ಪುತ್ತೂರು: ಪುತ್ತೂರಿನಲ್ಲಿ ಕಂಬಳ ವೀಕ್ಷಿಸಲು ಬಂದ ಮಂಗಳೂರು ಮೂಲದ ಯುವಕನೋರ್ವ ತನ್ನ ಪ್ರಿಯತಮೆ ಜತೆ ಮಾತನಾಡುತ್ತಿರುವ ಸಂದರ್ಭ ಆಕೆಯ ಮಾಜಿ ಪ್ರಿಯಕರ ತನ್ನ ಗೆಳೆಯರ ಜತೆ ಬಂದು ಬೆದರಿಕೆ ಒಡ್ಡಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿರುವ ಕುರಿತು ಪುತ್ತೂರು ನಗರ ಠಾಣೆಗೆ ಯುವಕನೋರ್ವ ದೂರು ನೀಡಿದ್ದಾನೆ.
ಮಂಗಳೂರು ಕೋಡಿಕಲ್ ನಿವಾಸಿ ಸಾಗರ್ ದೂರು ನೀಡಿದಾತ. ಕೌಶಿಕ್, ಯಜ್ಞೆಶ್, ಕೇಶವ, ಸೃಜನ್, ವಿನೀತ್, ಲತೇಶ್, ಮನ್ವಿತ್, ಮೋಹಿತ್ ಹಾಗೂ ಹೇಮಂತ್ ವಿರುದ್ಧ ಪ್ರಕರಣ ದಾಖಲಾಗಿದೆ. ರವಿವಾರ ಮಧ್ಯಾಹ್ನ ತಾನು ಕಂಬಳ ಗದ್ದೆಯಲ್ಲಿ ಪ್ರೇಯಸಿಯ ಜತೆ ಮಾತನಾಡುತ್ತಿರುವ ಸಂದರ್ಭ ಕೌಶಿಕ್ ಎಂಬಾತ ಬಂದು ನೀನು ಯಾರು, ಎಲ್ಲಿಯವ, ನಿನಗೂ ಆಕೆಗೂ ಏನು ಸಂಬಂಧ ಎಂದು ಕೇಳಿದ್ದ. ತನ್ನ ಜತೆಗಿದ್ದ ದುರ್ಗಾಪ್ರಸಾದನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ತಾನು ಆಕೆಯ ಪ್ರಿಯತಮ ಎಂದು ಹೇಳಿದಾಗ ಆರೋಪಿಗಳು ಕಂಬಳ ಗದ್ದೆಯಿಂದ ನಿರ್ಜನ ಪ್ರದೇಶವೊಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ತನಗೆ ಹಾಗೂ ದುರ್ಗಾಪ್ರಸಾದ್ ಅವರಿಗೆ ಹಲ್ಲೆ ನಡೆಸಿ ಆಕೆಯನ್ನು ಪ್ರೀತಿಸಬಾರದು ಎಂದು ಹೇಳಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.