ಯಕ್ಷ ರಂಗದ ಮಹಾನ್ ಸಾಧಕಿ “ಯಕ್ಷ ಪೂರ್ಣಿಮಾ…!’
Team Udayavani, Jul 26, 2017, 12:12 PM IST
ಕೆಲವರು ಸೊನ್ನೆಯಾಗಿ ಜನ್ಮವೆತ್ತಿ ಬಂದಿರುತ್ತಾರೆ, ಅಲ್ಲದೆ ಜೀವನದ ಉದ್ದಕ್ಕೂ ಸೊನ್ನೆಯಾಗಿಯೇ ಉಳಿಯುತ್ತಾರೆ. ಆದರೆ ಇನ್ನು ಕೆಲವರಿರುತ್ತಾರೆ, ಅವರು ಸೊನ್ನೆಯಾಗಿ ಜಗತ್ತಿಗೆ ಕಾಲಿಟ್ಟರೂ ಜೀವನದಲ್ಲಿ ಬಹುದೊಡ್ಡ ಸಂಖ್ಯೆಯೆನಿಸಿ ಬೆಳೆದಿರುತ್ತಾರೆ. ಇದಕ್ಕೆ ಉತ್ತಮ ನಿದರ್ಶನವೆಂದರೆ ಯಕ್ಷ ಕಲಾರಾಧನೆಯನ್ನೇ ಜೀವಾಳವನ್ನಾಗಿಸಿಕೊಂಡು, ಒಂದು ಕಾಲದಲ್ಲಿ ಗಂಡುಕಲೆಯಾಗಿದ್ದ ಯಕ್ಷಗಾನ ಪುರುಷರಿಗಷ್ಟೇ ಸೀಮಿತವಲ್ಲ, ಮಹಿಳೆಯರಿಗೂ ಒಲಿಯುತ್ತದೆ ಎನ್ನುವುದನ್ನು ಜಗದಗಲ ಸಾರಿದ ಅಪ್ರತಿಮ ಕಲಾ ಸಾಧಕಿ ಪೂರ್ಣಿಮಾ ಯತೀಶ್ ರೈ ಅವರು.
ಸುರತ್ಕಲ್ ಸಮೀಪದ ಬಾಳಗ್ರಾಮದಲ್ಲಿ ಶಾರದಾ ಮತ್ತು ಸೇಸಪ್ಪ ಶೆಟ್ಟಿ ದಂಪತಿಯ ಪುತ್ರಿಯಾಗಿ ಜನಿಸಿದ ಪೂರ್ಣಿಮಾ ಅವರು ಮುಂದೊಂದು ದಿನ ಯಕ್ಷಗಾನ ಕ್ಷೇತ್ರದಲ್ಲಿ ಅಪೂರ್ವ ಸಾಧನೆಯನ್ನು ಮಾಡಲಿದ್ದಾರೆ ಎಂಬುದನ್ನು ಯಾರೂ ಕೂಡಾ ಊಹಿಸಿರಲಿಕ್ಕಿಲ್ಲ. ಕಲಾಯೋಗ್ಯ ಮನೆತನ, ಹುಟ್ಟಿ ಬೆಳೆದ ಪರಿಸರದ ಪ್ರಭಾವದಿಂದ ಸಹೋದರ, ಸಹೋದರಿಯರು ಯಕ್ಷಗಾನ ಕಲಾವಿದರೇ ಆದರೂ ಕೂಡಾ ಯಕ್ಷರಂಗದಲ್ಲಿ ನೆಲೆಕಾಣಲು ಇವರೊಬ್ಬರಿಗೆ ಮಾತ್ರ ಸಾಧ್ಯವಾಯಿತು ಎನ್ನುವಂತೆ ಪೂರ್ಣಿಮಾ ಅವರು ಕಲೆ-ಕಲಾವಿದರಿಗಾಗಿಯೇ ಜನ್ಮತಳೆದವರು ಎಂಬುದನ್ನು ಈಗಾಗಲೇ ಸಾಧಿಸಿ ನಿರೂಪಿಸಿದ್ದಾರೆ.
