Advertisement

Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!

07:54 PM Nov 29, 2024 | Team Udayavani |

ಪುತ್ತೂರು: ಸರಿ ಸುಮಾರು 150 ವರ್ಷ ದಾಟಿದ ಕಟ್ಟಡದಲ್ಲೇ ದಿನ ದೂಡಬೇಕಾದ ಸ್ಥಿತಿ ಇರುವುದು ಪುತ್ತೂರು ಹೋಬಳಿಯ ಕಂದಾಯ ನಿರೀಕ್ಷಕರ ಕಚೇರಿಗೆ. ಹಳೆ ಕಟ್ಟಡವನ್ನು ಪಾರಂಪರಿಕ ಕಟ್ಟಡವನ್ನಾಗಿ ಉಳಿಸಿಕೊಂಡು ಗ್ರಾಮ ಚಾವಡಿಗೆ ಬೇರೆಡೆ ಹೊಸ ಕಟ್ಟಡ ನಿರ್ಮಿಸುವ ಪ್ರಸ್ತಾವ ಆಗಾಗೆ ಕೇಳಿ ಬಂದರೂ ಕಾರ್ಯರೂಪಕ್ಕೆ ಬರುವ ಲಕ್ಷಣ ಕಾಣಿಸಿಲ್ಲ. ಹೀಗಾಗಿ ಗ್ರಾಮ ಚಾವಡಿ (ನಾಡಕಚೇರಿ) ಕಚೇರಿಗೆ ಓಲ್ಡ್‌ ಈಸ್‌ ಗೋಲ್ಡ್‌ ಎಂದು ಸಮಧಾನಿಸಿಕೊಳ್ಳುತ್ತಾ ಸುಮ್ಮನಿರಬೇಕಾದ ಸ್ಥಿತಿ ಇದೆ..!

Advertisement

ಪುತ್ತೂರು ನಗರದ ಕಂದಾಯ ಇಲಾಖೆ ವ್ಯಾಪ್ತಿಯ ಬಹುತೇಕ ಕಚೇರಿಗಳು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡರೂ ಕೆಲವು ವರ್ಷಗಳೇ ಕಳೆದಿವೆ. ಆದರೆ ಪುತ್ತೂರು ಹೋಬಳಿಯ ನಾಡಕಚೇರಿ ನಗರಸಭೆ ಕಟ್ಟಡಕ್ಕೆ ತಾಗಿಕೊಂಡಿರುವ ಹಳೆ ಕಟ್ಟಡದಲ್ಲೇ ಬಾಕಿಯಾಗಿದೆ. ನಗರದೊಳಗಿನ ಬೇರೆ ಬೇರೆ ಇಲಾಖೆಗಳು ಸುಸಜ್ಜಿತ ಕಟ್ಟಡದಲ್ಲಿ ಇದ್ದರೂ ಗ್ರಾಮ ಚಾವಡಿಗೆ ಮಾತ್ರ ಸುಸಜ್ಜಿತ ಕಟ್ಟಡಕ್ಕೆ ಪ್ರವೇಶ ಪಡೆಯುವ ಭಾಗ್ಯ ಸಿಕ್ಕಿಲ್ಲ.
ಪಾರ್ಕಿಂಗ್‌ ಶೂನ್ಯ!

ಮುಖ್ಯ ರಸ್ತೆಗೆ ತಾಗಿಕೊಂಡಿರುವ ಕಟ್ಟಡ ಇದಾಗಿದ್ದು ಇಲ್ಲಿ ಪಾರ್ಕಿಂಗ್‌ ಎನ್ನುವುದೇ ಶೂನ್ಯವಾಗಿದೆ. ರಸ್ತೆಯಲ್ಲೇ ವಾಹನ ನಿಲ್ಲಿಸಿ ಕಟ್ಟಡದೊಳಗೆ ಬರಬೇಕಾದ ಸ್ಥಿತಿ ಇಲ್ಲಿನದು. ಒಂದೆಡೆ ಮೀನು ಮಾರುಕಟ್ಟೆ, ಕೋರ್ಟ್‌, ಕಿಲ್ಲೆ ಮೈದಾನಕ್ಕೆ ತೆರಳುವ ಜಂಕ್ಷನ್‌ನಲ್ಲೇ ಈ ಕಟ್ಟಡ ಇದ್ದು ನಿತ್ಯವೂ ಟ್ರಾಫಿಕ್‌ನಿಂದ ಕೂಡಿದ್ದು ಇಲ್ಲಿ ವಾಹನ ನಿಲುಗಡೆಗೆ ಪರದಾಟವೇ ನಡೆಯುತ್ತದೆ.

