ಪಗಡೆಯಾಟದಲ್ಲಿ ಸೋತ ಕಾರಣದಿಂದ ವನವಾಸ ಮತ್ತು ಅಜ್ಞಾತವಾಸದ ಶಿಕ್ಷೆಗೆ ಗುರಿಯಾದ ಪಾಂಡವರು, ಅಲೆಯುತ್ತ ಅಲೆಯುತ್ತ ಕಾಡಿಗೆ ಬಂದರು. ಬಹುದೂರ ನಡೆದಿದ್ದ ಕಾರಣದಿಂದ ಕುಂತಿ ಮತ್ತು ಪಾಂಡವರಿಗೆ ಹೆಜ್ಜೆ ಎತ್ತಿಡುವುದೇ ಕಷ್ಟವಾಯಿತು. ಭೀಮನು ಅವರೆಲ್ಲರನ್ನೂ ಎತ್ತಿಕೊಂಡು ಓಡಿದ. ಎಲ್ಲರಿಗೂ ಬಾಯಾರಿಕೆ. ಭೀಮನು ಅವರನ್ನು ಒಂದು ಮರದ ಕೆಳಗೆ ಕುಳ್ಳಿರಿಸಿ ಒಂದಿಷ್ಟು ನೀರನ್ನು ಉತ್ತರೀಯದಲ್ಲಿ ತಂದು ನೋಡುತ್ತಾನೆ! ಎಲ್ಲರೂ ಗಾಢವಾದ ನಿದ್ರೆಯಲ್ಲಿದ್ದಾರೆ. ಅರಮನೆಯಲ್ಲಿ ಸುಪ್ಪತ್ತಿಗೆಯ ಮೇಲೆ ಮಲಗುತ್ತಿದ್ದವರ ಈಗಿನ ಸ್ಥಿತಿ ನೋಡಿ ಭೀಮನಿಗೆ ಕಣ್ಣಿನಲ್ಲಿ ನೀರುಕ್ಕಿತು. ತಾನು ನಿದ್ರೆ ಮಾಡದೆ ಎಚ್ಚರವಾಗಿ ಕುಳಿತು ಕಾವಲಿದ್ದನು.
Advertisement
ಅಲ್ಲಿಂದ ಸ್ವಲ್ಪ ದೂರದಲ್ಲಿ ಒಂದು ಮರದ ಮೇಲೆ ಹಿಡಿಂಬನಿದ್ದನು. ಅವನಿಗೆ ಮನುಷ್ಯರ ವಾಸನೆ ಸಿಕ್ಕಿತು. ತನಗೆ ಆಹಾರ ಸಿಕ್ಕಿತೆಂದು ಸಂತೋಷದಿಂದ ತನ್ನ ತಂಗಿ ಹಿಡಿಂಬೆಯನ್ನು ಕೂಗಿ – “ಇಲ್ಲಿಂದ ಸ್ವಲ್ಪ ದೂರದಲ್ಲಿ ಮನುಷ್ಯರು ಇದ್ದಾರೆ. ಅವರು ಯಾರೆಂದು ನೋಡಿಕೊಂಡು ಬಾ’ ಎಂದ. ಭೀಮನನ್ನು ನೋಡುತ್ತಲೇ ಹಿಡಿಂಬೆಗೆ ಅವನನ್ನು ಮದುವೆಯಾಗಬೇಕೆಂದು ಆಸೆಯಾಯಿತು. ಸುಂದರ ಯುವತಿಯ ರೂಪ ಧರಿಸಿ ಅವನ ಬಳಿಗೆ ಹೋಗಿ ತಾನು ಯಾರು ಎಂದು ತಿಳಿಸಿ, “ನನ್ನ ಜೊತೆಗೆ ಬಾ, ನಾನು ಆಕಾಶದಲ್ಲಿ ಹೋಗಬಲ್ಲೆ, ಎಲ್ಲಿಯಾದರೂ ಸುಖವಾಗಿರೋಣ’ ಎಂದಳು.