ಹಚ್ಚಹಸುರಿನ, ಬೈಲು-ಕೆರೆ, ತೊರೆಗಳಿಂದ ಹರಡಿದ ಹಳ್ಳಿ ಪ್ರದೇಶದಲ್ಲಿ ಜನಿಸಿದ ಪೂರ್ಣಿಮಾ ಅವರಿಗೆ ಬಾಲ್ಯದಿಂದಲೇ ಕಲೆಯ ಬಗ್ಗೆ ಆಸಕ್ತಿ. ಮನೆಯ ಸಮಸ್ಯೆಗಳ ಅನುಭವ ಅವರಿಗಿದ್ದರೂ ಕೂಡಾ, ಮನೆಯವರ ಸಂಪೂರ್ಣ ಪ್ರೋತ್ಸಾಹದಿಂದ ಬಾಲಕಲಾವಿದೆಯಾಗಿ ನಾಟಕಗಳಲ್ಲಿ ಪಾತ್ರಗಳನ್ನು ನಿರ್ವಹಿಸಲು ಪ್ರಾರಂಭಿಸಿದರು. ಶಾಲಾ ದಿನಗಳಲ್ಲಿ ಕಾಣುತ್ತಿದ್ದ ಟೆಂಟು ಯಕ್ಷಗಾನ ಪ್ರದರ್ಶನಗಳು ಇವರನ್ನು ಯಕ್ಷ ಕಲೆಯತ್ತ ಮತ್ತಷ್ಟು ಆಕರ್ಷಿಸಿತು. ಬಾಳದ ಶ್ರೀ ರಾಮಚಂದ್ರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1988ರಲ್ಲಿ ನಾಟ್ಯಗುರು ಶಿವರಾಮ ಪಣಂಬೂರು ಅವರಿಂದ “ಧೀಂಕಿಟಾದಿ’ ಪ್ರಾರಂಭಿಕ ಶಿಕ್ಷಣವನ್ನು ಪಡೆದರು. ಗುರುಗಳ ಪ್ರೇರಣೆಯಿಂದ ಅವರೊಳಗೆ ಹುದುಗಿದ್ದ ಕಲೆಯ ಹುಚ್ಚು ಮತ್ತಷ್ಟು ಇಮ್ಮಡಿಗೊಂಡಿತು. ಅದೇ ವರ್ಷ ಮೂಲ್ಕಿಯ ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇವಳದ ಜ್ಞಾನಮಂದಿರದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಪ್ರಥಮ ಬಾರಿಗೆ ಕಾಲಿಗೆ ಗೆಜ್ಜೆಕಟ್ಟಿ ರಂಗವನ್ನೇರಿಯೇ ಬಿಟ್ಟರು. ಅವರ ಮೊದಲ ಪ್ರದರ್ಶನದ ಪಾತ್ರವೂ ಅತ್ಯದ್ಭುತವಾಗಿ ಮೂಡಿ, ಮೂರು ವೈಯಕ್ತಿಕ ಪ್ರಶಸ್ತಿಗಳು ಒಲಿದು ಬಂತು. ಅನಂತರ ದಿನಗಳಲ್ಲಿ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘವು ಸ್ಥಾಪನೆಗೊಂಡಿತು. ಯಕ್ಷಗಾನದ ಹುಚ್ಚು ಬೆಳೆಸಿಕೊಂಡು ಜೀವನದಲ್ಲಿ ಏನನ್ನಾದರೂ ಸಾಧಿಸಿಯೇ ಸಾಧಿಸಬೇಕು ಎಂಬ ಕೆಚ್ಚು ಮನಸ್ಸಿನಿಂದ ಕಲಾಜಗತ್ತಿಗೆ ಪಾದಾರ್ಪಣೆ ಮಾಡಿ ಪ್ರಸ್ತುತ ಮಹಿಳಾ ವಲಯದಲ್ಲಿ ಯಕ್ಷಕಲಾ ಕ್ರಾಂತಿಯ ಅಲೆಯನ್ನು ಸೃಷ್ಟಿಸಿ ಯುವ ಪೀಳಿಗೆಗೆ ಮಾದರಿಯಾಗಿ ನಿಂತವರು ಪೂರ್ಣಿಮಾ.
