ಪುತ್ತೂರು: ಕಾಸರಗೋಡು ಜಿಲ್ಲೆಯ ಮಂಜೇಶ್ವರ ಠಾಣಾ ವ್ಯಾಪ್ತಿಯ ಪೈವಳಿಕೆ ಎಂಬಲ್ಲಿ ಅಣ್ಣನನ್ನು ಹತ್ಯೆ ಮಾಡಿ ಪುತ್ತೂರಿನ ಕೊಂಬೆಟ್ಟಿನಲ್ಲಿ ಅಡಗಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿ ಮಂಜೇಶ್ವರ ಪೊಲೀಸರಿಗೆ ಒಪ್ಪಿಸಿದ ಘಟನೆ ಜೂ. 3ರಂದು ನಡೆದಿದೆ.
ಆರೋಪಿಯು ತನ್ನ ಅಣ್ಣ ಪೈವಳಿಕೆ ಕಳಾಯಿ ನಿವಾಸಿ ಪ್ರಭಾಕರ ನೊಂಡಾ (40) ಅವರನ್ನು ಇರಿದು ಹತ್ಯೆ ಮಾಡಿದ್ದ. ಬಳಿಕ ಅಲ್ಲಿಂದ ಪರಾರಿಯಾಗಿದ್ದು, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪುತ್ತೂರು ನಗರ ಠಾಣೆ ಪೊಳೀಸರು ಆರೋಪಿಗಾಗಿ ದೇವಸ್ಥಾನದ ಗದ್ದೆಯಲ್ಲಿ ಶೋಧಿಸಿದ್ದು, ಇದನ್ನು ಗಮನಿಸಿದ ಆರೋಪಿಯು ಓಡಿ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸ್ ಸಿಬಂದಿಗಳಾದ ಸ್ಕರಿಯ, ಉದಯ್, ಸುಬ್ರಹ್ಮಣ್ಯ ಮತ್ತು ಕಿರಣ್ ಅವರು ಆತನನ್ನು ಬೆನ್ನಟ್ಟಿ ಸೆರೆ ಹಿಡಿದಿದ್ದಾರೆ.