Advertisement

ಕಾಂಗ್ರೆಸ್‌ನ್ನು ಸಮುದ್ರಕ್ಕೆ ಎತ್ತಿಹಾಕಿ

11:07 AM Mar 30, 2018 | Team Udayavani |

ಚಿಕ್ಕಮಗಳೂರು: ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅರಬ್ಬೀ ಸಮುದ್ರಕ್ಕೆ ಎತ್ತಿ ಹಾಕುವ ಸಂಕಲ್ಪ ಮಾಡುವಂತೆ ಶಾಸಕ ಸಿ.ಟಿ.ರವಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

Advertisement

ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಗತಿಪಥ ವಿಶ್ವಾಸ ನಡಿಗೆ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಬಿಡಿಗಾಸು ನೀಡದ ಕಾಂಗ್ರೆಸ್‌ ಸರ್ಕಾರ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತದೆ. ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮವನ್ನು ಮುಖಂಡರು ಹಮ್ಮಿಕೊಂಡಿದ್ದು, ಕಾಂಗ್ರೆಸ್‌ ಪಕ್ಷವನ್ನು ಮನೆಗೆ ಕಳುಹಿಸಬೇಕೆಂದು ಕೋರಿದರು.

ಬದ್ಧತೆಯಿಲ್ಲದ ಮುಖ್ಯಮಂತ್ರಿ ಹೇಳಿಕೆಗೆ ಈ ಚುನಾವಣೆಯಲ್ಲಿ ಓಟಿನ ಮೂಲಕ ಸೇಡು ತೀರಿಸಿಕೊಳ್ಳಬೇಕು. ತಾವು ರಾಜ್ಯ ಬೊಕ್ಕಸಕ್ಕೆ ಕನ್ನಾ ಹಾಕಿ ಖಾಲಿ ಮಾಡಿದ್ದರೆ ಜೈಲಿಗೆ ಕಳುಹಿಸಲಿ. ಕ್ಷೇತ್ರದ ಜನತೆಗೆ ಮೋಸ ಮಾಡಿಲ್ಲ. ಮುಖ್ಯಮಂತ್ರಿಗಳ ಸೊಕ್ಕಿನ ಮಾತಿಗೆ ಓಟಿನ ಮೂಲಕ ಉತ್ತರ ನೀಡಬೇಕು ಎಂದರು.

ನಗರಕ್ಕೆ ಬಂದಿದ್ದ ಮುಖ್ಯಮಂತ್ರಿಗಳು ಸಣ್ಣತನದ ಮಾತನಾಡಿದ್ದು, “ಸಿದ್ಧರಾಮಯ್ಯ ಮುಂದೆ ತಾವು ಬಚ್ಚ ಇರಬಹುದು, ಆದರೆ ಲುಚ್ಚಾ ಅಲ್ಲ’ ನೀತಿಯ ನೆಲೆಯಲ್ಲಿ ತಾವು ಬಸವಣ್ಣ ಮತ್ತು ಕನಕದಾಸರ ವಾರಸುದಾರರೆಂದು ಮುಖ್ಯಮಂತ್ರಿಗಳು ಬಣ್ಣಿಸಿಕೊಂಡಿದದಾರೆ. ಕನಕದಾಸರು ಜನರನ್ನು ಒಟ್ಟುಗೂಡಿಸುವ ಹೇಳಿಕೆ ನೀಡಿದ್ದರೆ ಮುಖ್ಯಮಂತ್ರಿಗಳು ಸಮುದಾಯದ ಕೈಗಳಿಗೆ ಬಡಿಗೆ ಕೊಟ್ಟು ಹೊಡೆದಾಡಲು ಬಿಟ್ಟಿರುವ ಅವರಿಗೆ ಕನಕ ದಾಸರ ವಾರಸುದಾರಿಕೆಯನ್ನು ಪ್ರತಿಪಾದಿಸುವ ಹಕ್ಕು ಇಲ್ಲ ಎಂದು ತಿರುಗೇಟು ನೀಡಿದರು.

