ಪುತ್ತೂರು: ಅನೈತಿಕ ಸಂಬಂಧ ಇಟ್ಟುಕೊಳ್ಳುವ ಉದ್ದೇಶದಿಂದ ತನ್ನ ಪತ್ನಿಯನ್ನು ವ್ಯಕ್ತಿಯೋರ್ವ ಕಾರಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ತಡೆಯಲು ಹೋದಾಗ ಕಾರು ಹಾಯಿಸಿ ಕೊಲೆಗೆ ಯತ್ನಿಸಿರುವುದಾಗಿ ಆರೋಪಿಸಿ ವ್ಯಕ್ತಿಯೋರ್ವರು ಪುತ್ತೂರು ಡಿವೈಎಸ್ಪಿಗೆ ದೂರು ನೀಡಿದ್ದಾರೆ.
ಬಂಟ್ವಾಳ ಪೆರುವಾಯಿ ಗ್ರಾಮದ ಕಿಣಿಯಪಾಲು ಸುಧೀರ್ ಕುಮಾರ್ ದೂರು ನೀಡಿದವರು.
ತಾನು ಕಾಸರಗೋಡು ಮೂಲದ ಕಾವ್ಯಶ್ರೀ ಅವರನ್ನು ಮದುವೆಯಾಗಿದ್ದು, ನಮ್ಮ ದಾಂಪತ್ಯ ಜೀವನದಲ್ಲಿ ಒಂದು ಹೆಣ್ಣು ಮಗು ಇದೆ.ಈ ಮಧ್ಯೆ ಪತ್ನಿಯು ವಿಟ್ಲ ಕೇಪು ಮುಳಿಯಾಲದ ಹರಿಪ್ರಸಾದ್ ಯಾದವ್ ಬಿ.ಕೆ. ಎಂಬಾತನೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದು ಅವಳು ಪ್ರತ್ಯೇಕವಾಗಿ ವಾಸಿಸಿಕೊಂಡು ಬರುತ್ತಿದ್ದಾಳೆ. ಆದಾಗಿಯೂ ನಮ್ಮ ಮಧ್ಯೆ ಗಂಡ ಹೆಂಡತಿಯ ಸಂಬಂಧ ಮುಂದುವರಿಸಿಕೊಂಡು ಬಂದಿದ್ದು ನಮ್ಮೊಳಗೆ ಯಾವುದೇ ವಿವಾಹ ವಿಚ್ಚೇದನ ಆಗಿರುವುದಿಲ್ಲ. ಜ.31ರಂದು ಜಾತ್ರೆಗೆಂದು ಬಂದಿದ್ದ ಪತ್ನಿಯನ್ನು ಆರೋಪಿ ಹರಿಪ್ರಸಾದ್ ಯಾದವ್ ಅವರ ಕಾರಲ್ಲಿ ಅನುಮಾನಾಸ್ಪದವಾಗಿ ಕರೆದುಕೊಂಡು ಹೋಗುತ್ತಿರುವ ಮಾಹಿತಿ ತಿಳಿದು ನಾನು ಮೋಟಾರು ಬೈಕಿನಲ್ಲಿ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಸುಳ್ಯ ತಾಲೂಕಿನ ಜಾಲೂÕರು ಎಂಬಲ್ಲಿ ಕಾರನ್ನು ನಿಲ್ಲಿಸಲು ಕೈ ಸನ್ನೆ ಮಾಡಿದಾಗ ನನ್ನ ಮೇಲೆ ಕಾರು ಹಾಯಿಸಿ ಕೊಲ್ಲುವ ಯತ್ನ ಮಾಡಿದ್ದಾನೆ. ಆ ಸಂದರ್ಭದಲ್ಲಿ ಸ್ಥಳೀಯರನ್ನು ಕಂಡ ಆರೋಪಿಯು ಸ್ಥಳದಿಂದ ಓಡಿಹೋಗಿದ್ದಾನೆ. ಕಾರಿನಲ್ಲಿದ್ದ ನನ್ನ ಪತ್ನಿಯನ್ನು ಈ ಕುರಿತು ಪ್ರಶ್ನಿಸಿದಾಗ, ನನ್ನನ್ನು ತಡೆದರೆ ರೌಡಿಗಳ ಮೂಲಕ ಕೊಲ್ಲಿಸದೆ ಬಿಡುವದಿಲ್ಲ ಎಂದು ಜೀವ ಬೆದರಿಕೆಯನ್ನು ಒಡ್ಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.