Advertisement
ಪುತ್ತೂರು ಶಾಸಕ ಸಂಜೀವ ಮಠಂದೂರು ಈ ನಿಟ್ಟಿನಲ್ಲಿ ಮುಂದಡಿಯ ಹೆಜ್ಜೆ ಇರಿಸಿದ್ದು, ಬಹುಮತ ಹೊಂದಿರುವ ಬಿಜೆಪಿ ನಗರಸಭೆ ಸದಸ್ಯರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಗರಸಭೆಗೆ ಹೊಸ ಕಚೇರಿ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ನೀಲ ನಕಾಶೆಯನ್ನು ಸಿದ್ಧ ಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಲಾಗಿದೆ.
ನಗರಸಭಾ ಆಡಳಿತ ಕಚೇರಿಯ ಹೊಸ ಕಟ್ಟಡವನ್ನು ನಿರ್ಮಿಸುವ ನಿಟ್ಟಿನಲ್ಲಿ 5 ಕೋಟಿ ರೂ. ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ ಶಾಸಕರ 2 ಕೋಟಿ ರೂ., ನಗರೋತ್ಥಾನದ 1 ಕೋಟಿ ರೂ. ಅನುದಾನವನ್ನು ಇರಿಸಲಾಗಿದೆ. ಇನ್ನುಳಿದ 2 ಕೋಟಿ ರೂ. ಅನುದಾನಕ್ಕೆ ಸರಕಾರಕ್ಕೆ ಬರೆಯಲು ನಿರ್ಧರಿಸಲಾಗಿದೆ.
Related Articles
ಕಿಲ್ಲೆ ಮೈದಾನದಲ್ಲಿನ ಪುತ್ತೂರು ಸೋಮವಾರ ಸಂತೆಗೆ ಶತಮಾನದ ಇತಿಹಾಸವಿದೆ. ಕೆಲವು ವರ್ಷಗಳ ಹಿಂದೆ ಸಂಚಾರಕ್ಕೆ ಸಮಸ್ಯೆಯಾಗುವ ಕಾರಣ ನೀಡಿ ಈ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರ ಮಾಡಿದ್ದರೂ ನಿರೀಕ್ಷಿತ ಫಲ ನೀಡದ ಕಾರಣ ಹಾಗೂ ವಿರೋಧ ವ್ಯಕ್ತವಾದ ಕಾರಣ ಮರಳಿ ಕಿಲ್ಲೆ ಮೈದಾನಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಇದೇ ಸಂದರ್ಭದಲ್ಲಿ ಆಗಿನ ನಗರಸಭೆ ಆಡಳಿತವು ಸಂತೆ ವ್ಯಾಪಾರಕ್ಕೆ ಪ್ರತ್ಯೇಕ ಸಂತೆಕಟ್ಟೆ ನಿರ್ಮಿಸುವ ಭರವಸೆಯನ್ನೂ ನೀಡಿ ಹಿಂದಿನ ಪುರಸಭೆ ಕಾರ್ಯನಿರ್ವಹಿಸುತ್ತಿದ್ದ ಜಾಗದಲ್ಲಿ ಕಟ್ಟೆ ನಿರ್ಮಿಸಲು 1 ಕೋಟಿ ರೂ. ಅನುದಾನವನ್ನೂ ನಿಗದಿಪಡಿಸಿತ್ತು. ಆದರೆ ಈಗ ಅದೇ ಜಾಗದಲ್ಲಿ ನಗರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದೆ. ಹಾಲಿ ಇರುವ ನಗರಸಭೆ ಕಟ್ಟಡವನ್ನು ವಾಣಿಜ್ಯ ಸಂಕೀರ್ಣ, ದಿನವಹಿ ಮಾರುಕಟ್ಟೆ ಉದ್ದೇಶಕ್ಕೆ ಬಳಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
