Advertisement

ಹಾಸ್ಟೇಲ್‌ ವಾರ್ಷಿಕ ಬಾಡಿಗೆ 30 ಲಕ್ಷ ರೂ.

05:25 AM Feb 22, 2019 | Team Udayavani |

ಪುತ್ತೂರು : ಬಾಡಿಗೆ ಕಟ್ಟಡದಲ್ಲಿರುವ ತನ್ನ 4 ಹಾಸ್ಟೆಲ್‌ಗ‌ಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಿಂಗಳಿಗೆ 2.49 ಲಕ್ಷ ರೂ., ವಾರ್ಷಿಕ ಬರೋಬ್ಬರಿ 29.95 ಲಕ್ಷ ರೂ. ಬಾಡಿಗೆ ಪಾವತಿಸುತ್ತಿದೆ.

Advertisement

ಪುತ್ತೂರು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಒಟ್ಟು 9 ಹಾಸ್ಟೆಲ್‌ಗ‌ಳಿವೆ. ಇದರಲ್ಲಿ 5 ಹಾಸ್ಟೆಲ್‌ ಗಳಿಗೆ ಸ್ವಂತ ಕಟ್ಟಡದ ಭಾಗ್ಯವಿದೆ. ಇನ್ನುಳಿದ 4 ಹಾಸ್ಟೆಲ್‌ಗ‌ಳಿಗೆ ಜಾಗವಿದೆ, ಆದರೆ ಕಟ್ಟಡವಿಲ್ಲ. ಆದ್ದರಿಂದ ಬಾಡಿಗೆ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿವೆ. ಈ ನಾಲ್ಕು ಹಾಸ್ಟೆಲ್‌ಗ‌ಳಿಗೆ ವರ್ಷಕ್ಕೆ 29,95,200 ರೂ. ಬಾಡಿಗೆ ಪಾವತಿಸು ತ್ತಿದೆ. ಅಂದರೆ ತಿಂಗಳಿಗೆ 2,49,600 ರೂ. ಬಾಡಿಗೆ ನೀಡಬೇಕು.

ಸ್ವಂತ ಕಟ್ಟಡವಿರುವ ಹಾಸ್ಟೆಲ್‌ಗ‌ಳು – ಬಿರುಮಲೆ ಡಿ. ದೇವರಾಜ ಅರಸು ಬಾಲಕರ ವಿದ್ಯಾರ್ಥಿನಿಲಯ, ಸರ್ವೆ ಮೆಟ್ರಿಕ್‌ಪೂರ್ವ ಬಾಲಕರ ಹಾಸ್ಟೆಲ್‌, ಉಪ್ಪಿನಂಗಡಿ ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್‌, ನರಿಮೊಗರು
ಮೆಟ್ರಿಕ್‌ನಂತರದ ಬಾಲಕಿಯರ ಹಾಸ್ಟೆಲ್‌, ಬನ್ನೂರು ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್‌. ಇವಿಷ್ಟು ಹಾಸ್ಟೆಲ್‌ಗ‌ಳಿಗೆ ಸ್ವಂತ ಜಾಗ ಮಂಜೂರಾಗಿ, ಕಟ್ಟಡ ಭಾಗ್ಯ ಸಿಕ್ಕಿದೆ.

ಸಾಲ್ಮರ
ಪುತ್ತೂರು ನಗರದ ಬೊಳುವಾರಿನಲ್ಲಿರುವ ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್‌ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. 40 ಬಾಲಕಿಯರು ಆಶ್ರಯ ಪಡೆದಿರುವ ಈ ಹಾಸ್ಟೆಲ್‌ಗೆ ಸ್ವಂತ ಜಾಗದ ಅಗತ್ಯತೆ ಮನಗಂಡು  ಗುಂಪಕಲ್ಲು ಬಳಿ 0.69 ಎಕರೆ ಜಾಗ ಗೊತ್ತು ಪಡಿಸಲಾಗಿದೆ. ಈ ಜಾಗದಲ್ಲಿ ಕಟ್ಟಡ ನಿರ್ಮಿಸಲು ಸರಕಾರದ ಅನುದಾನವನ್ನು ಎದುರು ನೋಡಲಾಗುತ್ತಿದೆ. ಸದ್ಯ ತಿಂಗಳಿಗೆ 88 ಸಾವಿರ ರೂ. ಬಾಡಿಗೆ ಪಾವತಿಸಲಾಗುತ್ತಿದೆ.

