Advertisement

ಪತ್ರಿಕೆ ಹಾಕಿ, ಕ್ಯಾಟರಿಂಗ್‌ ಕೆಲಸ ಮಾಡಿ ಪಿಯುಸಿಯಲ್ಲಿ ಡಿಸ್ಟಿಂಕ್ಷನ್‌

01:45 AM Apr 28, 2019 | Sriram |

ಕುಂದಾಪುರ: ಕಲಿಯಬೇಕೆಂಬ ಒಂದೇ ಉತ್ಸಾಹ ಈ ಹುಡುಗನಲ್ಲಿ ಇದ್ದದ್ದು. ಅದಕ್ಕಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಮುಂಜಾನೆ 5 ಗಂಟೆಗೆ ಎದ್ದು ಮನೆ ಮನೆಗೆ ಪತ್ರಿಕೆ ಹಾಕುವುದು, ವಾರದಲ್ಲಿ ಇದ್ದ ಒಂದು ರಜೆಯಲ್ಲಿ, ಬೇಸಗೆ-ಮಧ್ಯಾವಧಿ ರಜೆಯಲ್ಲೂ ಕ್ಯಾಟರಿಂಗ್‌ ಕೆಲಸಕ್ಕೆ ಹೋಗುವ ಮೂಲಕ ದುಡಿದು ಸಂಪಾದಿಸಿ ಸಿಕ್ಕ ಒಂದಷ್ಟು ಸಮಯದಲ್ಲೇ ಓದಿ ವಿಶಿಷ್ಟ ಶ್ರೇಣಿಯಲ್ಲಿ ಅಂಕ ಗಳಿಸಿದ ವಿದ್ಯಾರ್ಥಿಯ ಯಶೋಗಾಥೆ ಇದು.

Advertisement

ಗಾರೆ ಕೆಲಸ
ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ 537 ಅಂಕ ಗಳಿಸಿದ ಕಿರಣ್‌ ಉಪ್ಪಿನಕುದ್ರು ನಿವಾಸಿ. ತಂದೆ ಬಾಬು ಗಾರೆ ಕೆಲಸಕ್ಕೆ ಹೋಗುವುದು, ತಾಯಿ ಗಿರಿಜಾ ಕೂಡ ಕೂಲಿ ಕೆಲಸ. ತಂಗಿ ಪವಿತ್ರಾ ಇನ್ನು ದ್ವಿತೀಯ ಪಿಯುಸಿ. ಆಕೆಯೂ ರಜಾ ದಿನಗಳಲ್ಲಿ ಬಟ್ಟೆ ಅಂಗಡಿಯಲ್ಲಿ ಉದ್ಯೋಗ ಮಾಡುವ ಮೂಲಕ ಕುಟುಂಬ ಪೋಷಣೆ ಮಾಡುವುದರ ಜತೆಗೆ ವಿದ್ಯಾಭ್ಯಾಸದಲ್ಲಿ ಮನೆಯವರಿಗೆ ಹೊರೆಯಾಗಲು ಬಯಸದ ಸ್ವಾಭಿಮಾನಿ. ಒಕ್ಕಲುತನದ ಸಂದರ್ಭ ಭೂಮಾಲಕರು ಇವರ ಅಜ್ಜಿಗೆ ನೀಡಿದ ಜಾಗದಲ್ಲಿ ಪುಟ್ಟ ಹಂಚಿನ ಮನೆ ನಿರ್ಮಿಸಿ ಈ ಕುಟುಂಬ ವಾಸವಾಗಿದೆ.