Advertisement
ಎಡಿಬಿ ಸಾಲದ ಶೂಲ!ಹತ್ತು ವರ್ಷಗಳ ಹಿಂದೆ ಅಂದಿನ ಪುರಸಭೆ ಆಡಳಿತವು ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಎಡಿಬಿಯಿಂದ ಪಡೆದ ಸುಮಾರು 58 ಕೋಟಿ ರೂ. ಸಾಲದ ಹಣದಲ್ಲಿ 18 ಕೋಟಿ ರೂ. ಹಾಗೂ 10 ವರ್ಷಗಳ ಬಡ್ಡಿಯ ಶೂಲವೂ ಇದೆ. ಈ ಹಣದಲ್ಲಿ ನೀರು ಪೂರೈಕೆ, ವಾಣಿಜ್ಯ ಸಂಕೀರ್ಣ, ಶೌಚಾಲಯ, ರಸ್ತೆ ನಿರ್ಮಾಣ, ನಗರಸಭೆಯ ಕಚೇರಿ ಕಟ್ಟಡ ನಿರ್ಮಾಣಕ್ಕೂ ವಿನಿಯೋಗಿಸಲಾಗಿತ್ತು. ಈ ಸಾಲವನ್ನು ಮನ್ನಾ ಮಾಡುವ ಕುರಿತಂತೆ ಸರಕಾರದ ಜತೆ ಚರ್ಚೆ ನಡೆಸಲಾಗುವುದು ಎಂದು ಮಠಂದೂರು ತಿಳಿಸಿದ್ದಾರೆ. ಶೀಘ್ರ ಕಾಮಗಾರಿ
ಹಿಂದಿನ ಕಟ್ಟಡದಲ್ಲಿ ಸಂತೆ ಮಾರುಕಟ್ಟೆಗೆ ನಿಗದಿಪಡಿಸಿದ ಜಾಗವನ್ನು ಯಾಕೆ ಕಚೇರಿಗೆ ಬಳಸಿಕೊಂಡರೋ ಗೊತ್ತಿಲ್ಲ. ಆದರೆ ನಗರಸಭೆಗೆ ಸುಸಜ್ಜಿತ, ವ್ಯವಸ್ಥಿತ ನೂತನ ಕಚೇರಿ ಕಟ್ಟಡ ಆಗಬೇಕು ಎಂಬ ದೃಷ್ಟಿಯಿಂದ ಮುಂದಡಿ ಇಟ್ಟಿದ್ದೇವೆ. ಈ ನಿಟ್ಟಿನಲ್ಲಿ 2 ಕೋಟಿ ರೂ. ನನ್ನ ಅನುದಾನ ನೀಡಲು ಬದ್ಧನಿದ್ದೇನೆ. ಶೀಘ್ರ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯಲಿದೆ.
– ಸಂಜೀವ ಮಠಂದೂರು, ಶಾಸಕ, ಪುತ್ತೂರು ಹೆಚ್ಚುವರಿ ಅನುದಾನಕ್ಕೆ ಬೇಡಿಕೆ
ಪಟ್ಟಣ ಪಂಚಾಯತ್, ಪುರಸಭೆ ಆಗಿದ್ದಾಗ ಕಾರ್ಯನಿರ್ವಹಿಸುತ್ತಿದ್ದ ಜಾಗದಲ್ಲಿ ನಗರಸಭೆಯ ಹೊಸ ಕಚೇರಿ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ನಗರೋತ್ಥಾನ ಯೋಜನೆಯ 1 ಕೋಟಿ ರೂ. ಇರಿಸಿದ್ದೇವೆ. ಈ ನಿಟ್ಟಿನಲ್ಲಿ ಒಂದಷ್ಟು ಹೆಚ್ಚುವರಿ ಅನುದಾನದ ಆವಶ್ಯಕತೆಯೂ ಇದೆ. ಈ ಕುರಿತು ಪ್ರಯತ್ನ ನಡೆಸುತ್ತಿದ್ದೇವೆ.
-ರೂಪಾ ಟಿ. ಶೆಟ್ಟಿ , ಪೌರಾಯುಕ್ತೆ, ನಗರಸಭೆ ಪುತ್ತೂರು ರಾಜೇಶ್ ಪಟ್ಟೆ