ಜೀವನ ಹಸನಾಗಿಸಬೇಕು. ಅತ್ಯುತ್ತಮ ಎನಿಸಿದ್ದನ್ನು ಮಾಡಬೇಕು. ಕಟ್ಟಳೆ ಇರುವುದು ಪ್ರಕಾಶಕ್ಕೆ ಮತ್ತು ಜೀವನದ ಅಭಿವ್ಯಕ್ತಿಗೆಯೇ ಹೊರತು, ಅದು ಜೀವನಕ್ಕೆ ಅಲ್ಲ. ಜೀವನ ಸ್ವತಂತ್ರ, ಬಲಾಡ್ಯ ಎಂಬ ಮಾತನ್ನು ಅರಿತಿರುವ ಇವರು, ಕಠಿನ ಪರಿಶ್ರಮ, ಶ್ರದ್ಧೆ, ಏಕಾಗ್ರತೆಯಿಂದ ಮುನ್ನಡೆದರು. ಯಾವುದೇ ರೀತಿಯ ಟೀಕೆಗಳಿಗೆ, ಅಪಪ್ರಚಾರಗಳಿಗೆ ಕಿವಿಗೊಡದೆ ಸಾಗಿದ ಪೂರ್ಣಿಮಾ ಅವರು, ಸ್ವತಃ ಗೆಜ್ಜೆಕಟ್ಟಿ ವೃಷಕೇತು ಪಾತ್ರದ ಮೂಲಕ ರಂಗಪ್ರವೇಶಗೈದು ಪುರುಷರಿಗಿಂತಲೂ ಮಿಂಚಿನ ವೇಗದ ಹೆಜ್ಜೆಗಳಿಂದ ಎಲ್ಲರ ಮನದಲ್ಲೂ ಅಚ್ಚೊತ್ತಿ, ಅಬ್ಬರದ ಪೌರುಷಯುಕ್ತ ಪುರುಷ ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾದರು. ಕಿರೀಟ ವೇಷಗಳು, ಬಣ್ಣದ ವೇಷಗಳಿಗೆ ಮಾರುಹೋದ ಇವರಿಗೆ 1989 ರಲ್ಲಿ ಬಾಯಾರು ರಮೇಶ್ ಶೆಟ್ಟಿ ಅವರು ಗುರುಗಳಾಗಿ, ನಿರ್ದೇಶಕರಾಗಿ ಸಿಕ್ಕಿರುವುದು ಇವರ ಯಶಸ್ಸಿಗೆ ದಾಪುಗಾಲಾಯಿತು. ಯಾವುದೇ ಪಾತ್ರಗಳಿರಲಿ ಆ ಪಾತ್ರದ ಒಳ-ಹೊರ, ನಡೆ, ಹೆಜ್ಜೆಗಾರಿಕೆ, ಮಾತಿನ ಕೌಶಲ್ಯ, ಸ್ವರ ಗಾಂಭೀರ್ಯ, ಸ್ವರ ಮಾಧುರ್ಯ, ಶಬ್ಧ ಸ್ಪುಟತೆ, ಲಯಜ್ಞಾನ, ತಾಳಜ್ಞಾನ, ಪ್ರತ್ಯುತ್ಪನ್ನಮತಿ, ಪ್ರಸಂಗದ ನಡೆ ಮೊದಲಾದ ಸೂಕ್ಷ್ಮವಿಷಯಗಳನ್ನು ಕರಗತ ಮಾಡಿಕೊಂಡರು.
