Advertisement
ಶಿರಾಡಿ ಘಾಟಿ ಆರಂಭವಾಗುವ ಗುಂಡ್ಯದಲ್ಲಿ ಶೌಚಾಲಯ ಬೇಕು ಎನ್ನುವ ಬೇಡಿಕೆ 10 ವರ್ಷಗಳಿಂದ ಕೇಳಿಬರುತ್ತಲೇ ಇದೆ. ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣಿಕರು, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗುತ್ತಿದೆ. ಇದರಿಂದಾಗಿ ಗುಂಡ್ಯ ಪೇಟೆಯಾಗಿ ಪರಿವರ್ತನೆ ಆಗುತ್ತಿದೆ. ಇದಕ್ಕೆ ಸರಿಯಾಗಿ ಗಲೀಜು ಹೆಚ್ಚಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡಲು ಶೌಚಾಲಯ ಬೇಕೆನ್ನುವ ಬೇಡಿಕೆ ಸಹಜವಾಗಿ ಕೇಳಿಬರತೊಡಗಿದೆ.
ಶೌಚಾಲಯ ನಿರ್ಮಾಣ ಮಾಡುವುದು ಸ್ಥಳೀಯಾಡಳಿತ ಅಥವಾ ಇತರ ಅಧಿಕಾರಿಗಳಿಗೆ ಕಷ್ಟದ ಕೆಲಸವೇನಲ್ಲ. ಆದರೆ ಗುಂಡ್ಯದಲ್ಲಿ ಶೌಚಾಲಯ ನಿರ್ಮಿಸುವುದು ಸವಾಲಿನ ಕೆಲಸ. ಏಕೆಂದರೆ, ಇಲ್ಲಿ ಸರಕಾರಿ ಜಾಗವೇ ಇಲ್ಲ. ಇರುವ ಜಾಗವೆಲ್ಲವೂ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ. ಈಗಿನ ಪ್ರಸ್ತಾವದಂತೆ, ಗುಂಡ್ಯದಲ್ಲಿ ಇ-ಶೌಚಾಲಯ ನಿರ್ಮಾಣ ಮಾಡಬೇಕಾದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆಯ ಅನುಮತಿ ತೆಗೆದುಕೊಳ್ಳಲೇಬೇಕು. ಈ ಹಿನ್ನೆಲೆಯಲ್ಲೂ ಪರಿಶೀಲನೆ ನಡೆಸಲು ಗ್ರಾ.ಪಂ.ಗೆ ಸೂಚನೆ ನೀಡಲಾಗಿದೆ.
Related Articles
ಮೂರು ವರ್ಷಗಳ ಹಿಂದೆ ಗುಂಡ್ಯದಲ್ಲಿ ಶೌಚಾಲಯ ನಿರ್ಮಾಣ ಮಾಡಲು 10 ಲಕ್ಷ ರೂ. ಅನುದಾನ ಮೀಸಲಿಡಲಾಗಿತ್ತು. ಇದಕ್ಕಾಗಿ ಗುಂಡ್ಯದಲ್ಲಿ 5 ಸೆಂಟ್ಸ್ ಸರಕಾರಿ ಜಾಗವನ್ನು ಗೊತ್ತುಪಡಿಸಲಾಗಿತ್ತು. ಅಷ್ಟರಲ್ಲಿ ಶಿರಾಡಿ ಗ್ರಾ.ಪಂ. ಆಡಳಿತ ಬದಲಾಯಿತು. ಹೊಸ ಆಡಳಿತ ಮೊದಲು ಶೌಚಾಲಯಕ್ಕೆ ಗುರುತಿಸಿದ ಜಾಗವನ್ನು ಒಪ್ಪಿಕೊಳ್ಳಲಿಲ್ಲ. ಸದ್ಯ ಜಾಗ ಬೇರಾವುದೋ ವಿಷಯಕ್ಕೆ ವಿನಿಯೋಗವಾಗಿದೆ. ಬದಲಿ ಜಾಗ ಇಲ್ಲ. ಆದ್ದರಿಂದ ಅನಿವಾರ್ಯವಾಗಿ ಇ-ಟಾಯ್ಲೆಟ್ ಒಂದೇ ಪರಿಹಾರವಾಗಿ ಗೋಚರಿಸುತ್ತಿದೆ.
