Advertisement
ವೀಡಿಯೋ ವೈರಲ್ ಆದ ಬಳಿಕ ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿನಿ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ. ಬಜತ್ತೂರು ಗಾಣದಮೂಲೆ ನಿವಾಸಿ ಗುರುನಂದನ್(19), ಪೆರ್ನೆ ನಿವಾಸಿ ಪ್ರಜ್ವಲ್ (19), ಪೆರ್ನೆ ಕಡಂಬು ನಿವಾಸಿ ಕಿಶನ್ (19), ಆರ್ಯಾಪು ಪಿಲಿಗುಂಡ ನಿವಾಸಿ ಸುನಿಲ್ (19) ಹಾಗೂ ಬರಿಮಾರು ಬಲ್ಯ ನಿವಾಸಿ ಪ್ರಖ್ಯಾತ್ (19) ಬಂಧಿತರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ದ.ಕ. ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು.
ಘಟನೆಯ ಕುರಿತು ಸಂತ್ರಸ್ತೆಯು ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಮಾರ್ಚ್ ತಿಂಗಳ ಕೊನೆಯ ವಾರದ ಒಂದು ದಿನ ಈ ಕೃತ್ಯ ನಡೆದಿದೆ. ಅಂದು ಮಧ್ಯಾಹ್ನ 3ಕ್ಕೆ ಕಾಲೇಜಿನ ಸುನಿಲ್ ಎಂಬಾತನು ತನ್ನಲ್ಲಿ ಮಾತನಾಡಲಿಕ್ಕಿದೆ ಎಂದು ಕಾರಿನಲ್ಲಿ ಕುಳ್ಳಿರಿಸಿ, ಪ್ರಜ್ವಲ್ ಹಾಗೂ ಪ್ರಕೃತ್‌ರನ್ನು ಕೂಡಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ನಾಲ್ಕೈದು ಮಂದಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುತ್ತಾರೆ. ಬಳಿಕ ಈ ವಿಚಾರವನ್ನು ಬಹಿರಂಗಪಡಿಸದಂತೆ ಬೆದರಿಕೆಯೊಡ್ಡಿದ್ದಾರೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿದ್ದರು ಎಂದು ಸಂತ್ರಸ್ತೆಯು ದೂರಿನಲ್ಲಿ ತಿಳಿಸಿದ್ದಾರೆ.
Related Articles
Advertisement
ಕಠಿನ ಕ್ರಮಕ್ಕೆ ಮಾಜಿ ಶಾಸಕರ ಆಗ್ರಹಪ್ರಕರಣವನ್ನು ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿನ ಕ್ರಮ ಜರಗಿಸಬೇಕು. ಯಾವುದೇ ತಾರತಮ್ಯ ಮಾಡದೆ ಆರೋಪಿಗಳನ್ನು ಬಂಧಿಸಬೇಕು ಎಂದು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಆಗ್ರಹಿಸಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಎಸ್‌ಪಿಗೆ ಮನವಿ ಮಾಡಿದ್ದೇವೆ. ವಿದ್ಯಾರ್ಥಿ ಸಮುದಾಯದ ಹಿತದೃಷ್ಟಿಯಿಂದ ಇಂತಹ ವೀಡಿಯೋಗಳನ್ನು ವೈರಲ್ ಮಾಡದಂತೆ ಶಕುಂತಳಾ ಶೆಟ್ಟಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇಂತಹ ಕೃತ್ಯಗಳಿಂದ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಪೋಷಕರು ಹೆದರುವ ಸ್ಥಿತಿ ಇದೆ. ಹೀಗಾಗಿ ಪೊಲೀಸರು ಕಠಿನ ಕ್ರಮ ಜರಗಿಸಿ ಪೋಷಕರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಅವರು ಆಗ್ರಹಿಸಿದ್ದಾರೆ. ಎಬಿವಿಪಿ ಆಗ್ರಹ
ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಠಿನ ಶಿಕ್ಷೆಗೆ ಒಳಪಡಿಸಬೇಕು ಎಂದು ಪುತ್ತೂರಿನ ಎಬಿವಿಪಿ ಘಟಕ ಆಗ್ರ ಹಿಸಿದೆ. ಮಾದಕ ವ್ಯಸನಗಳಿಂದ ಯುವಜನತೆಯನ್ನು ರಕ್ಷಿಸ ಬೇಕು ಎಂದು ಸುಳ್ಯ ವಿಹಿಂಪ-ಬಜರಂಗ ದಳ ಘಟಕ ಆಗ್ರಹಿಸಿದೆ. ಯುವ ಕಾಂಗ್ರೆಸ್ ಆಗ್ರಹ
ಇಂತಹ ಕೃತ್ಯಗಳು ಸಾಮಾಜದ ಸ್ವಾಸ್ಥ್ಯ ಕೆಡಿಸುತ್ತದೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಎಷ್ಟೇ ಪ್ರಭಾವಿ ವ್ಯಕ್ತಿಗಳಾದರೂ ಅವರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್ ಅವರು ಆಗ್ರಹಿಸಿದ್ದಾರೆ.
