ಅಂತೂ ಬಹು ಸಮಯದಿಂದ ಕಾಯುತ್ತಿದ್ದ ʼಪುಪ್ಪ-2ʼ (Pushpa 2: The Rule) ಸಿನಿಮಾ ಗುರುವಾರ (ಡಿ.5 ರಂದು) ಸಾವಿರಾರು ಥಿಯೇಟರ್‌ಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿದೆ. ಮಾರ್ನಿಂಗ್ ಶೋನಿಂದಲೇ ಥಿಯೇಟರ್‌ಗಳು ಹೌಸ್ ಫುಲ್ ಆಗಿವೆ.
ರಿಲೀಸ್‌ಗೂ ಮುನ್ನ ʼಪುಷ್ಪ-2ʼ ಹಲವು ದಾಖಲೆಗಳನ್ನು ಬ್ರೇಕ್ ಮಾಡಿದೆ. ಅಡ್ವಾನ್ಸ್ ಬುಕಿಂಗ್ ವಿಚಾರದಲ್ಲೂ ಸಿನಿಮಾ ಎಲ್ಲ ದಾಖಲೆಯನ್ನು ಹಿಂದೆ ಬಿಟ್ಟಿದೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ʼಪುಷ್ಪರಾಜ್ʼ ಆಗಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದು, ಅವರ ಅಭಿನಯ ನೋಡಿ ಫ್ಯಾನ್ಸ್‌ಗಳು ಜೈಕಾರ ಹಾಕುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಪ್ರೇಕ್ಷಕರನ್ನು ಕುತೂಹಲ ತುದಿಗಾಲಲ್ಲಿ ನಿಲ್ಲಿಸಿದ್ದ ʼಪುಷ್ಪ-2ʼ ಸಿನಿಮಾ ಹೇಗಿದೆ ಎನ್ನುವುದರ ಕುರಿತ ವಿಮರ್ಶೆ ಇಲ್ಲಿದೆ..
ಬಾಹುಬಲಿ, ಕೆಜಿಎಫ್ ನಂತರ ದೊಡ್ಡ ಮಟ್ಟಿನಲ್ಲಿ ಸದ್ದು ಮಾಡಿ, ಸದ್ದಿನ ಜೊತೆ ದುಡ್ಡನ್ನೂ ಮಾಡಿದ ಕೆಲವೇ ಪ್ಯಾನ್ ಇಂಡಿಯಾ ಸಿನೆಮಾಗಳಲ್ಲಿ ‘ಪುಷ್ಪ’ ಕೂಡ ಒಂದು. 250 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಪುಷ್ಪ ಸಿನಿಮಾದ ಮೊದಲ ಭಾಗ ಜಗತ್ತಿನಾದ್ಯಂತ 400 ಕೋಟಿಗೂ ಹೆಚ್ಚು ಸಂಪಾದಿಸಿ 2021 ರ ಸೂಪರ್ ಹಿಟ್ ಸಿನೆಮಾಗಳಲ್ಲೊಂದಾಗಿತ್ತು. ಮೊದಲ ಭಾಗದ ಯಶಸ್ಸಿನ ನಂತರ ʼಪುಷ್ಪ 2ʼ ರಿಲೀಸ್ ಗೂ ಮೊದಲೇ 1000 ಕೋಟಿಗೂ ಹೆಚ್ಚು ಸಂಪಾದಿಸಿ ಎಲ್ಲರ ಹುಬ್ಬೇರಿಸಿತ್ತು. ಅಷ್ಟೇ ಅಲ್ಲದೆ ಬುಕ್ ಮೈ ಷೋ ಅಡ್ವಾನ್ಸ್ ಬುಕಿಂಗ್ ಶುರುವಾದ ಕೆಲವೇ ಗಂಟೆಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು (1 ಮಿಲಿಯನ್) ಬುಕಿಂಗ್ ದಾಖಲೆ ಬರೆದಿತ್ತು. ಇಷ್ಟೆಲ್ಲಾ ಸದ್ದು ಮಾಡಿದ ʼಪುಷ್ಪ 2ʼ ಸಿನಿಮಾ ಗುರುವಾರ (ಡಿ.5ರಂದು) ತೆರೆಗಪ್ಪಳಿಸಿದೆ.