ಶತಮಾನದ ಕಟ್ಟಡದಲ್ಲಿ ಬರೀ ಸಮಸ್ಯೆಗಳು
ನಗರದ ನಗರಸಭೆ ಕಚೇರಿ ಕಟ್ಟಡದ ಕೆಳಭಾಗದಲ್ಲಿ, ಕೋರ್ಟ್‌ ರಸ್ತೆಗೆ ಅಭಿಮುಖವಾಗಿರುವ ಗ್ರಾಮ ಚಾವಡಿ ಕಟ್ಟಡಕ್ಕೆ 150 ವರ್ಷ ಮೀರಿದ ಇತಿಹಾಸ ಇದ್ದು ಸುಣ್ಣ-ಬಣ್ಣ ಕಾಣದೆ ಕೆಲವು ವರ್ಷಗಳೇ ಕಳೆದಿದೆ. ಮಳೆಗಾಲದಲ್ಲಿ ಸೋರುವ ಛಾವಣಿಯನ್ನು ತಾತ್ಕಾಲಿಕ ನೆಲೆಯಲ್ಲಿ ದುರಸ್ತಿಗೊಳಿಸಲಾಗಿದ್ದರೂ ಪೂರ್ಣ ಪ್ರಮಾಣದ ದುರಸ್ತಿ ಇನ್ನೂ ಬಾಕಿ ಇದೆ. ಕಿಟಿಕಿ-ಬಾಗಿಲುಗಳು ಕಳೆಗೆಟ್ಟಿದ್ದು ಹೊಸದಾಗಿ ಅಳವಡಿಸಬೇಕಿದೆ. ಶೌಚಾಲಯವೂ ಸಮರ್ಪಕವಾಗಿಲ್ಲ. ಇರುವ ವ್ಯವಸ್ಥೆಯೊಳಗೆ ಕಂದಾಯ ನಿರೀಕ್ಷಕರ ಕಚೇರಿಯನ್ನು ನಿರ್ವಹಣೆ ಮಾಡಲಾಗುತ್ತಿದ್ದು ಇದರ ಒಳಭಾಗದಲ್ಲಿ ಜಾಗವೂ ಇಕ್ಕಟ್ಟಿನದ್ದೆ. ಕುಳಿತುಕೊಳ್ಳಲು ಕಲ್ಲಿನ ಆಸನ ಇದ್ದು ನವ ನವೀನ ಪರಿಕರಗಳು ಇನ್ನೂ ಇಲ್ಲಿಗೆ ಪ್ರವೇಶ ಪಡೆದಿಲ್ಲ.

ಪುರಾತನ ಕಟ್ಟಡವಾಗಿರುವ ಕಾರಣ ಕಟ್ಟಡದ ಮೂಲ ಸ್ವರೂಪ ಬದಲಾವಣೆಯ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳು ಇವೆ. ಹೀಗಾಗಿ ಗ್ರಾಮ ಚಾವಡಿಗೆ ಹೊಸ ಕಟ್ಟಡ ನಿರ್ಮಾಣ ಅಥವಾ ಈಗಿರುವ ಕಟ್ಟಡವನ್ನು ಮೂಲ ಸ್ವರೂಪಕ್ಕೆ ಧಕ್ಕೆ ಆಗದ ರೀತಿಯಲ್ಲಿ ನವೀಕರಣ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು.
-ಜುಬಿನ್‌ ಮೊಹಾಪಾತ್ರ, ಸಹಾಯಕ ಆಯುಕ್ತ, ಪುತ್ತೂರು

