸುತ್ತಿರುವ ವೈಜನಾಥ ಪತ್ನಿ ಸುನಂದಾ ಕೇಂದ್ರ ಕಾರಾಗೃಹದ ಜೈಲರ್‌ ಆಗಿದ್ದಾರೆ. ವಿಐಪಿ ಮತ್ತು ಜರೂರು ಪ್ರಕರಣಗಳಲ್ಲಿ ಹೊಸ ಕೈದಿಗಳನ್ನು ಜೈಲರ್‌ ಒಮ್ಮೆ ನೋಡುವುದು ಪರಿಪಾಠ. ಅದರಂತೆ ಪತ್ನಿ ಸುನಂದಾ ಆರೋಪಿ ಪತಿಯನ್ನು ನೋಡಬೇಕಾದ ಅನಿವಾರ್ಯ ಸನ್ನಿವೇಶ ಎದುರಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next