ಪುಷ್ಪ ಸಿನಿಮಾದ ಮೊದಲ ಭಾಗದಲ್ಲಿ ಕಂಡಂತೆ, ಕಷ್ಟದಲ್ಲೇ ಹುಟ್ಟಿ ಬೆಳೆದ ಪುಷ್ಪರಾಜ್ .. ರಕ್ತ ಚಂದನದ ಕಾಡಿನಲ್ಲಿ ಪೊಲೀಸರ ಕಣ್ಣು ತಪ್ಪಿಸಿ, ಹಲವರ ಕಣ್ಣಿಗೆ ಬಿದ್ದೂ.. ಹೇಗೆ ರಕ್ತ ಚಂದನ ಸಾಗಿಸುತ್ತಾನೆ? ಇಷ್ಟ ಪಟ್ಟ ಹುಡುಗಿಯ ಮದುವೆಯಾಗುವ ಹೊತ್ತಿನಲ್ಲೂ ತನ್ನನ್ನು ಕೆಣಕಿದ ಪೊಲೀಸ್ ಆಫೀಸರ್ ಮುಂದೆ ಹೇಗೆ ತೊಡೆ ತಟ್ಟಿ ನಿಲ್ಲುತ್ತಾನೆ? ರಕ್ತ ಚಂದನದ ಕಾಡಿನ ದೊರೆಯಾಗಲು ಹೊರಟ ಪುಷ್ಪರಾಜ್ ಪ್ರಯಾಣದಲ್ಲಿ ಬಯಸಿ ಬಯಸದೆಯೋ ಎದುರಾದ ಖಳರು ಆತನ ಏಳಿಗೆಯನ್ನು ಹೇಗೆ ಸಹಿಸಿಯಾರು? ಎಂದು ತಿಳಿಯುವ ಮೊದಲೇ.. ಮೊದಲ ಭಾಗ ಮುಗಿದಿತ್ತು.
ಇದನ್ನೂ ಓದಿ: Pushpa 2: ರಿಲೀಸ್ ಆದ ಕೆಲವೇ ಗಂಟೆಯಲ್ಲಿ ಆನ್‌ಲೈನ್‌ನಲ್ಲಿ ʼಪುಷ್ಪ-2ʼ HD ಕಾಪಿ ಲೀಕ್
ರಕ್ತ ಚಂದನದ ಹಿಂದಿನ ರಕ್ತ ಸಿಕ್ತ ಕಥೆಯನ್ನು ಪುಷ್ಪರಾಜ್ ಎಂಬ ಪಾತ್ರದ ಮೂಲಕ ಹೇಳಲು ಹೊರಟಿದ್ದ ನಿರ್ದೇಶಕ ಸುಕುಮಾರ್ ಈ ಬಾರಿ ಚಿತ್ರಕ್ಕಾಗಿ ಮೊದಲ ಭಾಗದ ಎರಡು ಪಟ್ಟು ಅಂದರೆ 400 ಕೋಟಿ ಹಣವನ್ನು ನಿರ್ಮಾಪಕರ ಬಳಿ ಸುರಿಸಿದ್ದಾರೆ. ಮೊದಲಿಗಿಂತಲೂ ಹೆಚ್ಚು ನಟರು-ಸಹನಟರನ್ನು ಇಟ್ಟುಕೊಂಡು ಚಿತ್ರವನ್ನು ಮಾಡಿದ್ದಾರೆ. ಇದೆಲ್ಲದ್ದಕ್ಕೂ ಹೆಚ್ಚಾಗಿ ದೇಶಾದ್ಯಂತ ಭರ್ಜರಿ ಪ್ರಮೋಷನ್ ಮುಗಿಸಿ ತೆರೆಗೆ ಅಪ್ಪಳಿಸಿದೆ.
