ವಾಡಿ: ಜನರ ನೀರಿನ ದಾಹ ನೀಗಿಸುವ ಜಲಮೂಲಗಳು ಶುದ್ಧೀಕರಣಗೊಳ್ಳಬೇಕು. ನೆಲೆನಿಂತ ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗ ಹರಡುತ್ತವೆ. ಶುಚಿತ್ವ ಎಂಬುದು ಬದುಕಿನ ಭಾಗವಾಗಬೇಕು ಎಂದು ತಾಲೂಕು ವೈದ್ಯಾಧಿಕಾರಿ ಸುರೇಶ ಮೇಕಿನ್ ಹೇಳಿದರು.
ಮಲೇರಿಯಾ ಪೀಡಿತ ಲಕ್ಷಿಪುರವಾಡಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಸಾಂಕ್ರಾಮಿಕ ರೋಗ ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿ ಕುಟುಂಬಗಳಿಗೆ ಕೀಟನಾಶಕ ಸಂಸ್ಕೃರಿತ ಸೊಳ್ಳೆ ಪರದೆ ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ನೈರ್ಮಲ್ಯ ವ್ಯವಸ್ಥೆ ಕಾಪಾಡುವುದು ಅಗತ್ಯವಾಗಿದೆ. ಬಯಲು ಶೌಚಾಲಯ ಬಳಕೆಯಿಂದ ಹಾಗೂ ಮನೆ ಸುತ್ತಮುತ್ತ ತೆಗ್ಗು, ಚರಂಡಿ, ತೆಂಗಿನ ಚಿಪ್ಪು, ಟೈರ್‌ಗಳಲ್ಲಿ ಸಂಗ್ರಹವಾದ ನೀರಿನಲ್ಲಿ ಸೊಳ್ಳೆಗಳು ಹುಟ್ಟಿಕೊಳ್ಳುತ್ತವೆ. ಹಗಲು ಕಚ್ಚುವ ಸೊಳ್ಳೆಗಳಿಂದ ಡೆಂಘೀ ಮತ್ತು ಚಿಕೂನ್‌ಗುನ್ಯಾ ರೋಗ ಹರಡಿದರೆ, ರಾತ್ರಿ ವೇಳೆ ಕಚ್ಚುವ ಸೊಳ್ಳೆಗಳಿಂದ ಮಲೇರಿಯಾ ಜ್ವರ ಉಲ್ಬಣಗೊಳ್ಳುತ್ತವೆ.
ಇದರಿಂದ ಜೀವಕ್ಕೆ ಅಪಾಯವಿದ್ದು, ಪರಿಸರ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ಜಿಪಂ ಸದಸ್ಯ ಅಶೋಕ ಸಗರ ಮಾತನಾಡಿ, ಗ್ರಾಮದಲ್ಲಿ ಶುಚಿತ್ವ ನೆಲಕಚ್ಚಿದೆ. ಮಲೇರಿಯಾ ರೋಗದಿಂದ ಜನ ತತ್ತರಿಸುತ್ತಿದ್ದರೂ, ರಾವೂರ ಗ್ರಾಪಂ ಆಡಳಿತ ಕಿಂಚಿತ್ತೂ ಜವಾಬ್ದಾರಿ ಪ್ರದರ್ಶಿಸುತ್ತಿಲ್ಲ. ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಹಿಂದೇಟು ಹಾಕುತ್ತಿದೆ.
ಚರಂಡಿ ಸ್ವತ್ಛತೆಗೆ ಮುಂದಾಗಿಲ್ಲ. ಪರಿಣಾಮ ಇಡೀ ಗ್ರಾಮ ರೋಗಪೀಡಿತವಾಗಿದೆ. ಈ ಕುರಿತು ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು. ರಾವೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಿವಶರಣಪ್ಪ ಕಾಶೆಟ್ಟಿ ಮಾತನಾಡಿ, ಕಳೆದ ವರ್ಷ ಪತ್ತೆಯಾಗಿದ್ದ ಮಲೇರಿಯಾ ಪ್ರಕರಣಗಳನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದೇವೆ.
ಗ್ರಾಮದ ಸುತ್ತಲೂ ಕಲ್ಲುಗಣಿ ಪ್ರದೇಶವಿದ್ದು, ಗಣಿ ತ್ಯಾಜ್ಯಗಳ ಮಧ್ಯೆ ಸಂಗ್ರಹಗೊಂಡ ನೀರಿನಲ್ಲಿ ಗಪ್ಪಿ ಮತ್ತು ಗಂಬೂಸಿ ಮೀನುಗಳನ್ನು ಬಿಟ್ಟು ಸೊಳ್ಳೆ ಮೊಟ್ಟೆಗಳನ್ನು ಸಾಯಿಸಲಾಗುವುದು ಎಂದರು. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ| ಬಸವರಾಜ ಗುಳಗಿ, ಡಾ| ನಾಗಮ್ಮಾ ಗಡ್ಡದ್, ಡಾ| ಚಂದ್ರಮೌಳಿ, ಡಾ| ಚೇತನ್, ಜಿಲ್ಲಾ ವಿಬಿಡಿ ಸಮಾಲೋಚಕ ಕರ್ಣಿಕ ಕೋರೆ, ಪರಮೇಶ್ವರ,
ತಾಲುಕು ಮಲೇರಿಯಾ ಮೆಲ್ವಿಚಾರಕ ಸಲೀಂ, ಹಿರಿಯ ಆರೋಗ್ಯ ಸಹಾಯಕ ಹಸ್ನಾ ನಾಯಕ ರಾಠೊಡ, ಬಸವರಾಜ ಮಡ್ಡಿ, ಶಿಕ್ಷಕ ಸಿದ್ದಲಿಂಗ ಬಾಳಿ, ರಾಮಚಂದ್ರ ರಾಠೊಡ, ಅಶೋಕ ಚವ್ಹಾಣ, ಶ್ರಣಕುಮಾರ ಚವ್ಹಾಣ, ಈಶ್ವರ ಬಾಳಿ, ಲಕ್ಷಯ್ಯ ಚೌದರಿ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಚಾಮರಾಜ ದೊಡ್ಡಮನಿ ನಿರೂಪಿಸಿ, ವಂದಿಸಿದರು.