Advertisement

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

12:47 AM Nov 29, 2024 | Team Udayavani |

ಪುತ್ತೂರು: ಕಂಗಿಗೆ ಹೆಸರಾದ ಕರಾವಳಿಯಲ್ಲಿ ಕಾಫಿ ಹೂವು ಬಿಟ್ಟರೆ? ಹೂವ ಕಾಯಾಗಿ ಕೈ ಹಿಡಿದರೆ? ವಿಶೇಷ ಎನಿಸಬಹುದು. ಯಾಕೆಂದರೆ ಕರಾವಳಿ ಮಲೆನಾಡಲ್ಲ! ಈಗ ಕರಾವಳಿಯಲ್ಲಿ ಕಾಫಿ ಬೆಳೆದವರು ಚಿಕ್ಕಮುಟ್ನೂರಿನ ಕೃಷಿಕ ಅಜಿತ್‌ಪ್ರಸಾದ್‌ ರೈ. ತಮ್ಮ ರಬ್ಬರ್‌ ತೋಟದಲ್ಲಿ ಕಾಫಿ ಬೆಳೆ ತೆಗೆದಿದ್ದಾರೆ.

Advertisement

ಕೆಲವು ವರ್ಷಗಳ ಹಿಂದೆ ತಮ್ಮ ಮನೆ ಮುಂಭಾಗದಲ್ಲಿ ಕೆಲವು ಕಾಫಿ ಗಿಡಗಳನ್ನು ನೆಟ್ಟಿದ್ದರಂತೆ. ಅದು ಹುಲುಸಾಗಿ ಬೆಳೆದು ಕಾಯಿ ಬಿಟ್ಟವು. ಈ ಪ್ರಾಯೋಗಿಕ ಹಂತದಿಂದ ಹುಮ್ಮಸ್ಸು ಹೊಂದಿ ಕಾಫಿ ಬೆಳೆ ವಿಸ್ತರಣೆಗೆ ಮುಂದಾಗಿದ್ದಾರೆ.

ಚಿಕ್ಕಮುಡ್ನೂರು ದಾರಂದಕುಕ್ಕು ಬಳಿಯ ಕಾರ್ಯತ್ತೋಡಿ ನಿವಾಸಿ ಯಾದ ಇವರು 20 ಎಕ್ರೆ ಕೃಷಿ ಭೂಮಿ ಹೊಂದಿದ್ದು, ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿದ್ದಾರೆ. 600 ರಬ್ಬರ್‌ ಗಿಡಗಳಿದ್ದು, ಧಾರಣೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಕಾರಣ ಸದ್ಯಕ್ಕೆ ಟ್ಯಾಪಿಂಗ್‌ ನಿಲ್ಲಿಸಿ ಅವುಗಳಿಗೆ ಕಾಳು ಮೆಣಸು ಬಳ್ಳಿ ಬಿಟ್ಟಿದ್ದಾರೆ.

ರಬ್ಬರ್‌ ಗಿಡಗಳ ನಡುವಿನ ಜಾಗದಲ್ಲಿ ಕಾಫಿ ಕೃಷಿಗೆ ಪ್ರಯತ್ನಿಸಿದ್ದಾರೆ. ಸುಮಾರು 2 ಸಾವಿರ ಗಿಡ ನೆಟ್ಟಿದ್ದು, ಒಂದು ವರ್ಷ ಕಳೆದಿದೆ. ಇನ್ನೊಂದು ವರ್ಷ ಕಳೆದರೆ ಫಸಲಿಗೆ ಸಿದ್ಧ. ಇವರು ಸಾಗರದಿಂದ ಅರೆಬಿಕ್‌ ತಳಿಯ ಗಿಡ ತಂದು ನಾಟಿ ಮಾಡಿದ್ದಾರೆ. ಇನ್ನೊಂದೆಡೆ ಅಡಿಕೆ ತೋಟದ ಮಧ್ಯೆ ಈ ಬಾರಿ 1,500 ಕಾಫಿ ಗಿಡ ನೆಟ್ಟಿದ್ದಾರೆ. ಅದು ಈಗಷ್ಟೇ ಬೆಳವಣಿಗೆ ಹಂತದಲ್ಲಿದೆ.

ಅಡಿಕೆ ತೋಟವನ್ನು ವೈಜಾನಿಕ ಪದ್ಧತಿಯಲ್ಲಿ ಮಾಡಿರುವ ಕಾಳುಮೆಣಸು ಕೃಷಿ ಉತ್ತಮ ಫಸಲು ಕೊಡುತ್ತಿದೆ. ಪ್ರತಿ ಅಡಿಕೆ ಮರ, ರಬ್ಬರ್‌, ಸಿಲ್ವರ್‌ ಮರಗಳಿಗೂ ಕಾಳುಮೆಣಸು ಬಳ್ಳಿ ಬಿಟ್ಟಿದ್ದಾರೆ. ಈ ಮೆಣಸು ಕೃಷಿಗೆ ಡಾ| ವೇಣುಗೋಪಾಲ್‌ ಅವರ ಮಾರ್ಗದರ್ಶನ ಕಾರಣ ಎನ್ನುತ್ತಾರೆ ಅಜಿತ್‌ ಪ್ರಸಾದ್‌ ರೈ.

Advertisement

ಆರು ಬಗೆಯ ಕೃಷಿ
ಮಿಶ್ರ ಪದ್ಧತಿಯ ಕೃಷಿ ಅತ್ಯುತ್ತಮ ಅನ್ನುವ ರೈಗಳು, ತನ್ನ ತೋಟದಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್‌, ಕಾಫಿ, ಸಿಲ್ವರ್‌, ಕೊಕ್ಕೊ ಬೆಳೆಸಿದ್ದಾರೆ. ಅಡಿಕೆ 6 ಸಾವಿರ, ಕಾಳುಮೆಣಸು 4 ಸಾವಿರ, ಸಿಲ್ವರ್‌ 1 ಸಾವಿರ, ರಬ್ಬರ್‌ 600 ಗಿಡಗಳಿವೆ.

