ಪುತ್ತೂರು: ಮುಂಡೂರು ಗ್ರಾಮದ ಕಂಪ ಬದಿಯಡ್ಕದಲ್ಲಿ ಪ್ರೀತಿಸಲು ನಿರಾಕರಿಸಿದಕ್ಕೆ ಯುವತಿಯನ್ನು ಚೂರಿ ಇರಿದು ಕೊಲೆ ಮಾಡಿದ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಕಾವು ಬಳಿ ಬಂಧಿಸಿದ್ದಾರೆ.
ಕನಕಮಜಲು ಗ್ರಾಮದ ಅಂಗಾರ ಅವರ ಪುತ್ರ ಉಮೇಶ್ (24) ಬಂಧಿತ ಆರೋಪಿ. ಆತನಿಂದ ಕೃತ್ಯಕ್ಕೆ ಬಳಸಿದ ಆಯುಧ ಮತ್ತು ಕೊಲೆ ಮಾಡಿದ ಸ್ಥಳಕ್ಕೆ ಬರಲು ಬಳಸಿದ ಸ್ಕೂಟರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದು ಪೂರ್ವಯೋಜಿತ ಕೃತ್ಯ ಅನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಕೊಲೆಗೆಂದೇ ಸ್ಕೆಚ್ ಹಾಕಿ ಬಂದಿದ್ದ..!
ಮೃತ ಯುವತಿ ಜಯಶ್ರೀ ಅವರ ಸಂಬಂಧಿಕ ರವಿ ಅವರೊಂದಿಗೆ ವಿದ್ಯುತ್ ಕಂಬ ಅಳವಡಿಕೆಯ ಕೆಲಸಕ್ಕೆ ಹೋಗುತ್ತಿದ್ದ ಆರೋಪಿಯು ರವಿ ಅವರ ಬೆಳ್ಳಿಪ್ಪಾಡಿಯ ಮನೆಯಲೇ ವಾಸಿಸುತ್ತಿದ್ದ. ಜ. 17ರಂದು ಕನಕಮಜಲಿನ ಮನೆಗೆ ತೆರಳುವುದಾಗಿ ಹೇಳಿ ಬಂದಿದ್ದ. ಆದರೆ ಈತ ಮನೆಗೆ ಹೋಗದೆ ಅಲ್ಲಿಂದ ನೇರವಾಗಿ ಯುವತಿಯ ಮನೆಗೆ ಬಂದಿದ್ದಾನೆ. ತನ್ನ ಕೊನೆಯ ಪ್ರಯತ್ನಕ್ಕೆ ಯುವತಿ ಒಪ್ಪದಿದ್ದರೆ ಕೊಲೆ ಎಸಗುವ ಉದ್ದೇಶದಿಂದಲೇ ಚೂರಿ ಖರೀದಿಸಿ ತಂದಿದ್ದ. ಯುವತಿ ಜತೆಗೆ ಮಾತಿನ ಚಕಮಕಿಯ ಬಳಿಕ ಆರೋಪಿ ಉಮೇಶ್ ಕೃತ್ಯ ಎಸಗಿದ್ದಾನೆ ಎನ್ನುವ ಅಂಶ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಪರಿಚಯ ಪ್ರೇಮಕ್ಕೆ ತಿರುಗಿತು..!
ರವಿ ಅವರಿಗೆ ಯುವತಿ ಮನೆಯವರು ಹತ್ತಿರದ ಸಂಬಂಧಿಕರಾಗಿದ್ದರು. ಇದೇ ಕಾರಣ ಕಾರ್ಯಕ್ರಮ ಇರುವಾಗ ಆರೋಪಿಯು ರವಿಯೊಂದಿಗೆ ಯುವತಿಯ ಮನೆಗೆ ಬಂದಿದ್ದ. ಅನಂತರ ಜಯಶ್ರೀ ಜತೆಗೆ ಪ್ರೇಮಾಂಕುರವಾಗಿ ಆಗಾಗ್ಗೆ ಮನೆಗೆ ಬರುತ್ತಿದ್ದ. ಆದರೆ ಪದವೀಧರೆಯಾಗಿದ್ದ ಯುವತಿಗೆ ಉಮೇಶ್ ಗುಣ ನಡತೆಯ ಬಗ್ಗೆ ಇಷ್ಟ ಇರಲಿಲ್ಲ. ಇದೇ ಕಾರಣಕ್ಕಾಗಿ ಆತನ ಪ್ರೀತಿ ನಿರಾಕರಿಸಿದ್ದಳು. ಇದೇ ದ್ವೇಷದಿಂದ ಉಮೇಶ್ ಕೊಲೆ ನಡೆಸಿದ್ದಾನೆ.
Related Articles
24 ತಾಸಿನೊಳಗೆ ಸೆರೆ
ಕೊಲೆ ನಡೆದ 24 ತಾಸಿನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎನ್. ಎಂ., ಪುತ್ತೂರು ಪೊಲೀಸ್ ಉಪಾಧೀಕ್ಷಕ ಡಾ| ವೀರಯ್ಯ ಹಿರೇಮಠ್ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್. ಮತ್ತು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕ ಉದಯರವಿ ಎಂ. ವೈ., ಎಎಸ್‌ಐ ಮುರುಗೇಶ್, ಸಿಬಂದಿಗಳಾದ ಪ್ರವೀಣ ರೈ ಪಾಲ್ತಾಡಿ, ಹರೀಶ್ ಜಿ.ಎನ್., ಅದ್ರಾಮ, ಧರ್ಣಪ್ಪ, ಸಲೀಂ, ಶಿವಾನಂದ, ದೇವರಾಜ್, ಸತೀಶ್, ವರ್ಗೀಸ್, ಹರ್ಷಿತ್, ಗಿರೀಶ್ ರೈ, ಸದ್ದಾಂ, ಹರೀಶ್ ನಾಯ್ಕ, ಬಿ., ನಿತಿನ್ ಕುಮಾರ್, ಅಡಿವೆಪ್ಪ ಸಂಗೊಳ್ಳಿ, ಲೋಕೇಶ್, ಗಾಯತ್ರಿ ಇವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಪೊಲೀಸರು ಕ್ಲಪ್ತ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನೂ ಓದಿ:ಮಂಗಳೂರು: ಡಿಜೆ ಆಪರೇಟರ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್