Advertisement

ಪ್ರಕೃತಿ, ಪ್ರಾಣಿ, ಪಕ್ಷಿಗಳ ರಕ್ಷಣೆ ಹೊಣೆ ನಮ್ಮದು: ಖಾದರ್‌

03:44 PM Dec 01, 2018 | |

ಪುತ್ತೂರು: ಮನುಷ್ಯನಿಗೆ ಇರುವ ಹಕ್ಕು ಆತನ ಜತೆ ಬೆರೆತು ಜೀವಿಸುವ ಪ್ರಾಣಿಗಳಿಗೂ ಇದೆ. ಮನುಷ್ಯ ಪ್ರಕೃತಿ ಮತ್ತು ಪ್ರಾಣಿ, ಪಕ್ಷಿಗಳಿಂದ ದೂರ ಸರಿದಾಗ ವಿಕೋಪ ಉಂಟಾಗುತ್ತದೆ. ಈ ಕಾರಣದಿಂದ ಅವುಗಳನ್ನು ರಕ್ಷಿಸಿಕೊಳ್ಳುವ, ಆರೋಗ್ಯದಿಂದ ನೋಡಿಕೊಳ್ಳುವ ಜವಾಬ್ದಾರಿಯೂ ನಮಗಿದೆ ಎಂದು ರಾಜ್ಯ ನಗರಾಭಿವೃದ್ಧಿ, ವಸತಿ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಆರ್‌.ಐ.ಡಿ.ಎಫ್‌. ಯೋಜನೆಯಡಿ ಮಂಜೂರಾದ ದ.ಕ. ಜಿ.ಪಂ., ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆ ಮಂಗಳೂರು ಮತ್ತು ಪುತ್ತೂರು, ದ. ಕ. ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ನಿರ್ಮಿಸಲಾದ ಪುತ್ತೂರು ಪಶು ಆಸ್ಪತ್ರೆಯ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಗೋವುಗಳ ವಿವಿಧ ತಳಿಗಳ ಪ್ರದರ್ಶನ ಸ್ಪರ್ಧೆಗಳು ಮಂಗಳೂರು ವ್ಯಾಪ್ತಿಯಲ್ಲಿ ಈ ಹಿಂದೆ ನಡೆಯುತ್ತಿದ್ದವು. ಇಂತಹ ಪ್ರದರ್ಶನ ಗಳನ್ನು ಮತ್ತೆ ಹಮ್ಮಿಕೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

9 ಕಟ್ಟಡ ಉದ್ಘಾಟನೆ
ಜಿಲ್ಲೆಯಾದ್ಯಂತ ಶುಕ್ರವಾರ 9 ಕಡೆಗಳಲ್ಲಿ ಪಶು ಆಸ್ಪತ್ರೆ ಕಟ್ಟಡಗಳು ಉದ್ಘಾಟನೆಗೊಂಡಿವೆ. 5 ಕಟ್ಟಡಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಶು ವೈದ್ಯ ಕೇಂದ್ರಗಳ ಮೂಲಕ ಜನಜಾಗೃತಿ, ಸರಕಾರದ ಯೋಜನೆಗಳ ಮಾಹಿತಿ ನೀಡುವ ಕೆಲಸ ಆಗಬೇಕು. ಪಶುಗಳಿಗೆ ಬಾಧಿಸುವ ರೋಗಗಳ ಕುರಿತು ಸಮರ್ಪಕ ಅಧ್ಯಯನವನ್ನು ವೈದ್ಯಾಧಿಕಾರಿಗಳು ಮಾಡಬೇಕು ಎಂದು ಸಚಿವರು ಹೇಳಿದರು.

ಮಂಗಳೂರಿನ ಬಳಿಕ ಹೆಚ್ಚು ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕೇಂದ್ರ ಪುತ್ತೂರು. ಭವಿಷ್ಯದ ಪುತ್ತೂರಿಗಾಗಿ ಮೂಲ ಸೌಕರ್ಯಗಳು, ಆರ್ಥಿಕ ಪ್ರಗತಿ ವ್ಯವಸ್ಥೆಗಳು ಇನ್ನಷ್ಟು ಆಗಬೇಕು. ಈ ನಿಟ್ಟಿನಲ್ಲಿ ಎಡಿಬಿ ಮೂಲಕ 63 ಕೋಟಿ ರೂ. ಕುಡಿ ಯುವ ನೀರಿನ ಯೋಜನೆ ಪುತ್ತೂರಿಗೆ ಮಂಜೂರು ಗೊಂಡಿದೆ ಎಂದರು.

