Advertisement

ಗಡಿ ಗುರುತಿಸಿ ಪಹಣಿ ಪತ್ರ ತಯಾರಿಸಲು ಸೂಚನೆ

09:51 PM Nov 05, 2020 | mahesh |

ಪುತ್ತೂರು: ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ ಗಳಿಗೆ ಜಾಗ ಮಂಜೂರು ಮಾಡಿ, ಗಡಿ ಗುರುತಿಸಿ ಪಹಣಿ ಪತ್ರ ತಯಾರಿಸುವಂತೆ ತಾಲೂಕು ಪಂಚಾಯತ್‌ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್‌ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ತಾ.ಪಂ. ಮಾಸಿಕ ಕೆಡಿಪಿ ಸಭೆ ನ. 5ರಂದು ತಾ.ಪಂ. ಸಭಾಂಗಣದಲ್ಲಿ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ಸಿ. ಮಾತನಾಡಿ, ತಾಲೂಕಿನಲ್ಲಿ 75 ಶಾಲೆಗಳಿಗೆ ಜಾಗ ಮಂಜೂರುಗೊಂಡಿಲ್ಲ ಎನ್ನುವ ಮಾಹಿತಿ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ, ತಾಲೂಕಿನಲ್ಲಿ 11 ಅಂಗನವಾಡಿ ಕೇಂದ್ರಗಳಿಗೆ ಜಾಗ ಮಂಜೂರು ಬಗ್ಗೆ ಗಡಿ ಗುರುತು ಆಗಿಲ್ಲ ಎಂದು ಪ್ರಸ್ತಾವಿಸಿದರು.

ತಾ.ಪಂ. ಅಧ್ಯಕ್ಷರು ಉತ್ತರಿಸಿ, ಈ ಬಗ್ಗೆ ಕ್ರಮ ಕೈಗೊಂಡು ಗಡಿ ಗುರುತು ನಡೆಸಿ ಪಹಣಿ ತಯಾರಿಸಬೇಕು. ಈ ವರ್ಷದ ಅಂತ್ಯದ ಒಳಗಾಗಿ ಎಲ್ಲ ಅಂಗನವಾಡಿ ಮತ್ತು ಸರಕಾರಿ ಶಾಲೆಗಳಿಗೆ ಜಾಗ ಗುರುತಿಸಿ ಪಹಣಿ ಪತ್ರ ಸಿದ್ಧಗೊಳ್ಳಬೇಕು ಎಂದು ಕಂದಾಯ ಮತ್ತು ಭೂ ದಾಖಲೆಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಸ್ತೆ ಬದಿ ಮಾರಾಟ: ನಿಗಾ ವಹಿಸಲು ಸೂಚನೆ
ರಸ್ತೆ ಬದಿಯಲ್ಲಿ ಕಿಟಿಕಿ, ಬಾಗಿಲು ಇನ್ನಿತರ ಗೃಹ ನಿರ್ಮಾಣದ ವಸ್ತುಗಳನ್ನಿಟ್ಟು ಮಾರಾಟ ಮಾಡುತ್ತಿ ರುವುದರಿಂದ ವಾಹನಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಅಧ್ಯಕ್ಷರು ಪ್ರಸ್ತಾವಿಸಿದರು. ರಸ್ತೆ ಬದಿಗಳಲ್ಲಿ ವಾಹನ ಮತ್ತು ಪಾದಚಾರಿ ಸಂಚಾರಕ್ಕೆ ತೊಂದರೆ ಮಾಡುವಂತಹ ಮಾರಾಟಕ್ಕೆ ಅವಕಾಶ ನೀಡಬಾರದು. ಈಗ ಅಂತಹ ಪ್ರಕರಣಗಳನ್ನು ಗುರುತಿಸಿ ತೆರವುಗೊಳಿಸುವ ಮೂಲಕ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