ತನಗಾದ ಅವಮಾನಕ್ಕೆ ಪುಷ್ಪನ ಸಾಮ್ರಾಜ್ಯವನ್ನೇ ಮುಗಿಸಲು ಹೊರಟ ಖಡಕ್ ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್, ಪುಷ್ಪರಾಜ್ ಏಳಿಗೆ ಸಹಿಸದ ಎದುರಾಳಿಗಳು ಸೇರಿ ಪುಷ್ಪರಾಜನಿಗೆ ಹೆಡೆಮುರಿ ಕಟ್ಟಲು ಹೊರಟ್ಟಿದ್ದಾರೆ. ಎಲ್ಲರ ಷಡ್ಯಂತ್ರಕ್ಕೆ ʼಪುಷ್ಪರಾಜ್ʼ ಸಂಚು ರೂಪಿಸಿ ಬುದ್ದಿವಂತಿಕೆಯಿಂದ ಹೇಗೆ ಮೆರೆಯುತ್ತಾನೆ ಎನ್ನುವುದನ್ನು ತೋರಿಸಲಾಗಿದೆ.
ಶ್ರೀವಲ್ಲಿ- ಪುಷ್ಪನ ಪ್ರೀತಿ ಸರಸದ ಅಂಶ ಹಾಗು ʼಪುಷ್ಪರಾಜ್ʼ ಸಿಟ್ಟು ಮೊದಲಾರ್ಧದಲ್ಲಿದೆ. ತನ್ನ ವಿರುದ್ಧ ನಡೆಯುವ ಎಲ್ಲ ಬಲ ಪ್ರಯೋಗಕ್ಕೆ ಹೇಗೆ ಪುಷ್ಪರಾಜ್ ಪ್ರತಿಕ್ರಿಯೆ ನೀಡುತ್ತಾನೆ, ಹೇಗೆ ತನ್ನವರನ್ನು ಹಾಗೂ ತನ್ನ ವೃತ್ತಿಯನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವ ಅಂಶ ಸೆಕೆಂಡ್ ಹಾಫ್ ನಲ್ಲಿ ಹೈಲೈಟ್ ಆಗುತ್ತದೆ. ಮಾಸ್ ದೃಶ್ಯಗಳನ್ನು ಹೊರತುಪಡಿಸಿದರೆ ಭಾವನಾತ್ಮಕ ಸನ್ನಿವೇಶಗಳು ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತದೆ.
ಕ್ಲ್ಯಮ್ಯಾಕ್ಸ್ ಹಂತದಲ್ಲಿ ಸಿನಿಮಾದ ಮೂರನೇ ಭಾಗಕ್ಕೆ ಲೀಡ್ ನೀಡಲಾಗಿದೆ. ಇದೇ ಸಮಯದಲ್ಲಿ ಕನ್ನಡದ ಡಾಲಿ ಧನಂಜಯ ಪಾತ್ರವೂ ಬಂದು ಹೋಗುತ್ತದೆ. ಮೂರನೇ ಭಾಗದಲ್ಲಿ ಡಾಲಿ ಅವರ ಪಾತ್ರಕ್ಕೆ ಹೆಚ್ಚಿನ ಮಹತ್ವವಿರಲಿದೆ ಎನ್ನುವುದು ಇದರಲ್ಲಿ ಗೊತ್ತಾಗುತ್ತದೆ.
