Advertisement

ಪುತ್ತೂರು ಮಹಿಳಾ ಪೊಲೀಸ್‌ ಠಾಣೆಗೆ ಶೀಘ್ರ ಸ್ವಂತ  ಕಟ್ಟಡ 

10:04 AM Aug 30, 2018 | Team Udayavani |

ಪುತ್ತೂರು: ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ದ.ಕ. ಜಿಲ್ಲೆಯ ಎರಡನೇ ಮಹಿಳಾ ಪೊಲೀಸ್‌ ಠಾಣೆಗೆ ಶೀಘ್ರ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಣೆಯ ಭಾಗ್ಯ ಲಭ್ಯವಾಗಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡ ಪುತ್ತೂರು ಪೊಲೀಸ್‌ ಠಾಣೆಯ ಹಳೆಯ ಕಟ್ಟಡವನ್ನು ಈ ನಿಟ್ಟಿನಲ್ಲಿ ಪುನರ್‌ ನವೀಕರಣ ಮಾಡಲಾಗುತ್ತಿದೆ. ನಗರದ ಮುಖ್ಯ ರಸ್ತೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಬದಿಯ ಕೆರೆ ಸನಿಹದಲ್ಲಿ, ದೇವಾಲಯದ ದ್ವಾರದ ಪಕ್ಕದಲ್ಲೇ ಇರುವ ಹಳೆ ಠಾಣೆ ಕಟ್ಟಡವನ್ನು ನವೀಕರಿಸುವ ಕಾರ್ಯ ಒಂದು ತಿಂಗಳಿನಿಂದ ನಡೆಯುತ್ತಿದೆ. ನಿರ್ಮಿತಿ ಕೇಂದ್ರವು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಮಳೆಗಾಲ ಮುಗಿಯುವ ಹೊತ್ತಿಗೆ ಹಳೆ ಕಟ್ಟಡ ಹೊಸ ರೂಪ ಪಡೆಯಲಿದೆ.

Advertisement

ಮಹಿಳಾ ಠಾಣೆಯು ಪುತ್ತೂರಿಗೆ ಮಂಜೂರುಗೊಂಡು 2017ರ ಮಾ. 11ರಿಂದ ಕಾರ್ಯ ನಿರ್ವಹಣೆ ಆರಂಭಿಸಿತ್ತು. ಸ್ವಂತ ಕಟ್ಟಡದ ಕೊರತೆ ಇರುವ ಕಾರಣ ಸಂಚಾರ ಠಾಣೆಯ ಹೊಸ ಕಟ್ಟಡದಲ್ಲೇ ವ್ಯವಸ್ಥೆ ಮಾಡಲಾಗಿತ್ತು. ಅದರೆ ಇಲ್ಲಿ ಶಾಶ್ವತ ಸ್ಥಳಾವಕಾಶ ನೀಡಲು ಸಾಧ್ಯವಿಲ್ಲದ ಕಾರಣ ಪರ್ಯಾಯ ಹುಡುಕಾಟ ಆರಂಭವಾಗಿತ್ತು. ಆಗ ಹಳೆ ಪೊಲೀಸ್‌ ಸ್ಟೇಷನ್‌ ಕಟ್ಟಡವನ್ನು ನವೀಕರಿಸಿ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು.

ಮತ್ತೆ ಠಾಣೆಯೇ!
ಸ್ವಾತಂತ್ರ್ಯ ಪೂರ್ವದ ಈ ಕಟ್ಟಡದಲ್ಲಿ ಮೊದಲು ಪುತ್ತೂರು ನಗರ ಪೊಲೀಸ್‌ ಠಾಣೆ ಕಾರ್ಯ ನಿರ್ವಹಿಸುತ್ತಿತ್ತು. 2009ರ ಡಿ.25ರಂದು ಠಾಣೆಯ ಹೊಸ ಕಟ್ಟಡ ಉದ್ಘಾಟನೆಗೊಂಡಿದ್ದು, ಅನಂತರ ಹಳೆಯ ಕಟ್ಟಡ ಖಾಲಿಯಾಗಿತ್ತು. ಇದಾದ ಕೆಲವೇ ಸಮಯದಲ್ಲಿ ಪುತ್ತೂರಿಗೆ ಸಂಚಾರ ಠಾಣೆ ಮಂಜೂರಾಗಿದ್ದು, ಅದು ಈ ಹಳೆ ಕಟ್ಟಡದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. 2015ರ ಸೆ. 7ರಂದು ಸಂಚಾರ ಠಾಣೆಯ ನೂತನ ಕಟ್ಟಡ ಉದ್ಘಾಟನೆಗೊಂಡ ಕಾರಣ ಮತ್ತೆ ಹಳೆಯ ಕಟ್ಟಡ ಖಾಲಿ ಬಿತ್ತು.

ಯಾಕೆ ತಡವಾಯಿತು
ಮೊದಲ ಆರು ತಿಂಗಳ ಕಾಲ ಸಂಚಾರ ಠಾಣೆಯ ಕಡತಗಳು ಇದೇ ಕಟ್ಟಡದಲ್ಲಿದ್ದರೂ 2016ರ ಆರಂಭದಲ್ಲಿ ಸಂಪೂರ್ಣ ಸ್ಥಳಾಂತರಗೊಂಡಿತ್ತು. ಅಲ್ಲಿಂದೀಚೆಗೆ ಹಳೆ ಕಟ್ಟಡ ಖಾಲಿ ಬಿದ್ದಿತ್ತು. 2017ರಲ್ಲಿ ಮಹಿಳಾ ಠಾಣೆ ಆರಂಭಗೊಂಡಾಗ ಇದೇ ಕಟ್ಟಡದಲ್ಲಿ ಕೆಲಸ ಮಾಡುವುದೆಂದು ನಿರ್ಧರಿಸಲಾಯಿತಾದರೂ ಕಟ್ಟಡ ನವೀಕರಣ ಅಗತ್ಯವಿರುವ ಕಾರಣ ಮುಂದೂಡಲಾಗಿತ್ತು.

19.20 ಲಕ್ಷ ರೂ. ಯೋಜನೆ 
ಹಳೆಯ ಕಟ್ಟಡ  ನವೀಕರಣಕ್ಕೆ ರಾಜ್ಯ ಸರಕಾರ 19.20 ಲಕ್ಷ ರೂ. ಮಂಜೂರು ಮಾಡಿದೆ. ನಿರ್ಮಿತಿ ಕೇಂದ್ರದವರು ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಹಳೆ ಕಟ್ಟದ ಹೆಂಚಿನ ಮಾಡು ಹೊಂದಿದ್ದು, ಅದನ್ನು ತೆಗೆದು ಎತ್ತರಿಸಿ ಮತ್ತೆ ಹಂಚು ಅಳವಡಿಸಲಾಗಿದೆ. ಒಳಭಾಗದಲ್ಲಿ ಕೆಲವೊಂದು ವಿನ್ಯಾಸಗಳನ್ನು ಬದಲಾಯಿಸಲಾಗುತ್ತಿದೆ. ಪುನರ್‌ ನವೀಕರಣದ ಕಾಮಗಾರಿ ಹೆಚ್ಚು ಇರುವುದರಿಂದ ಇನ್ನೂ ಮೂರು ತಿಂಗಳು ಹಿಡಿಯಬಹುದು ಎಂದು ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌ ಅವರು ತಿಳಿಸಿದ್ದಾರೆ. 

Advertisement

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next