ಜೀವನವು ಅನ್ವೇಷಣ ಪರಂಪರೆಯಿಂದ ಕೂಡಿರುತ್ತದೆ. ವಿಕಾಸ ಕ್ರಮದಲ್ಲಿ ಜೀವನದ ಬೆಳೆ ಬೆಳೆದಂತೆ ಅದರ ದೃಷ್ಟಿಯೂ ವಿಶಾಲವಾಗಿ, ವೈಭವಯುತವಾಗಿ ಬೆಳೆಯತೊಡಗುತ್ತದೆ. ಅದೇ ರೀತಿ ಪೂರ್ಣಿಮಾ ಅವರು ಕೂಡಾ ಯಕ್ಷರಂಗದಲ್ಲಿ ಇತರರಿಂದ ಕಲಿತು ಅನುಭವಗಳನ್ನು ತನ್ನ ಬುದ್ಧಿಯ ಚೀಲಕ್ಕೆ ತುಂಬಿಸಿಕೊಂಡವರು. ಗುರು-ಹಿರಿಯರು, ಸಾಧನೆಗೆ ಬೆನ್ನೆಲುಬಾಗಿ ನಿಂತ ಸಹೋದರ, ಹವ್ಯಾಸಿ ಕಲಾವಿದ ಉದ್ಯಮಿ ಮಾಧವ ಶೆಟ್ಟಿ, ಉದ್ಯಮಿ ಪದ್ಮನಾಭ ಶೆಟ್ಟಿ, ದಯಾನಂದ ಶೆಟ್ಟಿ, ಖ್ಯಾತ ಕಲಾವಿದ ಸಂಪಾಜೆ ಶೀನಪ್ಪ ರೈ ಅವರಿಂದ ತನ್ನಲ್ಲಿರುವ ಕಲೆಯ ಭಂಡಾರಕ್ಕೆ ಅವರ ತೆಕ್ಕೆಯಲ್ಲಿದ್ದ ಅನುಭವದ ಕಾಣಿಕೆಯನ್ನು ಹಾಕಿಸಿಕೊಂಡರು. ಕೇವಲ ಮುಮ್ಮೇಳ ಮಾತ್ರವಲ್ಲದೆ ಹಿಮ್ಮೇಳವನ್ನೂ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹರಿನಾರಾಯಣ ಬೈಪಡಿತ್ತಾಯ, ಲೀಲಾವತಿ ಬೈಪಡಿತ್ತಾಯ ಅವರಿಂದ ಮದ್ದಳೆ, ಭಾಗವತಿಕೆಯನ್ನು ಕಲಿತ ಇವರು ತನ್ನ ತಂಡಕ್ಕೆ, ಇತರ ತಂಡಗಳಿಗೆ ಹಿಮ್ಮೇಳ ಕಲಾವಿದೆಯಾಗಿಯೂ ಪ್ರದರ್ಶನ ನೀಡಿ ತನ್ನ ವಿದ್ವತ್ತನ್ನು ಲೋಕಮುಖಕ್ಕೆ ಪರಿಚಯಿಸಿದ್ದಾರೆ. ಪ್ರಸ್ತುತ ಅವರ ಪ್ರತಿಭೆಯು ನಿಂತ ನೀರಾಗದೆ ಹರಿಯುವ ನದಿಯಾಗಿದೆ ಎಂದರೆ ತಪ್ಪಾಗಲಾರದು.
ದೀಪ ತನ್ನಷ್ಟಕ್ಕೆ ತಾನು ಬೆಳಗಿದರೆ ಸಾಲದು. ಅದರ ಬೆಳಕು ಇತರರಿಗೆ ಉಪಯೋಗಕ್ಕೆ ಬಂದಾಗಲೇ ಇರುವಿಕೆಗೆ ಒಂದು ಅರ್ಥ ಬರುತ್ತದೆ, ಸಾರ್ಥಕವಾಗುತ್ತದೆ. ಅದರಂತೆ ಮನುಷ್ಯನ ಜೀವನ ಸಾಗಬೇಕು ಎಂಬ ಧ್ಯೇಯವವನ್ನು ಹೊಂದಿರುವ ಇವರು, ಕಳೆದ 28 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ತನ್ನ ಮಾತೃ ಸಂಘ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಬಾಳ-ಕಾಟಿಪಳ್ಳ ಅಲ್ಲದೆ ಇನ್ನಿತರ ಹತ್ತು-ಹಲವು ಸಂಘ-ಸಂಸ್ಥೆಗಳಿಗೆ ಅತಿಥಿ ಕಲಾವಿದೆಯಾಗಿ, ನಿರ್ದೇಶಕಿಯಾಗಿ, ಸಂಘಟಕಿಯಾಗಿ ಯಕ್ಷಗಾನದ ಕಂಪನ್ನು ಪಸರಿಸುತ್ತಾ ಬಂದಿದ್ದಾರೆ.
