Advertisement

ಪುತ್ತೂರು:ನೆಹರೂ ನಗರದ ರೈಲ್ವೇ ಸೇತುವೆಗೆ ವಿಸ್ತರಣೆ ಭಾಗ್ಯ

06:15 PM Jan 18, 2023 | Team Udayavani |

ಪುತ್ತೂರು: ರಾಜ್ಯ-ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ನೆಹರೂನಗರದ ರೈಲ್ವೇ ಸೇತುವೆ ವಿಸ್ತರಣೆಗೆ ರೈಲ್ವೇ ಇಲಾಖೆ ಅನುದಾನ ಮಂಜೂರುಗೊಳಿಸುವ ಮೂಲಕ ಹಲವು ದಶಕಗಳ ಬೇಡಿಕೆ ಈಡೇರಿಸಿದೆ.

Advertisement

ಮುಖ್ಯವಾಗಿ ವಿವೇಕಾನಂದ ವಿದ್ಯಾಸಂಸ್ಥೆಗೆ ಸೇರಿದಂತೆ ಹಲವು ಪ್ರದೇಶಗಳಿಗೆ ದಾರಿ ಕಲ್ಪಿಸುವ ನೆಹರೂನಗರ ಸಂಪರ್ಕ ರಸ್ತೆಯಲ್ಲಿನ ರೈಲ್ವೇ ಸೇತುವೆ ವಿಸ್ತರಣೆ ಅಥವಾ ಹೊಸ ಸೇತುವೆ ನಿರ್ಮಾಣಕ್ಕಾಗಿ ಹಲವು ಬೇಡಿಕೆ, ಹೋರಾಟಗಳು ನಡೆದಿತ್ತು.

5.35 ಕೋ.ರೂ. ಅನುದಾನ
ಈಗಿರುವ ಏಕಪಥದ ಸೇತುವೆಯನ್ನು ದ್ವಿಪಥವನ್ನಾಗಿ ಪರಿವರ್ತಿಸಲು 5.35 ಕೋ.ರೂ. ಅನುದಾನ ಮಂಜೂರುಗೊಳಿಸಲಾಗಿದೆ. ಹುಬ್ಬಳ್ಳಿ ವೆಸ್ಟರ್ನ್ ರೈಲ್ವೇ ಈ ಬಗ್ಗೆ ಅಧಿಕೃತ ಪ್ರಕಟನೆ ಹೊರಡಿಸಿದೆ. ವಿವೇಕಾನಂದ ವಿದ್ಯಾಸಂಸ್ಥೆ, ಶಾಸಕ ಸಂಜೀವ ಮಠಂದೂರು ಅವರ ಸತತ ಮನವಿಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರ ಪ್ರಯತ್ನದಿಂದ ಕೇಂದ್ರ ರೈಲ್ವೇ ಸಚಿವ ಅಶ್ವಿ‌ನ್‌ ವೈಷ್ಣವ್‌ ಅನುದಾನ ಮಂಜೂರುಗೊಳಿಸಿದ್ದಾರೆ.

ಪುತ್ತೂರಿಗೆ ರೈಲ್ವೇ ಗಿಫ್ಟ್ !
ಪುತ್ತೂರಿಗೆ ಈ ಬಾರಿ ರೈಲ್ವೇ ಭರ್ಜರಿ ಗಿಫ್ಟ್ ನೀಡಿದೆ. ಎಪಿಎಂಸಿ ಅಂಡರ್‌ಪಾಸ್‌, ಹಾರಾಡಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ಎನ್‌ಒಸಿ ನೀಡಿದೆ. ಈ ಎರಡು ಕಾಮಗಾರಿಗಳು ಪ್ರಗತಿಯಲ್ಲಿದೆ. ವರ್ಷದೊಳಗೆ ಮಂಜೂರುಗೊಂಡ ಎರಡನೇ ರೈಲ್ವೇ ಸೇತುವೆಯಿದು. ಬಹುಬೇಡಿಕೆಯಾಗಿದ್ದ ಎಪಿಎಂಸಿ ಸಂಪರ್ಕ ರಸ್ತೆಯಲ್ಲಿ 13 ಕೋ.ರೂ. ವೆಚ್ಚದಲ್ಲಿ ಅಂಡರ್‌ಪಾಸ್‌ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈ ಯೋಜನೆಯಲ್ಲಿ ರಾಜ್ಯ ಸರಕಾರ ಮೂಲಸೌಕರ್ಯ ಇಲಾಖೆ ಶೇ. 50 ಹಣ ಭರಿಸಿದರೆ, ಉಳಿದ ಅರ್ಧ ಹಣ ರೈಲ್ವೇ ಭರಿಸುತ್ತಿದೆ. ಆದರೆ ನೆಹರೂನಗರದ ಮೇಲ್ಸೇತುವೆ ವಿಸ್ತರಣೆಯ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ರೈಲ್ವೇ
ಇಲಾಖೆಯೇ ಭರಿಸಲಿದೆ. ಇಲ್ಲಿ ರಾಜ್ಯ ಸರಕಾರದ ಪಾಲು ಇರುವುದಿಲ್ಲ.