ಬೆಟ್ಟಂಪಾಡಿ
ಇಲ್ಲಿನ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಒಟ್ಟು 100 ವಿದ್ಯಾರ್ಥಿನಿಯರು ಆಶ್ರಯ ಪಡೆದಿದ್ದಾರೆ. ರೆಂಜದಲ್ಲಿ ಬಾಡಿಗೆ ಕಟ್ಟಡವೊಂದರಲ್ಲಿ ಹಾಸ್ಟೆಲ್‌ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕಾಗಿ ಬೆಟ್ಟಂಪಾಡಿ ಕಾಲೇಜು ಬಳಿ 0.35 ಎಕರೆ ಜಾಗ ನಿಗದಿ ಮಾಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಮಾತ್ರ ಇನ್ನೂ ಮುಹೂರ್ತ ಒದಗಿಲ್ಲ. ಪ್ರತಿ ತಿಂಗಳು 49,950 ರೂ. ಬಾಡಿಗೆ ನೀಡಲಾಗುತ್ತಿದೆ.

Advertisement

ಬನ್ನೂರು
ಉರ್ಲಾಂಡಿಯ ಬಾಡಿಗೆ ಕಟ್ಟಡದಲ್ಲಿರುವ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಒಟ್ಟು 100 ವಿದ್ಯಾರ್ಥಿಗಳಿದ್ದಾರೆ. ಈ ಹಾಸ್ಟೆಲ್‌ಗಾಗಿ ಬನ್ನೂರಿನಲ್ಲಿ 0.81 ಎಕರೆ ಜಾಗ ಗೊತ್ತು ಪಡಿಸಲಾಗಿದೆ. ಪುತ್ತೂರು ನಗರದಲ್ಲೇ ಇರುವ ಕಾರಣ ಆದಷ್ಟು ಶೀಘ್ರ ಸ್ವಂತ ಕಟ್ಟಡ ನಿರ್ಮಿಸುವ ಅಗತ್ಯ ಇದೆ. ಪ್ರತಿ ತಿಂಗಳು 70 ಸಾವಿರ ರೂ. ಬಾಡಿಗೆ ನೀಡಲಾಗುತ್ತಿದೆ.

ಜೋಡುಕಟ್ಟೆ
ಇಲ್ಲಿನ ಮೆಟ್ರಿಕ್‌ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಪುತ್ತೂರು ನಗರದಲ್ಲೇ ಇದೆ. 40 ವಿದ್ಯಾರ್ಥಿಗಳಿರುವ ಈ ಹಾಸ್ಟೆಲ್‌ಗಾಗಿ ಸಾಮೆತ್ತಡ್ಕದ ಶಾಲೆಯ ಬಳಿ 0.25 ಎಕರೆ ಜಾಗ ನೀಡಲಾಗಿದೆ. ಕಟ್ಟಡ ನಿರ್ಮಿಸುವ ಬಗ್ಗೆ ಅಧಿಕಾರಿಗಳು ಆಸ್ಥೆ ವಹಿಸಬೇಕಾಗಿದೆ. 41650 ರೂ. ಪ್ರತಿ ತಿಂಗಳು ಬಾಡಿಗೆ ಪಾವತಿಸಲಾಗುತ್ತಿದೆ.