ಒಟ್ಟಾರೆ ಮನರಂಜನೆ ಬಯಸುವ ಮಾಸ್ ಪ್ರೇಕ್ಷಕರಿಗೆ ಈ ಸಿನಿಮಾ ಹೆಚ್ಚು ಇಷ್ಟವಾದರೆ, ಕತೆ ಇಷ್ಟಪಡುವರಿಗೆ ನಿರಾಸೆಯಾಗಲಿದೆ. ಸಿನಿಮಾದ ಜೀವಾಳ ಆಗಿದ್ದ ಅಲ್ಲದೇ ಎಲ್ಲರಿಗೂ ಇಷ್ಟವಾಗಿದ್ದ ರಕ್ತ ಚಂದನ ಸಾಗಿಸುವ ಸನ್ನಿವೇಶಗಳು ಇನ್ನು ಸ್ವಲ್ಪ ಹೆಚ್ಚಿದ್ದರೆ ಒಳ್ಳೆಯದಿತ್ತು. ಕೆಲ ಭಾವನಾತ್ಮಕ ಸನ್ನಿವೇಶಗಳು ಸ್ವಲ್ಪ ಟ್ರಿಮ್ ಆಗಬೇಕಿತ್ತು. ಅಲ್ಲದೇ 3 ಗಂಟೆ 20 ನಿಮಿಷ ಇರುವ ಸಿನಿಮಾಗೆ ಸ್ವಲ್ಪ ಕತ್ತರಿ ಹಾಕಿದ್ದರೆ ಸಿನಿಮಾ ಇನ್ನಷ್ಟು ಚೆನ್ನಾಗಿರುತ್ತಿತ್ತು.
ಪುಷ್ಪ ಭಾಗ ಒಂದರ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಅಲ್ಲು ಅರ್ಜುನ್. ಭಾಗ ಎರಡರಲ್ಲಿ ಮತ್ತೊಮ್ಮೆ ಅಬ್ಬರಿಸಿದ್ದಾರೆ. ಪುಷ್ಪರಾಜ್ ಮ್ಯಾನರಿಸಂ ಜನರಿಗೆ ಬಹುಕಾಲ ನೆನಪುಳಿಯಲಿದೆ. ಶ್ರೀವಲ್ಲಿ ರಶ್ಮಿಕಾಗೆ ಭಾಗ ಒಂದಕ್ಕಿಂತ ಜಾಸ್ತಿ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ನಟನೆ ಹಾಗು ಡಾನ್ಸ್ ನಲ್ಲಿ ಶ್ರೀವಲ್ಲಿ ಮನ ಗೆಲ್ಲುತ್ತಾಳೆ. ಭಾಗ ಒಂದರ ದ್ವಿತೀಯ ಅರ್ಧದಲ್ಲಿ ಬರುವ ಖಡಕ್ ಎಸ್ ಪಿ ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ಮಿಂಚಿದ್ದ ಫಹಾದ್ ಫಾಸಿಲ್ ಪಾತ್ರ. ಭಾಗ ಎರಡರ ಮುಖ್ಯ ಪಾತ್ರಗಳಲ್ಲೊಂದು. ಅಲ್ಲು ಅರ್ಜುನ್ ನಟನೆಗೆ ತನ್ನ ಮನೋಜ್ಞ ನಟನೆಯಿಂದ ಟಕ್ಕರ್ ಕೊಟ್ಟ ಫಹಾದ್ ಸಿನಿ ಪ್ರಿಯರ ಮನಸ್ಸು ಗೆಲ್ಲುವುದು ಗ್ಯಾರಂಟಿ. ಅತೀ ದೊಡ್ಡ ತಾರಾಗಣ ಇರುವ ಈ ಚಿತ್ರದಲ್ಲಿ ಜಗಪತಿ ಬಾಬು, ಸುನೀಲ್, ಅಜಯ್ ಘೋಷ್, ರಾವ್ ರಮೇಶ್, ಅನಸೂಯಾ ಭಾರಧ್ವಾಜ್, ಪುಷ್ಪರಾಜ್ ನ ಆತ್ಮೀಯ ಗೆಳೆಯ ಕೇಶವನ ಪಾತ್ರದಲ್ಲಿ ನಟಿಸಿದ ಜಗದೀಶ್ ಪ್ರತಾಪ್ ಭಂಡಾರಿ ಹಾಗು ಬಹತೇಕ ಎಲ್ಲಾ ನಟರ ನಟನೆ ಅಚ್ಚುಕಟ್ಟಾಗಿದೆ. ಹಾಡಿಗೆ ಹೋಲಿಸಿದರೆ ‘ಊಹ್ ಅಂಟವಾ’ ದಷ್ಟು ಚೆನ್ನಾಗಿಲ್ಲದಿದ್ದರೂ ‘ಕಿಸ್ ಕಿಸ್ಸಕ್ಕ್’ ಹಾಡಿಗೆ ಸೊಂಟ ಬಳುಕಿಸಿದ ಶ್ರೀಲೀಲಾ ಪಡ್ಡೆ ಹುಡುಗರ ನಿದ್ದೆ ಕೆಡಿಸೋದು ಮಾತ್ರ ಪಕ್ಕಾ.