ಸಂಪರ್ಕ ಸೇತುವೆ
ನೆಹರೂ ನಗರದಿಂದ ವಿವೇಕಾನಂದ ಕ್ಯಾಂಪಸ್‌ ಸಂಪರ್ಕದ ಈ ರಸ್ತೆ ಕೇವಲ ವಿದ್ಯಾಸಂಸ್ಥೆಗಷ್ಟೇ ಸೀಮಿತವಾಗಿಲ್ಲ. ಇದು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ, ಉಪ್ಪಿನಂಗಡಿ-ಪುತ್ತೂರು ರಾಜ್ಯ ಹೆದ್ದಾರಿ ಸಂಪರ್ಕದ ರಸ್ತೆಯಾಗಿದೆ. ನೆಹರೂನಗರದಿಂದ ಬನ್ನೂರು, ಪಡ್ಡಾಯೂರು, ಪಡೀಲು ಮೊದಲಾದ ಪ್ರದೇಶಗಳಿಗೆ ನಿತ್ಯದ ಸಂಚಾರಕ್ಕೆ ಈ ರಸ್ತೆಯನ್ನೇ ಬಳಸಲಾಗುತ್ತಿದೆ. ಮಂಗಳೂರು ಭಾಗದಿಂದ ಉಪ್ಪಿನಂಗಡಿಗೆ ಹೋಗುವವರೂ ಇದೇ ರಸ್ತೆಯನ್ನು ಬಳಸುತ್ತಾರೆ. ಅಸಂಖ್ಯ ವಾಹನಗಳೂ ಸಂಚರಿಸುವ ರಸ್ತೆ ಇದಾಗಿದೆ.

Advertisement

ಇಕ್ಕಟ್ಟೇ ಇಲ್ಲಿನ ಬಿಕ್ಕಟ್ಟು..!
ಈಗಿರುವ ರೈಲ್ವೇ ಮೇಲ್ಸೇತುವೆಯ ಅಗಲ ಕೇವಲ 12 ಅಡಿ. 70 ಅಡಿ ಉದ್ದದ ಈ ಮೇಲ್ಸೇತುವೆಯ ಅಗಲ ರಸ್ತೆಯ ಅರ್ಧಕ್ಕಿಂತಲೂ ಕಡಿಮೆ ಇದೆ. ಮೇಲ್ಸೇತುವೆ ಕಿರಿದಾಗಿರುವುದರಿಂದ ರಸ್ತೆ ಬ್ಲಾಕ್‌ ಮಾಮೂಲಿಯಾಗಿದೆ. ಮಳೆಗಾಲದಲ್ಲಂತೂ ಮಳೆ ನೀರು ತುಂಬಿ ಮೇಲ್ಸೇತುವೆಯ ರಸ್ತೆಯೇ ಮುಚ್ಚಿರುತ್ತದೆ.

