Advertisement

ಪುತೂರು ಜಾತ್ರೆ: ಸಚ್ಛತೆಗೆ ಮೊದಲ ಆದ್ಯತೆ

11:42 AM Apr 07, 2018 | Team Udayavani |

ನಗರ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಸಂದರ್ಭ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ರಾತ್ರಿ- ಹಗಲು ದುಡಿಯಲು ತಂಡ ಸಿದ್ಧವಾಗಿ ನಿಂತಿದೆ. 

Advertisement

ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಎಂದರೆ ಪುತ್ತೂರಿಗೇ ದೊಡ್ಡ ಹಬ್ಬ. ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಭಕ್ತರು ಸೇರುವುದರಿಂದ ಸಿದ್ಧತೆಗಳು ಅಷ್ಟೇ ದೊಡ್ಡ ಮಟ್ಟಿನಲ್ಲಿ ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪುತ್ತೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯಿಂದ 15 ಜನರ ಒಂದು ತಂಡವನ್ನು ನೇಮಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಇವರು ಶುಚಿತ್ವದ ಕೆಲಸ ನಡೆಸುತ್ತಿದ್ದರೆ, ನಗರಸಭೆಯಿಂದ ಪುತ್ತೂರು ನಗರದ ಸ್ವಚ್ಛತೆಗಳು ನಡೆಯುತ್ತಿವೆ.

ವ್ಯವಸ್ಥಾಪನ ಸಮಿತಿ ಗೊತ್ತುಪಡಿಸಿದ 15 ಜನರ ತಂಡ ಈಗಾಗಲೇ ಕೆಲಸ ಆರಂಭಿಸಿವೆ. ಜಾತ್ರೆಯ ಸಂದರ್ಭ 10 ದಿನಗಳ ಕಾಲ 24 ಗಂಟೆಯೂ ಇವರು ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಅಂದರೆ ಇವರಿಗೆ ಪಾಳಿಯಲ್ಲಿ ಕೆಲಸ ಹಂಚಲಾಗಿದೆ. ಸ್ವಚ್ಛತೆ ವಿಷಯದಲ್ಲಿ ಲೋಪ ಆಗಬಾರದು ಎಂಬ ನಿಟ್ಟಿನಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ.

ಜಾತ್ರೆಗೆ ಮೊದಲು ಸ್ವಚ್ಛತೆ ನಡೆಸಿದರೆ ಸಾಲದು. ಜನಜಂಗುಳಿ ಸೇರುವಾಗ ಸಹಜವಾಗಿ ಇನ್ನೊಂದಷ್ಟು ತ್ಯಾಜ್ಯ ರಾಶಿ ಬೀಳುತ್ತಿದೆ. ತ್ಯಾಜ್ಯ ತೆಗೆಯುವ ಬದಲು, ತ್ಯಾಜ್ಯ ಆಗದಂತೆ ಎಚ್ಚರ ವಹಿಸುವ ಅಗತ್ಯ ತುಂಬಾ ಇದೆ.

ಎ. 16, 17, 18ರಂದು ದೊಡ್ಡ ಪ್ರಮಾಣದಲ್ಲಿ ಜನರು ಸೇರುತ್ತಾರೆ. ಈ ಸಂದರ್ಭ ದೇವಸ್ಥಾನದ ಗದ್ದೆಯ ವಿವಿಧ ಭಾಗಗಳಲ್ಲಿ ತ್ಯಾಜ್ಯ ಡಬ್ಬಿಗಳನ್ನು ಇಡುವ ಬಗ್ಗೆ ಚಿಂತಿಸಲಾಗಿದೆ. ಹೀಗೆ ಸಂಗ್ರಹವಾದ ತ್ಯಾಜ್ಯವನ್ನು ನಗರಸಭೆಯ ಬನ್ನೂರು ಡಂಪಿಂಗ್‌ ಯಾರ್ಡ್‌ನಲ್ಲಿ ಸುರಿಯಲಾಗುವುದು.

Advertisement

ನಗರಸಭೆ ಮುತುವರ್ಜಿ
ಪುತ್ತೂರು ಜಾತ್ರೆಗೆ ದೇವಸ್ಥಾನವಷ್ಟೇ ಸಿಂಗಾರಗೊಂಡರೆ ಸಾಲದು. ಪುತ್ತೂರು ಪೇಟೆಯೂ ಶೃಂಗಾರಗೊಳ್ಳಬೇಕು. ಈ ನಿಟ್ಟಿನಲ್ಲಿ ರಸ್ತೆ ಬದಿಯ ಮಣ್ಣನ್ನು ತೆರವು ಮಾಡುವ ಕೆಲಸವನ್ನು ನಗರಸಭೆ ನಡೆಸುತ್ತಿದೆ.