ಸುಕುಮಾರ್ ನಿರ್ದೇಶನ ಅಚ್ಚುಕಟ್ಟಾಗಿದ್ದರೂ ಬರವಣಿಗೆ ವಿಭಾಗದಲ್ಲಿ ಇನ್ನಷ್ಟು ಕೆಲಸದ ಅಗತ್ಯವಿತ್ತು. ದೊಡ್ಡ ತಾರಾಗಣ, ದೊಡ್ಡ ಕ್ಯಾನ್ವಾಸ್ ಕಣ್ಣಿಗೆ ಮುದ ನೀಡುತ್ತದೆ. ಪುಷ್ಪರಾಜ್ ಮಾತ್ರವಲ್ಲದೆ ಪ್ರತಿಯೊಂದು ಪಾತ್ರಕ್ಕೂ. ಪ್ರತ್ಯೇಕ ವಿಭಿನ್ನ ಮ್ಯಾನರಿಸಂ ಕೊಟ್ಟ ಸುಕುಮಾರ್ ಅದನ್ನು ಚಿತ್ರದೆಲ್ಲೆಡೆ ತೋರಿಸಿದ ರೀತಿ ನಿಜಕ್ಕೂ ಅದ್ಭುತ. ಸಿನಿಮಾ ಅಂದಕೂಡಲೇ ಅದು ಬರೀ ನಟರಷ್ಟೇ ಅಲ್ಲ ತಾಂತ್ರಿಕ ವರ್ಗವೂ ಮುಖ್ಯ. ಇಲ್ಲಿ ದೊಡ್ಡ ತಾರಾಗಣದ ಜೊತೆಗೆ ದೊಡ್ಡ ತಾಂತ್ರಿಕ ವರ್ಗವೂ ಇದೆ. ಪೋಲೆಂಡ್ ಮೂಲದ ಛಾಯಾಗ್ರಾಹಕ Mirosław Kuba Brożek ಸೆರೆ ಹಿಡಿದ ಪುಷ್ಪರಾಜನ ಜಗತ್ತು ಜನರನ್ನು ಪುಷ್ಪನ ಲೋಕಕ್ಕೆ ಕೊಂಡೊಯ್ಯುತ್ತದೆ. ದೇವಿ ಶ್ರೀ ಪ್ರಸಾದ್ ಹಿನ್ನಲೆ ಸಂಗೀತ ಹಾಗು ಸಂಗೀತ ಭಾಗ ಒಂದಕ್ಕೆ ಹೋಲಿಸಿದರೆ ಸಪ್ಪೆ, SFX , ಎಡಿಟಿಂಗ್, ಕಲರಿಂಗ್ ಹಾಗು VFX ಅಚ್ಚುಕಟ್ಟಾಗಿದೆ.
ಹೆಚ್ಚು ನಿರೀಕ್ಷೆ ನಿಮಗೆ ನಿರಾಸೆ ಮೂಡಿಸಬಹುದು. ಹೆಚ್ಚು ನಿರೀಕ್ಷೆಯಿಲ್ಲದೆ ಮಾಸ್ ಸಿನಿಮಾ ನೋಡುವವರು ಈ ಸಿನೆಮಾವನ್ನು ಹೆಚ್ಚು ಆನಂದಿಸುತ್ತಾರೆ.
-ರವಿಕಿರಣ್