ಬ್ಯಾಂಕಾಕ್: ಭಾರತದ ಭರವಸೆ ಪಿ.ವಿ. ಸಿಂಧು ಥಾಯ್ಲೆಂಡ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಕೂಟದ ಸೆಮಿಫೈನಲ್ನಲ್ಲಿ ಎಡವಿದ್ದಾರೆ.
43 ನಿಮಿಷಗಳ ಈ ಹೋರಾಟದಲ್ಲಿ ಹಲವು ತಪ್ಪುಗಳನ್ನು ಮಾಡಿದ ಸಿಂಧು ಒಲಿಂಪಿಕ್ ಚಾಂಪಿಯನ್ ಮತ್ತು ವಿಶ್ವದ ನಾಲ್ಕನೇ ರ್ಯಾಂಕಿನ ಚೀನದ ಚೆನ್ ಯು ಫೆಯಿ ಅವರ ಕೈಯಲ್ಲಿ 17-21, 16-21 ಗೇಮ್ಗಳಿಂದ ಸೋಲನ್ನು ಕಂಡರು.
6ನೇ ಶ್ರೇಯಾಂಕದ 2 ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಈ ಪಂದ್ಯಕ್ಕೆ ಮೊದಲು ಚೆನ್ ವಿರುದ್ಧ 6 ಜಯ ಮತ್ತು 4 ಸೋಲಿನ ದಾಖಲೆ ಹೊಂದಿದ್ದರು. ಆದರೆ ಈ ಪಂದ್ಯದಲ್ಲಿ ಹಲವು ಅನಗತ್ಯ ತಪ್ಪುಗಳನ್ನು ಎಸಗಿದ ಸಿಂಧು ಸುಲಭವಾಗಿ ಶರಣಾದರು.
ಇದೇ ವೇಳೆ ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿದ ಚೆನ್ ಯಾವುದೇ ಹಂತದಲ್ಲೂ ಸಿಂಧುಗೆ ಮೇಲುಗೈ ಸಾಧಿಸಲು ಅವಕಾಶ ನೀಡದೇ ಪಂದ್ಯ ಗೆದ್ದರು. ಹೈದರಾಬಾದ್ನ 26ರ ಹರೆಯದ ಸಿಂಧು ಈ ಮೊದಲು ಚೆನ್ ವಿರುದ್ಧ ಆಡಿದ 2019ರ ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ಪಂದ್ಯದಲ್ಲೂ ಸೋಲನ್ನು ಕಂಡಿದ್ದರು.
Related Articles
ಈ ಋತುವಿನಲ್ಲಿ ಎರಡು ಸೂಪರ್ 300 ಕೂಟದ ಪ್ರಶಸ್ತಿ (ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಮತ್ತು ಸ್ವಿಸ್ ಓಪನ್) ಗೆದ್ದಿರುವ ಸಿಂಧು ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ನಲ್ಲಿ ಕಂಚು ಜಯಿಸಿದ್ದರು. ಸಿಂಧು ಇನ್ನು ಜೂನ್ 7ರಿಂದ ಜಕಾರ್ತಾದಲ್ಲಿ ಆರಂಭವಾಗಲಿರುವ ಇಂಡೋನೇಶ್ಯ ಮಾಸ್ಟರ್ ಸೂಪರ್ 500 ಕೂಟದಲ್ಲಿ ಆಡಲಿದ್ದಾರೆ.