ಬಪ್ಪಳಿಗೆ ರೋಡ್‌ನ‌ ಉಬ್ಬು- ತಗ್ಗುಗಳನ್ನು ತೆಗೆಯಲಾಗಿದೆ. ಏಳ್ಮುಡಿಯ ಮಣ್ಣು ರಾಶಿಗಳನ್ನು ತೆರವು ಮಾಡಲಾಗಿದೆ. ಮಂಜಲ್ಪಡ್ಪು  ಬಳಿ ಶುಚಿತ್ವದ ಕೆಲಸ ನಡೆಯುತ್ತಿದೆ. ನಗರ ವ್ಯಾಪ್ತಿಯ ರಸ್ತೆಯ ಬದಿಯ ಗಿಡ ಗಂಟಿಗಳನ್ನು ತೆಗೆಯಲಾಗುತ್ತಿದೆ.

ದೇವರ ಸವಾರಿ ಹೋಗುವ ಎಲ್ಲ ರಸ್ತೆಗಳನ್ನು ಶುಚಿ ಮಾಡಲಾಗುವುದು. ಆಯಾ ದಿನ ರಸ್ತೆಗೆ ನೀರು ಹಾಕಲಾಗುವುದು. ಹೆಚ್ಚಿನ ಕಡೆಗಳಲ್ಲಿ ಎಲ್‌ಇಡಿ ಬಲ್ಬ್ ಹಾಕಲಾಗಿದೆ. ದೇವಸ್ಥಾನದ ರಥಬೀದಿಯ ಇಕ್ಕೆಲಗಳಲ್ಲಿ ಬೀದಿದೀಪ ಹಾಕುವ ಕೆಲಸ ನಡೆಯುತ್ತಿದೆ. ಇದಲ್ಲದೇ ರಸ್ತೆ ಬದಿಯ ಇಂಟರ್‌ಲಾಕ್‌ ಹಾಳಾಗಿದ್ದು, ಇದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದು ನಗರಸಭೆ ತಿಳಿಸಿದೆ.

ಕರಸೇವೆ 
ಜಾತ್ರೆಯ ಸಂದರ್ಭ ಶುಚಿತ್ವ ಕಾರ್ಯದಲ್ಲಿ ಹಲವು ಸಂಘ- ಸಂಸ್ಥೆಗಳು ಕೈಜೋಡಿಸಲಿವೆ. ಎ. 8ರಂದು ಮೆಸ್ಕಾಂ, ವಿದ್ಯುತ್‌ ಗುತ್ತಿಗೆದಾರರ ಸಂಘದಿಂದ ರಥಬೀದಿ ಸ್ವಚ್ಛತೆಯ ಕೆಲಸ ನಡೆಯಲಿದೆ. ಉಳಿದಂತೆ ವಕೀಲರ ಸಂಘದಿಂದ ಕುಡಿಯುವ ನೀರಿನ ವಿತರಣೆ, ಶ್ರೀ ಸತ್ಯಸಾಯಿ ಸಮಿತಿಯಿಂದ ಮಜ್ಜಿಗೆ ವಿತರಣೆ ಮೊದಲಾದ ಚಟುವಟಿಕೆ ನಡೆಸಲು ಮುಂದೆ ಬಂದಿವೆ.

ದೇವಸ್ಥಾನದ ಪಕ್ಕದಲ್ಲೇ ಹರಿಯುವ ತೋಡನ್ನು ಹಿಂದಿನ ವರ್ಷ ಶುಚಿಗೊಳಿಸಲಾಗಿದೆ. ಇದರಲ್ಲಿ ಊರಿನ ಎಲ್ಲ ಮನೆಗಳ, ಅಂಗಡಿಗಳ ಕೊಳಚೆ ನೀರು ಹರಿಯುತ್ತಿದೆ. ಆದರೂ ಜಾತ್ರೆಯ ಹಿನ್ನೆಲೆಯಲ್ಲಿ ದೇವಸ್ಥಾನದ ವತಿಯಿಂದ ಶುಚಿ ಮಾಡಲಾಗುವುದು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಕೆಲಸ ಯಶಸ್ವಿ
ಪುತ್ತೂರು ಜಾತ್ರೆಯ ಹಿನ್ನೆಲೆಯಲ್ಲಿ ನಡೆಯುವ ಪ್ರತಿ ಕೆಲಸವನ್ನೂ ಉತ್ಸಾಹದಿಂದ ಮಾಡಲಾಗುತ್ತಿದೆ. ಹಿಂದಿನ ವರ್ಷ ಎಲ್ಲ ಕೆಲಸಗಳು ಯಶಸ್ವಿಯಾಗಿ ನಡೆದಿವೆ. ಇದರಿಂದ ನಾವು ಉತ್ತೇಜನ ಪಡೆದುಕೊಂಡಿದ್ದೇವೆ. ಈ ಬಾರಿ ರಾಜಗೋಪುರವೂ ಸಮರ್ಪಣೆಯಾಗಿದ್ದು, ಭಕ್ತರೆಲ್ಲರೂ ಹರ್ಷದಿಂದಿದ್ದಾರೆ.
– ಸುಧಾಕರ ಶೆಟ್ಟಿ,
ಅಧ್ಯಕ್ಷ, ವ್ಯವಸ್ಥಾಪನಾ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next