Advertisement

ಏನಿದು ಕಚೇರಿ?
ಗ್ರಾಮಕರಣಿಕರ ಕಚೇರಿಯಿಂದ ಭೂ ದಾಖಲೆಗೆ ಸಂಬಂಧಿಸಿ ಬರುವ ಎಲ್ಲ ಕಡತಗಳು ಕಂದಾಯ ನಿರೀಕ್ಷಕರ ಕಚೇರಿಗೆ ಬರುತ್ತವೆ. ಅಲ್ಲಿಂದ ಟಪಾಲು ಮೂಲಕ ತಹಶೀಲ್ದಾರ್‌ಗೆ ಸಲ್ಲಿಕೆ ಆಗುತ್ತದೆ. ಗ್ರಾಮ ಚಾವಡಿಯಲ್ಲಿ ಕಂದಾಯ ನಿರೀಕ್ಷರು ಇರುತ್ತಾರೆ. ಪುತ್ತೂರು ಗ್ರಾಮ ಚಾವಡಿಯಲ್ಲಿ ಕಂದಾಯ ನಿರೀಕ್ಷರ ಕಚೇರಿಯ ಜತೆಗೆ ಕಸಬಾ ಗ್ರಾಮಕರಣಿಕರ ಕಚೇರಿಯು ಇದೆ. ವಿವಿಧ ಕೆಲಸದ ನಿಮಿತ್ತ ತಾಲೂಕಿನ ಎಲ್ಲ ಗ್ರಾಮ ಲೆಕ್ಕಿಗರು ಇಲ್ಲಿಗೆ ಬರುತ್ತಾರೆ. ಕಸಬಾದ ಜನರು ಬರುತ್ತಾರೆ. ಪುತ್ತೂರು ಹೋಬಳಿಯ ಎಲ್ಲ ಕಂದಾಯ ಲೆಕ್ಕಾಚಾರ ಇಲ್ಲೇ ನಡೆಯುತ್ತದೆ. ಇದು ದಿನಂಪ್ರತಿ ಜನರ ಓಡಾಟ ಇರುವ ಕಚೇರಿಯು ಆಗಿದೆ.

ಈ ಹಳೆ ಕಟ್ಟಡದಲ್ಲಿ ಸ್ವಾತಂತ್ರ್ಯ  ಪೂರ್ವದ ಪಟೇಲರ ಅಸ್ತಿತ್ವವನ್ನು ಗುರುತಿಸುವ ಸಾಕ್ಷಿಗಳಿವೆ. ಒಳಭಾಗದ ವಿನ್ಯಾಸ ಹಳೆ ಕಟ್ಟಡಗಳ ಶೈಲಿಯಲ್ಲಿದೆ. ಪಟೇಲರ ಗೌರವಾರ್ಥ ಸಹಾಯಕ ಹಿಡಿದುಕೊಳ್ಳುವ ದಂಡ ಜೋಪಾನವಾಗಿರುವುದು ವಿಶೇಷ. ನ್ಯಾಯ ತೀರ್ಮಾನದ ಸ್ಥಳದಲ್ಲಿ ಇದನ್ನು ಹಿಡಿದುಕೊಳ್ಳಲಾಗುತ್ತದೆ. ನ್ಯಾಯಾಲ ಯದಲ್ಲಿ ಈಗಲೂ ದಂಡ ಹಿಡಿದುಕೊಳ್ಳುವ ಸಂಪ್ರದಾಯ ಮುಂದುವರಿದಿದೆ. ಗ್ರಾಮ ಚಾವಡಿಯ ಹಂಚಿನ ಮೇಲೆ ಮೂರು ಕಲಶಗಳು ಶೋಭಿಸುತ್ತಿವೆ. ದೇವಸ್ಥಾನದ ಮುಗುಳಿ (ಕಲಶ)ಯನ್ನು ಹೋಲುತ್ತಿದ್ದು, ಇದು ಮಣ್ಣಿನ ರಚನೆಯದ್ದಾಗಿದೆ. ಹೀಗಾಗಿ ಈ ಕಟ್ಟಡವನ್ನು ಪಾರಂಪರಿಕ ಕಟ್ಟಡವಾಗಿ ಉಳಿಸಿಕೊಂಡು, ಕಂದಾಯ ನಿರೀಕ್ಷಕ ಕಚೇರಿಗೆ ಬೇರೆ ಕಡೆ ಹೊಸ ಕಟ್ಟಡ ನಿರ್ಮಿಸುವುದು ಸೂಕ್ತ.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next