ಪೂರ್ಣಿಮಾ ಶೆಟ್ಟಿ ಅವರದ್ದು ಬಹುಮುಖ ಪ್ರತಿಭೆ. ರಂಗದಲ್ಲಿ ಮೈನವಿರೇಳಿಸುವ ಕಿರೀಟ ವೇಷಗಳನ್ನು, ಬಣ್ಣದ ವೇಷಗಳನ್ನು ಯಾವುದೇ ರೀತಿಯ ಚೌಕಟ್ಟನ್ನು ಮೀರದೆ ಪ್ರದರ್ಶಿಸುತ್ತಾರೆ. ಅವರ ತಂಡದ ದೇವಿ ಮಹಾತೆ¾ ಪ್ರಸಂಗಕ್ಕೆ ಬಹಳಷ್ಟು ಬೇಡಿಕೆಯಿದೆ. ಇಲ್ಲಿಯವರೆಗೆ 400ಕ್ಕೂ ಅಧಿಕ ಪ್ರದರ್ಶನವನ್ನು ನೀಡಿದ ಹೆಗ್ಗಳಿಗೆ ಅವರ ತಂಡಕ್ಕಿದೆ. ದೇವಿ ಮಹಾತೆ¾ಯ ಮಹಿಷಾಸುರ ಅವರಿಗೆ ಬಹಳಷ್ಟು ಹೆಸರು ತಂದು ಕೊಟ್ಟ ಪಾತ್ರವಾಗಿದೆ. ಅವರದೇ ಆದ ಶೈಲಿಯಲ್ಲಿ ಮಹಿಷಾಸುರ ಪಾತ್ರವು ಪುರುಷ ವೇಷಧಾರಿಗಳನ್ನು ನಾಚಿಸುವಂತಿದೆ. ಅದೇ ರೀತಿ ಮುರಾಸುರ, ಭಸ್ಮಾಸುರ, ಕಂಸ, ಶಂತನು, ಮಹಿಷಾಸುರ, ರಕ್ತಬೀಜಾಸುರ, ಹಿರಣ್ಯಾಕ್ಷ, ಕಾರ್ತವಿರ್ಯಾರ್ಜುನ, ಅರ್ಜುನ, ಶೂರ್ಪನಖೀ, ಪೂತನಿ ಅಲ್ಲದೆ ತುಳು ಪ್ರಸಂಗಗಳಲ್ಲಿಯೂ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಕೇವಲ ಕರ್ನಾಟವಲ್ಲದೆ ಮುಂಬಯಿ, ದೆಹಲಿ, ಚೆನ್ನೈ ಇನ್ನಿತರೆಡೆಗಳಲ್ಲಿ ಹಾಗೂ ವಿದೇಶಿ ನೆಲದಲ್ಲೂ ಯಕ್ಷಗಾನ ಪ್ರದರ್ಶನವನ್ನು ನೀಡಿ ಕಲಾಭಿಮಾನಿಗಳ ಮನಸೂರೆಗೊಂಡಿದ್ದಾರೆ. ಪೂರ್ಣಿಮಾ ಅವರು ಯಕ್ಷರಂಗದಲ್ಲೇ ನೆಲೆನಿಂತು ತಮ್ಮ ಅಸ್ತಿತ್ವವನ್ನು ಕಂಡುಕೊಂಡಿರುವುದನ್ನು ಕಂಡಾಗ ಆಶ್ಚರ್ಯವೂ, ಸಂತೋಷವೂ ಆಗುವುದು ಸಹಜ. ದೀಪಕ್ ರಾವ್ ಪೇಜಾವರರಂಥ ಹಲವಾರು ಅತ್ಯುತ್ತಮ ಶಿಷ್ಯವೃಂದವನ್ನು ಹೊಂದಿರುವ ಇವರದ್ದು ಆರಕ್ಕೇರದ ಮೂರಕ್ಕಿಳಿಯದ ವ್ಯಕ್ತಿತ್ವ. ಅವರು ನೋವನ್ನು ನಗೆಯಾಗಿಸಬಲ್ಲರು. ಗಹನವಾದುದ್ದನ್ನು ತಿಳಿಯಾಗಿಸಬಲ್ಲರು. ಬದುಕನ್ನು