ನೆಮ್ಮದಿ ನೀಡುವ ಆಲಯ
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ರೈತನಿಗೆ ಮತ್ತು ಆತನ ಕೃಷಿ ಬದುಕಿಗೆ ನೆಮ್ಮದಿ ನೀಡುವ ಆಲಯ ಪಶು ಆಸ್ಪತ್ರೆ. ಈ ಕಾರಣದಿಂದ ಹಿಂದೆ ಇದನ್ನು ಗೋ ಶಾಲೆ ಎನ್ನಲಾಗುತ್ತಿತ್ತು. ದೇಶದಲ್ಲಿ ಕೃಷಿ, ಹೈನುಗಾರಿಕೆಗೆ ಸಂಬಂಧಪಟ್ಟ ಕ್ರಾಂತಿಯೇ ಆಗಿದೆ. ಈ ಸಾಧನೆಗಳಲ್ಲಿ ಪಶುವೈದ್ಯ ಇಲಾಖೆಯ ಪಾಲೂ ಗಣನೀಯವಾಗಿದೆ ಎಂದರು.

Advertisement

ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ| ಎಸ್‌. ಮೋಹನ್‌, ಕೊಯಿಲ ಪಶು ವೈದ್ಯಕೀಯ ಕೇಂದ್ರದ ಡಾ| ಹರೀಶ್‌, ಪುತ್ತೂರು ಮುಖ್ಯ ಪಶು ವೈದ್ಯಾಧಿಕಾರಿ ಡಾ| ಧರ್ಮಪಾಲ್‌ ಕೆ., ಸ್ಥಳೀಯರಾದ ನಜೀರ್‌ ಮದ, ಕೈಲಾರ್‌ ರಾಜಗೋಪಾಲ ಭಟ್‌, ಕರುಣಾಕರ ಸುವರ್ಣ, ಜತೀಂದ್ರ ಶೆಟ್ಟಿ, ರಘುನಾಥ ರೈ, ಪ್ರಕಾಶ ರೈ, ಜಗದೀಶ ರಾವ್‌ ಮಣಿಕ್ಕಳ, ಮಹಮ್ಮದ್‌ ಕೆಂಪಿ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು. ಉಪ್ಪಿನಂಗಡಿ ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ| ರಾಮಪ್ರಕಾಶ್‌ ಡಿ. ಸ್ವಾಗತಿಸಿದರು.

5 ವರ್ಷ ನಿಮ್ಮದೇ ಆಡಳಿತ
ನಗರ ಸ್ಥಳೀಯಾಡಳಿತ ನಗರಸಭೆಯ ಚುನಾವಣೆ ನಡೆದು 3 ತಿಂಗಳು ಕಳೆದರೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಮೂಲಕ ಆಡಳಿತ ರಚನೆಯಾಗದಿರುವ ಕುರಿತು ಸಭೆಯಲ್ಲಿ ನಗರಾಭಿವೃದ್ಧಿ ಸಚಿವರ ಗಮನ ಸೆಳೆದ ಶಾಸಕ ಸಂಜೀವ ಮಠಂದೂರು, ನಮಗೆ ನ್ಯಾಯ ಒದಗಿಸಿ ಎಂದು ಮನವಿ ಮಾಡಿದರು. ತಮ್ಮ ಭಾಷಣದ ಸಂದರ್ಭ ಶಾಸಕರ ಮನವಿಗೆ ಉತ್ತರಿಸಿದ ಸಚಿವ ಯು.ಟಿ. ಖಾದರ್‌, 5 ವರ್ಷದ ಪೂರ್ಣ ಅವಧಿ ನಿಮಗೆ ಖಂಡಿತಾ ಸಿಗುತ್ತದೆ. ಹೆದರಬೇಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next