Advertisement
ಜನರ ಸಂಖ್ಯೆ ಹೆಚ್ಚಳನೆಲ್ಯಾಡಿ-ಸಕಲೇಶಪುರ ನಡುವೆ ಸುಮಾರು 59 ಕಿ.ಮೀ. ಅಂತರವಿದೆ. ಇದರ ನಡುವೆ ಶಿರಾಡಿ ಘಾಟಿ 26 ಕಿ.ಮೀ. ದೂರಕ್ಕೆ ಚಾಚಿಕೊಂಡಿದೆ. ಪ್ರಯಾಣಿಕರಿಗೆ ಹಾಗೂ ಯಾತ್ರಾರ್ಥಿಗಳಿಗೆ ಜನವಸತಿ ಪ್ರದೇಶ ಮತ್ತು ಪೇಟೆ ಸಿಗುವುದು ಗುಂಡ್ಯದಲ್ಲಿ ಮಾತ್ರ. ಆದ್ದರಿಂದ ಗುಂಡ್ಯದಲ್ಲಿ ಅಂಗಡಿಗಳ ಸಂಖ್ಯೆ, ಜನರೂ ಜಾಸ್ತಿ. ನೆಲ್ಯಾಡಿ-ಸಕಲೇಶಪುರ ನಡುವೆ ಶೌಚಾಲಯ ನಿರ್ಮಿಸಲು ಗುಂಡ್ಯವೇ ಸೂಕ್ತ ಎಂದು ನಿರ್ಧರಿಸಲಾಗಿದೆ. ಏರ್‌ಪೋರ್ಟ್ ಮಾದರಿ ಶೌಚಾಲಯ!
ಶಿರಾಡಿ ಘಾಟಿ ರಸ್ತೆ ಉದ್ಘಾಟನೆಗೆ ಮೊದಲು ಇಲ್ಲಿಗೆ ಭೇಟಿ ನೀಡಿದ್ದ ಸಂಸದ ನಳಿನ್ ಕುಮಾರ್ ಕಟೀಲು, ಏರ್‌ಪೋರ್ಟ್ ಮಾದರಿಯ ಶೌಚಾಲಯ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸಲು ಎಂಜಿನಿಯರ್‌ಗಳಿಗೆ ಸೂಚಿಸಿದ್ದರು. ಅದರಂತೆ ಪೇಸ್ (ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಎಂಜಿನಿಯರ್) ವತಿಯಿಂದ ಸುಸಜ್ಜಿತ ಶೌಚಾಲಯದ ನೀಲ ನಕಾಶೆ ಸಿದ್ಧಪಡಿಸಿ, ಗ್ರಾ.ಪಂ., ಶಾಸಕ, ಸಂಸದರಿಗೆ ನೀಡಿದ್ದಾರೆ. ಆದರೆ ಇದನ್ನು ಜಾರಿ ಮಾಡಲು ಇದುವರೆಗೆ ಸಾಧ್ಯವಾಗಿಲ್ಲ. ಇದು ಆಡಳಿತದ ವೈಫಲ್ಯ ಎನ್ನುವುದು ಸ್ಥಳೀಯರ ಆಕ್ರೋಶದ ನುಡಿ. ತೀರಾ ಅಗತ್ಯ
ಗುಂಡ್ಯದಲ್ಲಿ ಶೌಚಾಲಯ ಬೇಕೆನ್ನುವುದು ಸ್ಥಳೀಯರ, ಅಂಗಡಿ ಮಾಲಕರ ಮತ್ತು ಗ್ರಾ.ಪಂ.ನ ಒತ್ತಾಯ. ಈ ಭಾಗದಲ್ಲಿ ಗಲೀಜು ಹೆಚ್ಚಾಗುತ್ತಿದ್ದು, ಶೌಚಾಲಯ ತೀರಾ ಅಗತ್ಯ. ಆದರೆ ಸರಕಾರಿ ಜಾಗ ಇಲ್ಲದೇ ಇರುವುದರಿಂದ, ಅರಣ್ಯ ಇಲಾಖೆಯ ಜಾಗವನ್ನು ಕೇಳಬೇಕಾದ ಅನಿವಾರ್ಯತೆ ಎದುರಾಗಿದೆ.
-ದಿನೇಶ್ ಪಿಡಿಒ, ಶಿರಾಡಿ ಗ್ರಾ.ಪಂ. ಗಣೇಶ್ ಎನ್. ಕಲ್ಲರ್ಪೆ