ಸುಂದರವಾಗಿಸುವುದು ಅವರ ಬದುಕಿನ ಧೋರಣೆ ಎಂದರೆ ತಪ್ಪಾಗಲಾರದು. ಈ ಕಾರಣದಿಂದಲೇ ಇವತ್ತಿಗೂ ಯಾವುದೇ ರೀತಿಯ ಫಲಾಪೇಕ್ಷೆಯಿಲ್ಲದೆ ಅಧ್ಯಯನಾಸಕ್ತರಾಗಿ ನೂರಾರು ಮಕ್ಕಳು, ಮಹಿಳೆಯರು, ಪುರುಷರಿಗೆ ನಾಟ್ಯವನ್ನು ಧಾರೆಯೆರೆಯುತ್ತಿದ್ದಾರೆ.
“ವಜ್ರಾದಪಿ ಕಠೊರಾನಿ ಮೃದೂನಿ ಕುಸುಮಾದಪಿ’ ಎಂಬ ಸುಭಾಷಿತದಂತೆ ಸಹ ಕಲಾವಿದರೊಂದಿಗೆ, ವಿದ್ಯಾರ್ಥಿಗಳೊಂದಿಗೆ, ಬಂಧು-ಬಳಗದವರೊಂದಿಗೆ ಸ್ಮಿತಪೂರ್ವಾಭಿಷಿಣೀ ಎಂಬಂತೆ ವ್ಯವಹರಿಸುವ ಗುಣವನ್ನು ಹೊಂದಿರುವ ಪೂರ್ಣಿಮಾ ಅವರು ಹುಣ್ಣಿಮೆಯ ಚಂದ್ರನಂತೆ ಸದಾ ಹಸನ್ಮುಖೀ. ವಿನಯ, ದಯೆ, ನಿಯತ್ತು, ಪ್ರೀತಿ, ಔದಾರ್ಯ, ಸೌಹಾರ್ದ ಇತ್ಯಾದಿ ಮಾನವೀಯ ಗುಣಗಳನ್ನು ಹೊಂದಿರುವ ಇವರು ಕಲಾವಿದರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ. ಸ್ಪಷ್ಟವಾದ ಗುರಿ, ಆತ್ಮವಿಶ್ವಾಸ, ನಿಷ್ಠೆ, ಹೊಂದಾಣಿಕೆ, ಪ್ರಾಮಾಣಿಕತೆ, ಪರಿಶ್ರಮ, ಪ್ರೇರಣೆ, ಭರವಸೆ, ಸ್ವಾಭಿಮಾನ, ಆತ್ಮಸ್ಥೈರ್ಯ ಇವು ಪೂರ್ಣಿಮಾ ಅವರ ಯಶಸ್ಸಿನ ಗುಟ್ಟು. ಕೈಹಿಡಿದು, ಬದುಕ ಕಟ್ಟಿಕೊಂಡು ಕಷ್ಟ, ಸುಖಗಳಲ್ಲಿ ಸದಾ ಭಾಗಿಯಾಗಿ, ಜೀವನವನ್ನು ಮುನ್ನಡೆಸಿ, ಪ್ರೋತ್ಸಾಹಿಸುತ್ತಿರುವ ಪತಿ ಯತೀಶ್ ರೈ ಅವರ ಸಂಪೂರ್ಣ ಸಹಕಾರ, ಪ್ರೋತ್ಸಾಹವೇ ಪೂರ್ಣಿಮಾ ಅವರನ್ನು ಸಾಧನೆಯ ಸರದಾರರನ್ನಾಗಿ ಮಾಡಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಇವರಿಂದ ಇನ್ನಷ್ಟು ಕಲಾ ಸೇವೆ ನಡೆಯಲಿ. ಮತ್ತಷ್ಟು ಪ್ರತಿಭೆ ಹೊರಹೊಮ್ಮಲಿ. ಮಗದಷ್ಟು ಹೆಸರು-ಕೀರ್ತಿ ಲಭಿಸುತ್ತಿರಲಿ
ಎಂಬುದೇ ನಮ್ಮ ಆಶಯ.
