ಬೆಂಗಳೂರು: ರಾ ಜಿಎಸ್‌ಟಿ ಹೆಸರಿನಲ್ಲಿ ಖಾಸಗಿ ಕಂಪನಿಗೆ 9.60 ಕೋಟಿ ರೂ. ವಂಚಿಸಿರುವ ಪ್ರಕರಣ ಸಂಬಂಧ ಸಂಜಯನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಿಖೀಲ್ ಮತ್ತು ವಿನಯ್ ಬಾಬುರನ್ನು ಬಂಧಿಸಲಾಗಿದೆ. ಬಿ.ಕಾಂ. ಪದವಿ ಪಡೆದುಕೊಂಡಿರುವ ಆರೋಪಿಗಳು ಆಟೋ ಮೊಬೈಲ್ ಕಂಪನಿಯಲ್ಲಿ ಸಹಾಯಕ ಚಾರ್ಟೆಡೆ ಅಕೌಂಟೆಂಟ್ ಎಂದು ಹೇಳಿಕೊಂಡು ಕೆಲಸಪಡೆದುಕೊಂಡಿದ್ದರು. ನಂತರ ಕಂಪನಿಯ ವಹಿವಾಟಿನ ಕುರಿತು ವರದಿ ಸಿದ್ಧಪಡಿಸಿದ ಆರೋಪಿಗಳು, ಕಂಪನಿಯು ಕೋಟ್ಯಂತರ ರೂ. ವಹಿವಾಟು ನಡೆಸಿದ್ದು,ಅದಕ್ಕೆ ಪ್ರತಿಯಾಗಿ 9.60 ಕೋಟಿ ರೂ. ಜಿಎಸ್‌ಟಿ ಪಾವತಿ ಮಾಡಬೇಕೆಂದು ಸೂಚಿಸಿದ್ದಾರೆ.
ಅದರಂತೆ ಕಂಪನಿಮಾಲೀಕರು ಜಿಎಸ್‌ಟಿ ಪಾವತಿಸಲು ಆರೋಪಿಗಳಿಗೆ ಹಣ ನೀಡಿದ್ದಾರೆ. ಆದರೆ, ಬಂಧಿತರು ಈ ಹಣವನ್ನು ಜಿಎಸ್‌ಟಿ ಪಾವತಿ ಮಾಡದೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಖರೀದಿಸಿದ್ದಾರೆ. ಕೆಲ ದಿನ ಬಳಿಕ ಕಂಪನಿ ಮಾಲೀಕರು ಬೇರೆಡೆ ಲೆಕ್ಕಪರಿಶೋಧಕರ ಮೂಲಕ ಪರಿಶೀಲಿಸಿದಾಗ ಆರೋಪಿಗಳು ವಂಚಿಸಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನುಸಂಜಯನಗರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರು ಖರೀದಿಸಿದ್ದ ಮೂರು ಕೋಟಿರೂ. ಮೌಲ್ಯದ ಆಸ್ತಿ ಹಾಗೂ ವಿನಯ್ ಬಾಬುಖರೀದಿಸಿದ್ದ ಫ್ಲ್ಯಾಟ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.