ಅನುದಾನಕ್ಕೆ ಕಸರತ್ತು
ಕಾಲೇಜಿಗೆ ಸಂಪರ್ಕ ಒದಗಿಸುವ ಕಾರಣ ವಿದ್ಯಾಸಂಸ್ಥೆಯೇ ಅನುದಾನ ಭರಿಸಬೇಕು ಅಥವಾ ಸರಕಾರ ನೀಡಬೇಕು ಎಂದು ರೈಲ್ವೇ ಇಲಾಖೆ ವಾದ ಮಂಡಿಸಿತ್ತು. ಈ ರಸ್ತೆ ವಿದ್ಯಾಸಂಸ್ಥೆಗೆ ಮಾತ್ರ ಸಂಪರ್ಕ ಹೊಂದಿಲ್ಲ, ಬೇರೆ ಪ್ರದೇಶಗಳಿಗೆ ಇದೇ ದಾರಿ ಬಳಕೆ ಆಗುತ್ತಿರುವ ಕಾರಣ ವಿದ್ಯಾಸಂಸ್ಥೆ ವತಿಯಿಂದಲೇ ಅನುದಾನ ಒದಗಿಸಬೇಕು ಎಂಬ ವಾದ ಸರಿಯಲ್ಲ ಎಂಬ ಅಭಿಪ್ರಾಯ ಇದಕ್ಕೆ ಉತ್ತರ ರೂಪದಲ್ಲಿ ನೀಡಲಾಗಿತ್ತು.

ಹೋರಾಟದ ಕಿಚ್ಚು
ಪುತ್ತೂರಿನ ಕ್ಷೇತ್ರಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೇರಿದಂತೆ ಹಲವು ರಾಜಕಾರಣಿಗಳು, ಉನ್ನತ ಹಂತದ ಅಧಿಕಾರಿಗಳು ಇದ್ದರೂ ಸೇತುವೆ ನಿರ್ಮಾಣ ಆಗಿಲ್ಲ ಎನ್ನುವ ಟೀಕೆಗಳು ಕೂಡ ಕೇಳಿ ಬಂದಿತ್ತು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌, ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು, ವಿವೇಕಾನಂದ ಪ.ಪೂ. ಕಾಲೇಜು, ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜು, ವಿವೇಕಾನಂದ ಪಾಲಿಟೆಕ್ನಿಕ್‌ ಕಾಲೇಜು, ವಿವೇಕಾನಂದ ಎಂ.ಬಿ.ಎ. ಕಾಲೇಜುಗಳ ವಿದ್ಯಾರ್ಥಿ ಸಂಘ ಹಾಗೂ ನಾಗರಿಕರ ವತಿಯಿಂದ ಈ ಹಿಂದೆ ಟ್ವಿಟರ್‌ ಅಭಿಯಾನ ಕೂಡ ನಡೆದಿತ್ತು. ಹೀಗೆ ಸತತ ಹೋರಾಟ ಫಲವಾಗಿ ಹೊಸ ಸೇತುವೆ ನಿರ್ಮಾಣದ ಕನಸು ಈಡೇರುತ್ತಿದೆ.

ಶೀಘ್ರದಲ್ಲಿ ಶಿಲಾನ್ಯಾಸ
ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ನಮ್ಮ ಮನವಿಗೆ ಸ್ಪಂದನೆ ನೀಡಿದ ಪರಿಣಾಮ ರೈಲ್ವೇ ಇಲಾಖೆ ಅನುದಾನ ಬಿಡುಗಡೆಗೊಳಿಸಿದೆ. ಬಹುಕಾಲದ ಬೇಡಿಕೆಯ ಈಡೇರಿಕೆಗೆ ಅವಕಾಶ ದೊರೆತಿದೆ. ಶೀಘ್ರದಲ್ಲಿ ಸಂಸದರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸಲಾಗುವುದು.
-ಸಂಜೀವ ಮಠಂದೂರು, ಶಾಸಕ, ಪುತ್ತೂರು

ಉದಯವಾಣಿ ಸತತ ವರದಿ
ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಕಿರಿದಾದ ಸೇತುವೆ ದಾಟಲು ಆಗುತ್ತಿರುವ ಸಮಸ್ಯೆಗಳ ಬಗ್ಗೆ ಉದಯವಾಣಿ ಸುದಿನ ನಿರಂತರ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು.

ಕಿರಣ್‌ ಪ್ರಸಾದ್‌ ಕುಂಡಡ್ಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next