Advertisement

ಪುತ್ತೂರು: ನಿವೇಶನಕ್ಕೆ ಕಾಯುತ್ತಿದೆ ನೂರಾರು ಅರ್ಜಿ: 1.8 ಎಕ್ರೆ ಜಾಗ ಗುರುತು

07:28 PM Nov 08, 2021 | Team Udayavani |

ಪುತ್ತೂರು: ಪುತ್ತೂರು ನಗರದಲ್ಲಿ ನಿವೇಶನ ರಹಿತರ ಪಟ್ಟಿ ದಿನೇ ದಿನೇ ಹೆಚ್ಚಾಗುತ್ತಿದ್ದು ಮನೆ ಕಟ್ಟಿಕೊಳ್ಳಲು ನಿವೇಶನಕ್ಕಾಗಿ ಸ್ಥಳೀಯಾಡಳಿತಕ್ಕೆ ಸಲ್ಲಿಕೆಯಾದ ಅರ್ಜಿಗಳ ಒಟ್ಟು ಸಂಖ್ಯೆ ಈಗ ಎರಡು ಸಾವಿರಕ್ಕೂ ಅಧಿಕವಿದೆ.

Advertisement

ನಿವೇಶನ ರಹಿತರ ಪಟ್ಟಿಯು ವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ನಿವೇಶನ ಒದಗಿಸಲು ನಗರಸಭೆಯು ಕಂದಾಯ ಇಲಾಖೆಯ ಮೂಲಕ ಜಾಗ ಗುರುತು ಪ್ರಕ್ರಿಯೆಗೆ ಚಾಲನೆ ನೀಡಿರುವುದು ಹೊಸ ನಿರೀಕ್ಷೆ ಮೂಡಿಸಿದೆ.

ಅರ್ಜಿ ವಿಲೇವಾರಿ ಆಗಿಲ್ಲ
ನಗರದಲ್ಲಿ ಖಾಲಿ ಜಮೀನು ಗುರುತು ಸಾಧ್ಯವಾಗಿಲ್ಲ. ಇದರಿಂದಾಗಿ ಹಲವು ವರ್ಷಗಳಿಂದ ಅರ್ಜಿ ವಿಲೇವಾರಿ ಆಗಿಲ್ಲ. ಸರಕಾರಿ ಜಾಗವಿಲ್ಲದಿದ್ದರೆ ನಗರ ವ್ಯಾಪ್ತಿಯ ಗಡಿ ಗ್ರಾಮಗಳಲ್ಲಿ ಅಥವಾ ನಗರದೊಳಗೆ ಖಾಸಗಿ ಜಾಗ ಖರೀದಿಸಲು ಸರಕಾರ ಅವಕಾಶ ನೀಡಿದೆ. ಆದರೆ ಜಾಗದ ಸರಕಾರಿ ಮಾರುಕಟ್ಟೆ ಮೌಲ್ಯ ತೀರಾ ಕಡಿಮೆ ಇರುವ ಕಾರಣ ಆ ಮೊತ್ತಕ್ಕೆ ಯಾರೂ ಕೂಡ ಜಾಗ ನೀಡುತ್ತಿಲ್ಲ. ಹಾಗಾಗಿ ಖಾಸಗಿ ಜಾಗ ಖರೀದಿ ಕೂಡ ನನೆಗುದಿಗೆ ಬಿದ್ದಿದೆ.

47 ಮಂದಿಗೆ ಸೈಟ್‌ ಸಿದ್ಧ
ಶಾಸಕರ ಸೂಚನೆ ಮೇರೆಗೆ ನಗರದೊಳಗೆ ಲಭ್ಯ ಇರುವ ಸರಕಾರಿ ಜಮೀನು ಗುರುತಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ತಹಶೀಲ್ದಾರ್‌ ನೇತೃತ್ವದಲ್ಲಿ ಕಂದಾಯ ಇಲಾಖೆಯು ನಗರದ ವಿವಿಧೆಡೆ ಜಾಗ ಪರಿಶೀಲಿಸಿದೆ. ಈ ಪೈಕಿ ಕೆಮ್ಮಿಂಜೆ ಗ್ರಾಮದಲ್ಲಿ 1.8 ಎಕ್ರೆ ಜಾಗ ಅಂತಿಮಗೊಂಡು ಲೇಔಟ್‌ ಪ್ರಕ್ರಿಯೆ ನಡೆಯುತ್ತಿದೆ. 47 ಫಲಾನುಭವಿಗಳಿಗೆ 20*30 ಚದರಡಿಯ ನಿವೇಶನ ನೀಡಲಾಗುತ್ತದೆ.