ಪಕ್ಷದ ಕಾರ್ಯಕರ್ತರು ಶಾಶ್ವತ ಕಾರ್ಯಕರ್ತರೇ ಹೊರತು, ಪೇಮೆಂಟ್‌ ಕಾರ್ಯಕರ್ತರಲ್ಲ. ಹಾಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್‌ ಪಕ್ಷ ಸವಾಲು ಸ್ವೀಕರಿಸಿ ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳನ್ನು ಕಣಕ್ಕಿಳಿಸಿದರೆ ಠೇವಣಿ ಕಳೆಯಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

Advertisement

ಯಾರನ್ನೋ ಈ ಕ್ಷೇತ್ರದಲ್ಲಿ ನಿಲ್ಲಿಸಿ ಹರಕೆ ಕುರಿಯನ್ನಾಗಿಸುವ ಬದಲು ಮುಖ್ಯಮಂತ್ರಿಗಳೇ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾದರೆ ಆ ಸವಾಲನ್ನು ಸ್ವೀಕರಿಸಲು ಸಿದ್ಧನಿರುವೆ. ಈ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ವರದಿ ಕಾರ್ಡ್‌ನ್ನು ಪ್ರತಿ ಮನೆಗೆ ತಲುಪಿಸಲಾಗುವುದು ಎಂದರು. ಬಿಜೆಪಿ ತಾಕತ್ತು ನಿಂತಿರುವುದು ಬೂತ್‌ಮಟ್ಟದ ಕಾರ್ಯಕರ್ತರ ಮೇಲೆ. ಈ ಚುನಾವಣೆಯಲ್ಲಿ 75 ಸಾವಿರ ಮತ ದಾಟುವುದು ನಮ್ಮ ಗುರಿಯಾಗಬೇಕು. ಸಿ.ಟಿ.ರವಿಯನ್ನು ಹೊಡೆದರೆ ಬಿಜೆಪಿ ಮುಗಿಯುತ್ತದೆ ಎಂದು ತಿಳಿಯುವುದು ಸರಿಯಲ್ಲ. ತಮ್ಮನ್ನು ಹವಾಯಿ ಚಪ್ಪಲಿ ಇಲ್ಲದವ ಎಂದು ಕೆಲವರು ಟೀಕಿಸಿದ್ದು, ಚಪ್ಪಲಿ ಇಲ್ಲದವರನ್ನು ಶಾಸಕರನ್ನಾಗಿಸುವ ಶಕ್ತಿ ಪಕ್ಷಕ್ಕಿದೆ ಎಂದು ಹೇಳಿದರು.

ತಮ್ಮನ್ನು ಜಾತಿ ಮೇಲೆ ಸೋಲಿಸಬಹುದೆಂದು ಕೆಲವರು ಷಡ್ಯಂತ್ರ ರೂಪಿಸುತ್ತಿದ್ದು, ಅದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಪಕ್ಷ ಗೆಲುವು ಸಾಧಿಸುವುದು ಸೈದ್ಧಾಂತಿಕ ಬದ್ಧತೆ ಮೇಲೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ನಗರಾಧ್ಯಕ್ಷ ಕೋಟೆ ರಂಗನಾಥ್‌ ವಹಿಸಿದ್ದರು. ಗ್ರಾಮಾಂತರ ಅಧ್ಯಕ್ಷ ಸೋಮಶೇಖರ್‌ ಮಾತನಾಡಿ, ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗಲು ಶಾಸಕ ಸಿ.ಟಿ.ರವಿ ಅವರನ್ನು ಬೆಂಬಲಿಸಲು ಕೋರಿದರು. ರಾಜ್ಯ ಸಮಿತಿ ಸದಸ್ಯ ಕಲ್ಮುರುಡಪ್ಪ, ಜಿ.ಪಂ. ಸದಸ್ಯ
ಬೆಳವಾಡಿ ರವೀಂದ್ರ, ಎಚ್‌.ಡಿ.ತಮ್ಮಯ್ಯ, ವೆಂಕಟೇಶ್‌, ತಾ.ಪಂ. ಅಧ್ಯಕ್ಷ ಮಹೇಶ್‌, ಲಕ್ಷ್ಮಣ ನಾಯಕ್‌, ದೇವನೂರು ರವಿ ಮಾತನಾಡಿದರು.

ಜಿ.ಪಂ. ಸದಸ್ಯರಾದ ಕವಿತಾ ಲಿಂಗರಾಜು, ವಿಜಯಕುಮಾರ್‌, ಹಿರಿಗಯ್ಯ, ಜಸಂತಾ ಅನಿಲ್‌ಕುಮಾರ್‌, ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್‌, ಬಿಜೆಪಿ ಮುಖಂಡರಾದ ಸಿ.ಆರ್‌.ಪ್ರೇಮ್‌ಕುಮಾರ್‌, ನಿರಂಜನ್‌, ವರಸಿದ್ಧಿ ವೇಣುಗೋಪಾಲ್‌, ರಾಜಪ್ಪ, ಕವಿತಾ
ಶೇಖರ್‌ ಇದ್ದರು. ದೇವರಾಜ್‌ ಶೆಟ್ಟಿ ಸ್ವಾಗತಿಸಿ, ಪುಷ್ಪರಾಜ್‌ ಮತ್ತು ಜಯರಾಂ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next