18 ಕುಟುಂಬಗಳಿಗೆ ನೋಟಿಸ್‌
ಕೊಳ್ತಿಗೆ ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 18 ಕುಟುಂಬಗಳಿಗೆ ಅರಣ್ಯ ಇಲಾಖೆ ನೋಟಿಸು ನೀಡಿ ತೆರವುಗೊಳಿಸುವಂತೆ ತಿಳಿಸಿದೆ. ಸುಮಾರು 15 ವರ್ಷಗಳಿಂದ ಇಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿರುವ ಇಲ್ಲಿನ ಬಡ ಕುಟುಂಬಗಳಿಗೆ ಇದರಿಂದ ತೊಂದರೆಯಾಗಲಿದೆ ಎಂದು ಅಧ್ಯಕ್ಷರು ಅಧಿಕಾರಿಗಳ ಗಮನಕ್ಕೆ ತಂದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಅರಣ್ಯ ಅಧಿಕಾರಿ, ಈ ಪ್ರದೇಶ ಮೀಸಲು ಅರಣ್ಯ ವ್ಯಾಪ್ತಿಗೆ ಬರುತ್ತಿರುವುದರಿಂದ ವಾಸಕ್ಕೆ ನೀಡಲು ಅವಕಾಶವಿಲ್ಲ ಎಂದು ತಿಳಿಸಿದರು. ಅರಣ್ಯ ಇಲಾಖೆಗೆ ಪಹಣಿ ಪತ್ರವಾಗಿಲ್ಲ ಎಂಬ ಕಾರಣಕ್ಕೆ ಅದನ್ನು ಅರಣ್ಯದ ಜಾಗ ಅಲ್ಲವೆಂದು ಹೇಳಲು ಆಗುವುದಿಲ್ಲ. ಪಹಣಿ ಪತ್ರ ನೀಡುವಂತೆ ಕಂದಾಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರೂ ಈ ತನಕ ಅವರು ಮಾಡಿಕೊಟ್ಟಿಲ್ಲ ಎಂದು ದೂರಿದರು. ನೀವು ಅರ್ಜಿ ನೀಡಿದಲ್ಲಿ ನಾವು ಪಹಣಿ ಪತ್ರ ನೀಡುತ್ತೇವೆ ಎಂದು ತಹಶೀಲ್ದಾರ್‌ ರಮೇಶ್‌ ಬಾಬು ತಿಳಿಸಿದರು. ಅರಣ್ಯ ಇಲಾಖೆಗೆ ಪಹಣಿ ಪತ್ರ ಸಿಗಬಹುದು. ಆದರೆ ಅಲ್ಲಿನ ಬಡವರ ಗತಿಯೇನು ಎಂದು ಪ್ರಶ್ನಿಸಿದ ರಾಧಾಕೃಷ್ಣ ಬೋರ್ಕರ್‌ ಅದೇ ಪ್ರದೇಶದಲ್ಲಿ ತಲಾ 5 ಸೆಂಟ್ಸ್‌ ಸರಕಾರಿ ಜಮೀನನ್ನು ತತ್‌ಕ್ಷಣವೇ ಆ ಕುಟುಂಬಗಳಿಗೆ ಮಂಜೂರುಗೊಳಿಸುವಂತೆ ತಹಶೀಲ್ದಾರ್‌ಗೆ ತಿಳಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್‌ ಭಂಡಾರಿ ಕಲಾಪ ನಿರ್ವಹಿಸಿದರು.

Advertisement

ಆರ್ಲಪದವು: ಅಪಾಯಕಾರಿ ಸ್ಥಿತಿಯಲ್ಲಿ ವಸತಿ ಸಮುಚ್ಚಯ
ಆರ್ಲಪದವು ಆರೋಗ್ಯ ಇಲಾಖೆಯ ವಸತಿ ಸಮುಚ್ಚಯ ಕುಸಿಯುವ ಹಂತದಲ್ಲಿದ್ದು, ಈ ಕಟ್ಟಡ ತೆರವುಗೊಳಿಸಲು ಗುತ್ತಿಗೆದಾರರು ಮುಂದಾಗದ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಟೆಂಡರ್‌ ದರ ಕಡಿಮೆಗೊಳಿಸಿ ಮತ್ತೆ ಏಲಂ ನಡೆಸುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಹಿಂದಿನ ಸಭೆಯಲ್ಲಿ ಅಧ್ಯಕ್ಷರು ತಿಳಿಸಿರುವಂತೆ ಪಾಣಾಜೆ ಆರೋಗ್ಯ ಕೇಂದ್ರಕ್ಕೆ ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿ ಸಭೆಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next