ಇದನ್ನೂ ಓದಿ:ಪದ್ಮಶ್ರೀ ಪುರಸ್ಕಾರಗೊಂಡ ಹಾಜಬ್ಬ ಕಟ್ಟಿ ಬೆಳೆಸಿದ ಶಾಲೆ ಹಾಗೂ ಮನೆಯಲ್ಲಿ ಸಂಭ್ರಮ

Advertisement

ಹೊಸ ಜಾಗಕ್ಕೆ ತಲಾಶ್‌
ನಗರದ ಬಲ್ನಾಡು, ಕೆಮ್ಮಿಂಜೆ, ಬನ್ನೂರಿನಲ್ಲಿರುವ ಸರಕಾರಿ ಜಮೀನುಗಳಲ್ಲಿ ವಸತಿಗೆ ಸೂಕ್ತ ಎನಿಸಿರುವ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದೆ. ಕೆಲವೆಡೆ ಅರಣ್ಯ ಸಮಸ್ಯೆ ಇರುವ ಕಾರಣ ಅಡ್ಡಿ ಉಂಟಾಗಿದೆ. ಸೂಕ್ತ ಸ್ಥಳ ಗುರುತಿಸಿ ನೀಡುವಂತೆ ಶಾಸಕರು ನಿರ್ದೇಶನ ನೀಡಿದ್ದಾರೆ. ಚಿಕ್ಕಮುಟ್ನೂರು ಗ್ರಾಮದಲ್ಲಿ 75 ಸೆಂಟ್ಸ್‌ ಜಾಗ ನಿವೇಶನ ಹಂಚಲು ಅಂತಿಮವಾಗಿದೆ. ನಿವೇಶನ ಕೊರತೆಗೆ ಪರ್ಯಾಯವಾಗಿ ಫ್ಲ್ಯಾಟ್‌ ಮಾದರಿಯಲ್ಲಿ ಮನೆ ನಿರ್ಮಿಸಿ ನೀಡುವ ಚಿಂತನೆ ಕೂಡ ಸ್ಥಳೀಯಾಡಳಿತದ್ದು. ಈ ರೀತಿ ಮಾಡಿದರೆ ಒಂದೇ ಕಡೆ ಹಲವು ಅರ್ಜಿದಾರರಿಗೆ ಮನೆ ಒದಗಿಸಬಹುದು. ಆದರೆ ಅನುದಾನದ ಅಗತ್ಯ ಇದೆ.

ನಿವೇಶನ ನೀಡಲು ಅಗತ್ಯ ಕ್ರಮ
ಈಗಾಗಲೇ ಬೇರೆ ಬೇರೆ ಭಾಗದಲ್ಲಿ 10 ಎಕರೆ ಭೂಮಿ ಪರಿಶೀಲನೆ ಮಾಡಲಾಗಿದೆ. ಕೆಲವೆಡೆ ಅರಣ್ಯ ಜಮೀನು ಅಡ್ಡಿ ಉಂಟಾಗಿದೆ. ಈಗಾಗಲೇಕೆಮ್ಮಿಂಜೆ ಗ್ರಾಮದಲ್ಲಿ ಜಾಗ ಅಂತಿಮಗೊಂಡಿದ್ದು 47 ಫಲಾನುಭವಿಗಳಿಗೆ ನಿವೇಶನ ನೀಡಲಾಗುವುದು.
-ಮಧು ಎಸ್‌. ಮನೋಹರ್‌,
ಪೌರಾಯುಕ್ತ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next