ಪ್ರಪ್ರಥಮ ಬಾರಿಗೆ ಕಳೆದ ಎರಡು ವರ್ಷಗಳಿಂದ ಈ ಮಹಿಳಾ ಯಕ್ಷಗಾನ ತಂಡವನ್ನು ಮುಂಬಯಿಗೆ ಆಹ್ವಾನಿಸಿ ಪೂರ್ಣಿಮಾ ಯತೀಶ್ ಶೆಟ್ಟಿ ಅವರಂತಹ ಕಲಾವಿದೆಯರನ್ನು ಮುಂಬಯಿ ಕಲಾರಸಿಕರಿಗೆ ಪರಿಚಯಿಸಿದ ಹೆಗ್ಗಳಿಗೆ ಅಜೆಕಾರು ಕಲಾಭಿಮಾನಿ ಬಳಗಕ್ಕೆ ಸಲ್ಲುತ್ತದೆ. ಯಕ್ಷ ಪೂರ್ಣಿಮಾ ಅವರ ಸಿದ್ದಿ-ಸಾಧನೆಗಳಿಗೆ ಕರ್ನಾಟಕ ಸರಕಾರದ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕಲಾಸಾಧಕಿ ಪುರಸ್ಕಾರ, ಲಯನ್ಸ್ ಇಂಟರ್‌ನ್ಯಾಷನಲ್ ಅವಾರ್ಡ್, ಜೇಸಿಸ್‌ನ ಅತ್ಯುತ್ತಮ ಸಾಧಕಿ ಪುರಸ್ಕಾರ, ಸ್ಪಂಧನಾ ಪುರಸ್ಕಾರ, ಸಂಕ್ರಾಂತಿ ಪುರಸ್ಕಾರ, ಯಕ್ಷಧ್ರುವ ಪ್ರಶಸ್ತಿ, ಯುವ ಯಕ್ಷಕಲಾಧಕಿ ಪ್ರಶಸ್ತಿ, ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಸಾಧಕಿ ಪುರಸ್ಕಾರ, ಕರ್ನಾಟಕ, ಮುಂಬಯಿ, ದೆಹಲಿ ಸೇರಿದಂತೆ ದೇಶ-ವಿದೇಶಗಳ ವಿವಿಧ ಸಂಘಟನೆಗಳಿಂದ ಸಮ್ಮಾನ-ಪುರಸ್ಕಾರ, ವಿವಿಧ ಮಠಗಳ ಶ್ರೀಗಳ ಹಸ್ತದಿಂದ ಗೌರವಾರ್ಪಣೆ ಅಲ್ಲದೆ ಇವರ ನೇತೃತ್ವದ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಬಾಳ-ಕಾಟಿಪಳ್ಳ ಸಂಸ್ಥೆಗೆ ನೂರಾರು ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
ಡಾ| ದಿನೇಶ್ ಶೆಟ್ಟಿ ರೆಂಜಾಳ