ಉಪ್ಪಿನಕುದ್ರು ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಯಲ್ಲಿ 530 ಅಂಕ ಗಳಿಸಿದ್ದ ಕಿರಣ್‌ ಆಗ ಮುಂಜಾನೆ ಎದ್ದು ಚಳಿ-ಮಳೆ ಎನ್ನದೇ ಸೈಕಲ್‌ ತುಳಿದು ಮನೆ ಮನೆಗೆ ಪತ್ರಿಕೆ ಹಾಕುತ್ತಿದ್ದರು. ಈಗಲೂ ಮಾವ ರಕ್ಷಿತ್‌ ಜತೆಗೆ ಆಗಾಗ ಪತ್ರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ರಜೆ ಬಂದಾಗಲೆಲ್ಲ ರಕ್ಷಿತ್‌ ಜತೆಗೇ ಕ್ಯಾಟರಿಂಗ್‌ ಸೇವೆಗೆ ಹೋಗುತ್ತಾರೆ. ಪಂಚಾಯತ್‌ನಿಂದ ಇವರ ಓದಿಗಾಗಿ ಪರಿಶಿಷ್ಟ ಪಂಗಡ ಪರಿಶಿಷ್ಟ ವರ್ಗದ ಅನುದಾನದಲ್ಲಿ ಸೋಲಾರ್‌ ಬೆಳಕು ದೊರೆತಿದೆ. ಸಹಾಯಕ್ಕಾಗಿ ಎಲ್ಲೂ ಅರ್ಜಿ ಹಾಕದೇ ಸ್ವಂತ ದುಡಿಮೆ ಮೂಲಕ ಹಣ ಸಂಪಾದಿಸಿ ವಿದ್ಯೆಯನ್ನು ಆರ್ಜಿಸಿಕೊಂಡವರು ಅವರು.

ಕೆಎಎಸ್‌ ಕನಸು
ಮುಂದೆ ಕಲಾ ವಿಭಾಗದಲ್ಲಿ ಪದವಿ ವ್ಯಾಸಂಗ ಮಾಡುವ ಅಪೇಕ್ಷೆ ಹೊಂದಿದ್ದು ಕೆಎಎಸ್‌ ಪರೀಕ್ಷೆ ಬರೆಯುವ ಹಂಬಲ ಹೊಂದಿದ್ದಾರೆ. ಪಿಎಸ್‌ಐ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಸ್ಪರ್ಧಾತ್ಮಕ ಪರೀಕ್ಷೆ ಮೇಲೂ ಕಣ್ಣಿಟ್ಟಿದ್ದಾರೆ. ಇದರ ಮಧ್ಯೆಯೇ ಕಲಾಪದವಿ ಮುಗಿಸಿ ಸಮಾಜಸೇವಾ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಇಚ್ಛೆಯನ್ನೂ ಹೊಂದಿದ್ದಾರೆ.

ಸೂಕ್ತ ಪ್ರೋತ್ಸಾಹ
ಸತತ ಪರಿಶ್ರಮ, ಕಲಿಯಬೇಕೆಂಬ ಛಲ ಇದ್ದರೆ ಬೇರೆ ಯಾವುದೂ ನ್ಯೂನತೆ ಎಂದೆನಿಸಿಕೊಳ್ಳುವುದಿಲ್ಲ. ಮನೆಯಲ್ಲಿ ಹಾಗೂ ಕಾಲೇಜಿನಲ್ಲಿ ಸೂಕ್ತ ಪ್ರೋತ್ಸಾಹ ದೊರೆತರೆ ಫ‌ಲಿತಾಂಶ ಪೂರಕವಾಗಿಯೇ ಇರುತ್ತದೆ.
-ಕಿರಣ್‌ ಉಪ್ಪಿನಕುದ್ರು

Advertisement

ಮಾಹಿತಿ ಕೊಡಿ
ನಿಮ್ಮ ಪರಿಸರದಲ್ಲೂ ಇಂತಹ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿದ್ದಲ್ಲಿ 8095192817 ನಂಬರ್‌ಗೆ ವಾಟ್ಸಪ್‌ ಮಾಡಿ. ನಾವು ಅವರನ್ನು ಮಾತನಾಡಿಸಿ ಸಾಧನೆಯ ಕುರಿತು ಈ ಅಂಕಣದಲ್ಲಿ ಪ್ರಕಟಿಸುತ್ತೇವೆ.
– ಸಂಪಾದಕ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next