ಸಿಲ್ವರ್‌ ಗಿಡ
ರೈಗಳ ತೋಟದಲ್ಲಿ ಬೆಳೆದು ನಿಂತಿರುವ ಸುಮಾರು 1 ಸಾವಿರ ಸ್ವಿಲರ್‌ ಗಿಡಗಳು ಕಾಫಿಗೆ ನೆರಳಾಗುತ್ತಿದ್ದು, ಜತೆಗೆ ಕಾಳು ಮೆಣಸು ಬಳ್ಳಿಗೆ ಆಸರೆಯಾಗಿವೆ. ಸ್ವಿಲರ್‌ ಮರಗಳಿಗೆ ಟನ್‌ಗೆ 10ರಿಂದ 12 ಸಾವಿರ ತನಕವೂ ಧಾರಣೆ ಇದೆ. ಇದನ್ನು ಹಾಸನ ಭಾಗದ ಕಾರ್ಖಾನೆಗಳು ಖರೀದಿಸುತ್ತಿದ್ದು, ವಿದೇಶಗಳಿಂದಲೂ ಬೇಡಿಕೆ ಇದೆ.

ನೀರುಣಿಸಲು ಸುಧಾರಿತ ತಂತ್ರಜ್ಞಾನ
20 ಎಕ್ರೆ ಕೃಷಿ ಭೂಮಿಗೆ ನೀರು ಹರಿಸಲು ಸ್ವಯಂಚಾಲಿತ ವಿಧಾನ ಅಳವಡಿಸಲಾಗಿದೆ. ಕಾಫಿ, ಕಾಳುಮೆಣಸು, ಸಿಲ್ವರ್‌, ಅಡಿಕೆ ತೋಟಕ್ಕೆ ಪ್ರತ್ಯೇಕ ಲೈನ್‌ ಅಳವಡಿಸಲಾಗಿದೆ. ಮೊಬೈಲ್‌ ಮೂಲಕ ಅನುಷ್ಠಾನ ಮಾಡಲಾಗುತ್ತಿದ್ದು, ಎಲ್ಲವನ್ನೂ ಆ್ಯಪ್‌ ಮೂಲಕ ಗಮನಿಸುವ ವ್ಯವಸ್ಥೆ ಇಲ್ಲಿದೆ. ಎಲ್ಲಿಗೆ ಎಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕು ಎನ್ನುವುದನ್ನು ಮೊದಲೇ ನಿಗದಿಪಡಿಸಿದರೆ ಬಳಿಕ ತಾನಾಗಿಯೇ ಅವು ಕಾರ್ಯ ನಿರ್ವಹಿಸುತ್ತವೆ.

ವಿದೇಶ ಪ್ರವಾಸ
ಅಜಿತ್‌ ಪ್ರಸಾದ್‌ ರೈಗಳು ಕಾಫಿ, ಕಾಳುಮೆಣಸಿನ ಕೃಷಿ ಅಧ್ಯಯನಕ್ಕಾಗಿ 70ರ ಇಳಿ ವಯಸ್ಸಿನಲ್ಲೂ ವಿಯೆಟ್ನಾಂ, ಕಾಂಬೋಡಿಯಾ ಸಹಿತ ಹಲವು ರಾಷ್ಟ್ರಗಳಿಗೆ ಹೋಗಿ ಬರುತ್ತಿದ್ದಾರೆ. ತೋಟ ವೀಕ್ಷಣೆಗೆಂದು ಬರುವ ನೂರಾರು ಮಂದಿಗೆ ತನ್ನ ಯಶೋಗಾಥೆಯನ್ನು ವಿವರಿಸುತ್ತಾರೆ.

ಕಾಫಿ ಕೃಷಿಗೆ ಇಲ್ಲಿನ ವಾತಾವರಣ ಪೂರಕ. ಭವಿಷ್ಯದಲ್ಲಿ 20 ಎಕ್ರೆ ಪ್ರದೇಶದಲ್ಲೂ ಕಾಫಿ ಬೆಳೆಯುವ ಉದ್ದೇಶ ಹೊಂದಿದ್ದು, 10 ಸಾವಿರ ಗಿಡ ತರಲು ಸಿದ್ಧತೆ ನಡೆಸಿದ್ದೇನೆ. ಅಡಿಕೆ, ರಬ್ಬರ್‌, ಕಾಳುಮೆಣಸು ಜತೆಗೆ ಉಪ ಬೆಳೆಯಾಗಿ ಕಾಫಿಯನ್ನು ಬೆಳೆಯಬಹುದು. ಆದಾಯದಿಂದಲೂ ಕಾಫಿ ಅನುಕೂಲ. ಹಳದಿ ಎಲೆ ಬಾಧಿತ ಕೃಷಿ ತೋಟಗಳಲ್ಲಿ ಈ ಕೃಷಿ ಸಾಧ್ಯವಿದೆ.
-ಅಜಿತ್‌ ಪ್ರಸಾದ್‌ ರೈ
ಪ್ರಗತಿಪರ ಕೃಷಿಕ

– ಕಿರಣ್‌ ಪ್ರಸಾದ್‌ ಕುಂಡಡ್ಕ

 

Advertisement

Udayavani is now on Telegram. Click here to join our channel and stay updated with the latest news.

Next