ಪುತ್ತೂರು : ತಿಂಗಳ ಹಿಂದೆ ಹಾಡಹಗಲೇ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಸೆಳೆದೊಯ್ದಿದ್ದ ಸರಗಳ್ಳರನ್ನು ಬೆಟ್ಟಂಪಾಡಿ ಯುವಕರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಜು. 18ರ ಮಧ್ಯಾಹ್ನ ಸಂಭವಿಸಿದೆ.
ಜೂ. 7ರಂದು ಬೆಟ್ಟಂಪಾಡಿ ಕೋನಡ್ಕದ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಬುಲೆಟ್‌ನಲ್ಲಿ ಬಂದಿದ್ದ ಅಪರಿಚಿತರಿಬ್ಬರು ಕರಿಮಣಿ ಸರ ಎಳೆದು ಪರಾರಿಯಾಗಿದ್ದರು. ಆದರೆ ಈ ಆರೋಪಿಗಳು ಯಾರೆನ್ನುವ ಬಗ್ಗೆ ಸ್ಥಳೀಯರಿಗೆ ಅನುಮಾನ ಇತ್ತು. ಪೊಲೀಸರು ಹುಡುಕಾಟ ನಡೆಸುತ್ತಿದ್ದರೂ, ಕಳ್ಳರು ಪತ್ತೆಯಾಗಿರಲಿಲ್ಲ.
ಜು. 18ರಂದು ಈ ಇಬ್ಬರು ಬೈಕ್‌ನಲ್ಲಿ ಪಾಣಾಜೆ ಕಡೆಯಿಂದ ಪುತ್ತೂರು ಕಡೆಗೆ ಸಂಚರಿಸುವುದನ್ನು ಗಮನಿಸಿದ ಆರ್ಲಪದವಿನವರು ರೆಂಜ ಬೆಟ್ಟಂಪಾಡಿ ಪರಿಸರದವರಿಗೆ ಸುಳಿವು ನೀಡಿದ್ದರು. ತತ್‌ಕ್ಷಣ ಕಾರ್ಯಪ್ರವೃತ್ತರಾದ ಬೆಟ್ಟಂಪಾಡಿಯ ಯುವಕರು ಮಿತ್ತಡ್ಕ ಕೇಸರಿನಗರದಲ್ಲಿ ರಿಕ್ಷಾ ಅಡ್ಡ ಹಾಕಿ ಇಬ್ಬರನ್ನು ವಿಚಾರಿಸಲು ಪ್ರಯತ್ನಿಸಿದ್ದರು. ಆದರೆ ಅಲ್ಲಿಂದ ತಪ್ಪಿಸಿಕೊಂಡು ಹೋದ ಕಳ್ಳರಿಬ್ಬರು ಪುತ್ತೂರು ಕಡೆಗೆ ಸಂಚರಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಯುವಕರು ಸಂಟ್ಯಾರ್ ಬಳಿ ಬೈಕ್ ಅನ್ನು ಅಡ್ಡ ಹಾಕಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಕಳ್ಳರಿಬ್ಬರು ಚೆಲ್ಯಡ್ಕದಿಂದ ಗುಮ್ಮಟೆಗದ್ದೆ ದೇವಸ್ಯ ಮಾರ್ಗವಾಗಿ ಪುತ್ತೂರಿಗೆ ಬಂದು ಸಂಟ್ಯಾರ್ ಮೂಲಕ ವಾಪಸಾಗಲು ಪ್ರಯತ್ನಿಸಿದ್ದರು. ಅಷ್ಟರಲ್ಲಾಗಲೇ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು.
ಪೊಲೀಸರಿಂದಲೂ ಕಾರ್ಯಾಚರಣೆ
ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‌ಐ ಉದಯರವಿ ನೇತೃತ್ವದಲ್ಲಿ ಪೊಲೀಸರೂ ಕಳ್ಳರ ಹುಡುಕಾಟದಲ್ಲಿ ನಿರತರಾದರು. ಪುತ್ತೂರಿನಿಂದ ಸಂಟ್ಯಾರ್ ಮಾರ್ಗವಾಗಿ ವಾಪಸಾಗುತ್ತಿದ್ದಂತೆ ರೆಂಜ ಜಂಕ್ಷನ್‌ನಲ್ಲಿ ಯುವಕರು ಪೊಲೀಸ್ ಬ್ಯಾರಿಕೇಡ್ ಎಳೆದು ಅಡ್ಡ ಹಾಕಿದರು. ಬ್ಯಾರಿಕೇಡ್‌ಗೆ ಗುದ್ದಿ ಮಗುಚಿ ಬಿದ್ದ ಬೈಕ್ ಅನ್ನು ಬಿಟ್ಟು ಕಳ್ಳರು ಸ್ಥಳೀಯ ತೋಟದೊಳಗೆ ನುಗ್ಗಿ ಪರಾರಿಯಾಗಲು ಪ್ರಯತ್ನಿಸಿದ್ದರು. ಅಟ್ಟಾಡಿಸಿಕೊಂಡು ಹೋದ ಯುವಕರು ಕಳ್ಳರಿಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.