ಪುತ್ತೂರು : ಕಳೆದ ವರ್ಷ ನಗರಸಭೆಯ ಆದಾಯವನ್ನು ಪರಿಗಣಿಸಿ 39 ಕೋಟಿ ರೂ.ಗಳ ಬಜೆಟ್ ತಯಾರಿಸಲಾಗಿತ್ತು. ಈ ವರ್ಷ ಒಂದಷ್ಟು ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳುವ ಯೋಜನೆಯೊಂದಿಗೆ ಸುಮಾರು 43 ಕೋಟಿ ರೂ. ಬಜೆಟ್ ತಯಾರಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಪುತ್ತೂರು ನಗರಸಭೆಯ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಹೇಳಿದರು.
ಪುತ್ತೂರು ನಗರಸಭೆಯಲ್ಲಿ ಆಯವ್ಯಯಕ್ಕೆ ಮುಂಚಿತವಾಗಿ ಸಂಘ ಸಂಸ್ಥೆಗಳು, ಸಾರ್ವಜನಿಕ ಸಲಹೆ-ಸೂಚನೆ ಸ್ವೀಕಾರಕ್ಕೆ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ವರ್ಷದಲ್ಲಿ ನೀರಿನ ಶುಲ್ಕದಿಂದ 3 ಕೋಟಿ ರೂ. ಸಂಗ್ರಹವಾಗಿದೆ. ತೆರಿಗೆ 3 ಕೋಟಿ ರೂ. ವಸೂಲಾತಿಯಾಗಿದೆ. ಕಟ್ಟಡ ವ್ಯಾಪ್ತಿಯನ್ನು ವಿಸ್ತರಿಸಿದ್ದರೂ ಹಿಂದಿನ ತೆರಿಗೆಯನ್ನೇ ಕಟ್ಟುತ್ತಿದ್ದಾರೆ. ಅವರ ತೆರಿಗೆ ಹೆಚ್ಚಿಸುವ ಅಂದಾಜು ಮಾಡಲಾಗಿದೆ. ಕಟ್ಟಡ ಪರವಾನಿಗೆಯಿಂದ 35 ಲಕ್ಷ ರೂ. ಅಂದಾಜು ಆದಾಯ ಲಭಿಸುತ್ತದೆ. ಉದ್ಯಮ ಪರವಾನಿಗೆಯಲ್ಲಿ ಇನ್ನಷ್ಟು ಆದಾಯವನ್ನು ಗಳಿಸಬಹುದು ಎಂದರು.
ಕಳೆದ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಲ್ಲಿ 2.80 ಕೋಟಿ ರೂ., ಎಸ್‌ಎಫ್‌ಸಿಯಲ್ಲಿ 2.67 ಕೋಟಿ ರೂ., ವಾಟರ್ ಸಪ್ಲೈನಲ್ಲಿ 10 ಲಕ್ಷ ಆದಾಯ ಗಳಿಸಿದೆ. ನಗರೋತ್ಥಾನದ ಅನುದಾನಗಳನ್ನು ಹೊರತುಪಡಿಸಿ ಬಜೆಟ್ ಸಿದ್ಧಪಡಿ ಸಲಾಗುತ್ತದೆ. ಇವುಗಳನ್ನು ಹೊರತುಪಡಿಸಿ ಆದಾಯ ಕ್ರೋಢೀಕರಣಕ್ಕೆ ಗಮನಹರಿಸುವ ಅಗತ್ಯವಿದೆ ಎಂದು ಹೇಳಿದರು.
ಕುಡಿಯುವ ನೀರು, ಡಂಪಿಂಗ್ ಯಾರ್ಡ್‌ಗೆ ಟೆಂಡರ್
ನಗರಸಭೆಗೆ ಸಂಬಂಧಿಸಿದಂತೆ 67 ಕೋಟಿ ರೂ. ಹಾಗೂ ಜಿಎಸ್‌ಟಿ ಸೇರಿ 102 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಯ ಟೆಂಡರ್ ಆಗಿದೆ. ಆ ಮೂಲಕ ಎರಡು ವರ್ಷಗಳಲ್ಲಿ ಪುತ್ತೂರಿನಲ್ಲಿ ನೀರಿಗೆ ಸಂಬಂಧಿಸಿದ ವ್ಯವಸ್ಥೆ ಸರಿಯಾಗಲಿದೆ. ಸ್ವಚ್ಛ ಭಾರತ್ ಯೋಜನೆಯಲ್ಲಿ ಡಂಪಿಂಗ್ ಯಾರ್ಡ್ ಅನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 4.50 ಕೋಟಿ ರೂ. ಯೋಜನೆಯ ಟೆಂಡರ್ ಹಂತದಲ್ಲಿದೆ ಎಂದು ಪೌರಾಯುಕ್ತೆ ರೂಪಾ ಶೆಟ್ಟಿ ತಿಳಿಸಿದರು.