ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮತಿ ಪ್ರತಿಭಾ, ಗೀತಾ ತ್ರಯೋದಶಾವಧಾನ’ ಸಂಪನ್ನ
Team Udayavani, Dec 16, 2024, 10:59 AM IST
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ “ಸ್ಮತಿ ಪ್ರತಿಭಾ ಪ್ರದರ್ಶನ ಮತ್ತು ಗೀತಾ ತ್ರಯೋದಶಾವಧಾನ’ ಕಾರ್ಯಕ್ರಮ ಶನಿವಾರ ಜರಗಿತು.
ಗೀತೋತ್ಸವದಲ್ಲಿ ಸ್ಮತಿ ಪ್ರತಿಭಾ ಪ್ರದರ್ಶನ ನೀಡಿದ 8 ಮಕ್ಕಳನ್ನು ಹರಸಿದ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಸ್ವರೂಪ ಅಧ್ಯಯನ ಕೇಂದ್ರದ ಸ್ಥಾಪಕರು ಮತ್ತು ಶೈಕ್ಷಣಿಕ ಸಂಶೋಧಕ ಗೋಪಾಡ್ಕರ್ ಅವರು ಆಧುನಿಕ ಪುಸ್ತಕ ಹೊರೆಯ ಶಿಕ್ಷಣಕ್ಕೆ ವಿದಾಯ ಹೇಳಿ ಮಕ್ಕಳನ್ನು ಮೇಧಾವಿಗಳನ್ನಾಗಿ ರೂಪಿಸಲು ಪಣತೊಟ್ಟು ಯಶಸ್ವಿಯಾಗಿದ್ದಾರೆ. ಮಾತ್ರವಲ್ಲ ಈ ವಿನೂತನ ಶಿಕ್ಷಣವನ್ನು ಸ್ವರೂಪ ಅಧ್ಯಯನ ಕೇಂದ್ರದ ಮೂಲಕ ಎಲ್ಲೆಡೆ ಪರಿಚಯಿಸಲು ಸನ್ನದ್ಧರಾಗಿದ್ದಾರೆ ಎಂದರು.
84,426 ಚಿತ್ರಗಳ ಮೂಲಕ ಭಗವದ್ಗೀತೆಯ ಶ್ಲೋಕಗಳನ್ನು ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ವಿಶ್ವದಾಖಲೆ ಮಾಡಿದ ಕೇಂದ್ರದ ವಿದ್ಯಾರ್ಥಿ ಪ್ರಸನ್ನ ಕುಮಾರ್ ಡಿ.ಪಿ. ಶಿವಮೊಗ್ಗ ಮತ್ತು 84,426 ಸಂಖ್ಯೆಗಳನ್ನು ಬರೆದು ಭಗವದ್ಗೀತೆಯನ್ನು ಪೂರ್ಣ ಮಾಡಿದ ಜನನ್ ಮಿತಡ್ಕ ಸುಳ್ಯ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಪಡೆದುಕೊಂಡಿರುವುದು ಸಂಸ್ಥೆಯ ಸಾಧನೆಗೆ ಸಾಕ್ಷಿ ಎಂದರು.
ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಗೋಪಾ ಡ್ಕರ್ ದಂಪತಿ ಮಕ್ಕಳಲ್ಲಿರುವ ಅನೇಕ ಪ್ರತಿಭೆಗಳನ್ನು ಪ್ರೋತ್ಸಾಹಿಸಿದ ರೀತಿಗೆ ಸಭಿಕರಿಂದ ಪ್ರಶಂಸೆಗೆ ಪಾತ್ರರಾದರು.
ಇಂದು ಉಪನ್ಯಾಸ, ಭಕ್ತಿ ಸಂಗೀತ
ಡಿ.16ರ ಸಂಜೆ 5ರಿಂದ ರಾಜಾಂಗಣದಲ್ಲಿ ಡಾ| ಎಂ. ಪ್ರಭಾಕರ ಜೋಷಿ ಅವರಿಂದ “ಯಕ್ಷಗಾನ ಮತ್ತು ಭಗವದ್ಗೀತೆ’ ಕುರಿತು ಉಪನ್ಯಾಸ ಹಾಗೂ ನಾದಂ ಮೆಲೋಡೀಸ್ ಬ್ರಹ್ಮಾವರ ಅವರಿಂದ ಭಕ್ತಿ ಸಂಗೀತ ನಡೆಯಲಿದೆ ಎಂದು ಶ್ರೀ ಮಠದ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.
ಇದನ್ನೂ ಓದಿ: Raj Kapoor: ಪಾಕಿಸ್ತಾನದಲ್ಲಿ ಬಾಲಿವುಡ್ ನಟ ದಿ. ರಾಜ್ ಕಪೂರ್100ನೇ ಜನ್ಮದಿನ ಆಚರಣೆ