ನಾಲ್ಕು ಹಾಸ್ಟೆಲ್‌ಗ‌ಳ ಒಟ್ಟು ಬಾಡಿಗೆ ವಾರ್ಷಿಕ 29,95,200 ರೂ. ಇಷ್ಟು ದೊಡ್ಡ ಮೊತ್ತದಲ್ಲಿ ಹಾಸ್ಟೆಲ್‌ಗ‌ಳಿಗೆ ಕಟ್ಟಡವನ್ನೇ ನಿರ್ಮಿಸಬಹುದಿತ್ತು. ಆದರೆ ಸೂಕ್ತ ಸೂರು, ಆಹಾರ ನೀಡುವ ಆವಶ್ಯಕತೆ ಇರುವುದರಿಂದ ತಾತ್ಕಾಲಿಕವಾಗಿ ಯಾವುದಾದರೂ ಬಾಡಿಗೆ ಕಟ್ಟಡ ಹುಡುಕುವುದು ಅನಿವಾರ್ಯವಾಗಿತ್ತು. ಅದೂ ಕೂಡ ಸೂಕ್ತ ವ್ಯವಸ್ಥೆಗಳಿಂ ಕೂಡಿದ್ದು, ವಿದ್ಯಾರ್ಥಿಗಳಿಗೆ ಶಾಲಾ -ಕಾಲೇಜುಗಳಿಗೆ ಹೋಗಲು ಸುಲಭವೇ ಆಗಿರಬೇಕಿತ್ತು. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳು ಗಮನ ಹರಿಸುವ ಅಗತ್ಯ ಇದೆ.

ಹುದ್ದೆಯೂ ಖಾಲಿ
ಪುತ್ತೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 9 ಹಾಸ್ಟೆಲ್‌ಗ‌ಳಲ್ಲಿ ಹಲವು ಹುದ್ದೆಗಳು ಖಾಲಿ ಇವೆ. 9 ವಾರ್ಡನ್‌ಗಳು ಇರಬೇಕಿದ್ದಲ್ಲಿ ಕೇವಲ 3 ಖಾಯಂ ನೇಮಕಾತಿ ಇದೆ. 6 ಹುದ್ದೆಗಳು ಖಾಲಿಯಾಗಿಯೇ ಇವೆ. ಅದರಲ್ಲೂ ಬಾಲಕರ ವಿದ್ಯಾರ್ಥಿನಿಲಯಗಳಿಗೆ ವಾರ್ಡನ್‌ ಇದ್ದಾರೆ. ಆದರೆ ತುಂಬಾ ಆವಶ್ಯಕತೆ ಇರುವ ಬಾಲಕಿಯರ ಹಾಸ್ಟೆಲ್‌ಗ‌ಳಿಗೆ ಒಬ್ಬರು ಮಾತ್ರ ವಾರ್ಡನ್‌ ಇದ್ದಾರೆ. ಅವರಿಗೇ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.

ವರ್ಷಕ್ಕೆ 2.30 ಕೋಟಿ ರೂ. ಬಾಡಿಗೆ
ಜಿಲ್ಲೆಯ 30 ಹಾಸ್ಟೆಲ್‌ಗ‌ಳು ಬಾಡಿಗೆ ಕಟ್ಟಡದಲ್ಲಿವೆ. ಇವುಗಳಿಗೆ ನಿವೇಶನ ಲಭ್ಯವಿವೆ. ಆದರೆ ಸ್ವಂತ ಕಟ್ಟಡವಿಲ್ಲ. ವರ್ಷಕ್ಕೆ ಸುಮಾರು 2.30 ಕೋಟಿ ರೂ. ಬಾಡಿಗೆ ಪಾವತಿಸುವ ಅನಿವಾರ್ಯತೆ ಎದುರಾಗಿದೆ. ಈ 30 ಹಾಸ್ಟೆಲ್‌ ಗಳಿಗೆ ಕಟ್ಟಡ ನಿರ್ಮಿಸಿ ಕೊಡುವಂತೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಬಂಟ್ವಾಳ 2, ಮಂಗಳೂರು 8 -ಹೀಗೆ 10 ಹಾಸ್ಟೆಲ್‌ಗ‌ಳ ಕಟ್ಟಡಕ್ಕೆ ಹಣ ಮಂಜೂರಾಗಿದೆ.
– ಮಹಮ್ಮದ್‌ ಸಿ.ಆರ್‌.,
ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 

‡ ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next