ವೀಡಿಯೋ ಪ್ರಸಾರ ಮಾಡದಂತೆ ಎಸ್‌ಪಿ ಎಚ್ಚರಿಕೆ
ಓರ್ವ ಹುಡುಗಿ ಜತೆ 3ರಿಂದ 4 ಮಂದಿ ಹುಡುಗರು ಆತ್ಮೀಯ ಕೃತ್ಯದಲ್ಲಿ ತೊಡಗಿರುವ ವೀಡಿಯೋ ತುಣುಕೊಂದು ವಾಟ್ಸಾಪ್ ಮೂಲಕ ಹರಿದಾಡುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಪೊಲೀಸರು ಸೊ-ಮೋಟೊ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಉಲ್ಲೇಖೀತ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಬಾರದು ಅಥವಾ ಉಲ್ಲೇಖೀತ ವೀಡಿಯೋಗಳನ್ನು ಅವರ ಫೋನ್/ಕಂಪ್ಯೂಟರ್‌ಗಳಲ್ಲಿ ಉಳಿಸಬಾರದು ಎಂದು ನಾವು ಸಾರ್ವಜನಿಕರನ್ನು ಕೋರುತ್ತೇವೆ. ಹಾಗೆ ಮಾಡುವುದು ಐಪಿಸಿಯ 354ಸಿ ಮತ್ತು 66 ಇ, ಐಟಿ ಕಾಯ್ದೆಯ 66ಎ ಮತ್ತು ವ್ಯಕ್ತಿಗಳು(ಗುಂಪು ನಿರ್ವಾಹಕರು ಸಹಿತ) ಅಡಿಯಲ್ಲಿ ಅಪರಾಧವಾಗಿದೆ ಎಂದು ಎಸ್‌ಪಿ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ವಿದ್ಯಾರ್ಥಿಗಳ ಅಮಾನತು
ಪೊಲೀಸರು ಸೂಚಿಸಿದ ವಿದ್ಯಾರ್ಥಿಗಳ ಮಾಹಿತಿಯನ್ನು ಕಾಲೇಜಿನಿಂದ ನೀಡಲಾಗಿದ್ದು, ಆ ಐವರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಪೊಲೀಸರ ತನಿಖೆಯ ಬಳಿಕ ಮುಂದಿನ ಕ್ರಮ ಜರಗಿಸಲಾಗುತ್ತದೆ. ವಿದ್ಯಾರ್ಥಿನಿ ವಿರುದ್ಧ ಯಾವುದೇ ಕ್ರಮ ಜರಗಿಸಿಲ್ಲ ಎಂದು ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್ ವಿಲ್ಸನ್ ಪ್ರಭಾಕರ್ ಅವರು ‘ಉದಯವಾಣಿ’ಗೆ ತಿಳಿಸಿದ್ದಾರೆ.
ಪುತ್ತೂರು ಠಾಣೆಗೆ ಎಸ್‌ಪಿಭೇಟಿ
ವೀಡಿಯೋ ವೈರಲ್ ಆದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್‌ಪಿ ಅವರು ಪುತ್ತೂರಿಗೆ ಆಗಮಿಸಿ ಪೊಲೀಸರೊಂದಿಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಬಳಿಕ ಪತ್ರಕರ್ತರ ಜತೆ ಮಾತನಾಡಿದ ಅವರು, ಘಟನೆ ಕುರಿತು ವಿದ್ಯಾರ್ಥಿನಿಯು ಪೂರ್ಣ ಮಾಹಿತಿ ನೀಡಿದ್ದಾರೆ. ಯಾವುದೇ ಅಮಲು ಪದಾರ್ಥ ಸೇವನೆಯಿಂದ ಆದ ಘಟನೆಯಲ್ಲ. ವಿದ್ಯಾರ್ಥಿನಿಯನ್ನು ಮಾತನಾಡಲು ಇದೆ ಎಂದು ಹೇಳಿ ಕರೆದುಕೊಂಡು ಹೋಗಿ ಈ ಕೃತ್ಯ ನಡೆಸಿದ್ದಾರೆ. ಸಂತ್ರಸ್ತೆಗೆ ವೀಡಿಯೋ ಮಾಡಿರುವುದು ಹಾಗೂ ಘಟನೆ ಯಾವಾಗ ನಡೆದಿದೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಶಾಸಕ ಸಂಜೀವ ಮಠಂದೂರು ಖಂಡನೆ
ಮಂಗಳೂರು: ಸಾಮೂಹಿಕ ಅತ್ಯಾಚಾರ ಕೃತ್ಯವನ್ನು ಪುತ್ತೂರು ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಖಂಡಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಸಹಪಾಠಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವುದು ಅಕ್ಷಮ್ಯ ಅಪರಾಧ. ಘಟನೆಗೆ ಸಂಬಂಧಿಸಿದ ಎಲ್ಲ ಆರೋಪಿಗಳ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಂಡು ಮುಂದಕ್ಕೆ ಇಂತಹಾ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಆರೋಪಿಗಳು ಅಮಲು ಪದಾರ್ಥ ಸೇವಿಸಿದ್ದರೆ, ಈ ಬಗ್ಗೆ ತನಿಖೆ ನಡೆಸಬೇಕು. ಪುತ್ತೂರು ಮಾತ್ರವಲ್ಲದೆ ಜಿಲ್ಲಾದ್ಯಂತ ಗಾಂಜಾ, ಅಫೀಮು ಸಹಿತ ಮಾದಕ ವಸ್ತುಗಳು ಎಲ್ಲಿ, ಯಾರಿಂದ ಪೂರೈಕೆ ಮತ್ತು ಮಾರಾಟ ಆಗುತ್ತಿದೆ ಎಂಬುದನ್ನು ಪೊಲೀಸರು ಪತ್ತೆಹಚ್ಚಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಗಾಂಜಾ ಸಹಿತ ಮಾದಕ ದ್ರವ್ಯ ಮಾರಾಟ, ಸಾಗಾಟ ಆಗದಂತೆ ಪೊಲೀಸ್ ಇಲಾಖೆ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಪ್ರಕಟನೆಯಲ್ಲಿ ಅವರು ಆಗ್ರಹಿಸಿದ್ದಾರೆ.